ಉದ್ಯೋಗಸ್ಥ ಮಹಿಳೆಯರಿಗೆ ಹೂಡಿಕೆಗಿರುವ 5 ಅತ್ಯುತ್ತಮ ಆಯ್ಕೆಗಳು ಇವೇ ನೋಡಿ..
ಉದ್ಯೋಗಸ್ಥ ಮಹಿಳೆಯರು ದುಡಿದ ಹಣದಲ್ಲಿ ಒಂದಿಷ್ಟನ್ನು ಹೂಡಿಕೆ ಮಾಡೋದು ಅತ್ಯಗತ್ಯ. ಇದರಿಂದ ಭವಿಷ್ಯವನ್ನು ಆರ್ಥಿಕವಾಗಿ ಸುಭದ್ರಗೊಳಿಸಲು ಸಾಧ್ಯವಾಗುತ್ತದೆ. ಹಾಗಾದರೆ ಉದ್ಯೋಗಸ್ಥ ಮಹಿಳೆಯರಿಗೆ ಇರುವ 5 ಅತ್ಯುತ್ತಮ ಹೂಡಿಕೆಗಳು ಯಾವುವು? ಇಲ್ಲಿದೆ ಮಾಹಿತಿ.
ನವದೆಹಲಿ (ಅ.31): ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಣಕಾಸಿನ ಭದ್ರತೆ ಹಾಗೂ ಆರ್ಥಿಕ ಸ್ವಾತಂತ್ರ್ಯದ ಮಹತ್ವವನ್ನು ಅವರು ಮನಗಂಡಿದ್ದಾರೆ ಕೂಡ. ದುಡಿಯುವ ಮಹಿಳೆ ಗಳಿಕೆಯಲ್ಲಿನ ಒಂದಿಷ್ಟು ಹಣವನ್ನು ಉಳಿತಾಯ ಮಾಡಲು ಕೂಡ ಬಯಸುತ್ತಿದ್ದಾಳೆ. ಕೆಲವೊಂದು ವರದಿಗಳ ಪ್ರಕಾರ ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಹೂಡಿಕೆ ಮಾಡೋರ ಸಂಖ್ಯೆ ಕಡಿಮೆಯಿದೆ. ಗಳಿಸಿದ ಹಣವನ್ನು ಸೂಕ್ತ ವಿಧಾನದಲ್ಲಿ ಬಳಸೋದು ಕೂಡ ಅತ್ಯಗತ್ಯ. ಹೀಗಾಗಿ ಮಹಿಳೆಯರು ಕೂಡ ದುಡಿದ ಹಣವನ್ನು ಸೂಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸೋದು ಅಗತ್ಯ. ಹಾಗಾದ್ರೆ ಭಾರತದಲ್ಲಿ ಮಹಿಳೆಯರು ಹಣಕಾಸಿನ ಸ್ವಾತಂತ್ರ್ಯ ಗಳಿಸಲು ಇರುವ ಐದು ಪ್ರಮುಖ ಹೂಡಿಕೆ ಆಯ್ಕೆಗಳು ಯಾವುವು? ಇಲ್ಲಿದೆ ಮಾಹಿತಿ.
1.ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್): ಹೂಡಿಕೆ ಮಾಡಲು ಬಯಸುವ ಮಹಿಳೆಯರಿಗೆ ಎನ್ ಪಿಎಸ್ ಅತ್ಯುತ್ತಮ ಆಯ್ಕೆಯಾಗಿದೆ. ಮಾರುಕಟ್ಟೆ ಲಿಂಕ್ಡ್ ಉಳಿತಾಯ ಕಾರ್ಯಕ್ರಮವಾದ ಎನ್ ಪಿಎಸ್ ನಿವೃತ್ತಿಗಾಗಿ ಉಳಿತಾಯ ಮಾಡೋರಿಗೆ ಅತ್ಯುತ್ತಮ ಯೋಜನೆಯಾಗಿದೆ. ಎನ್ ಪಿಎಸ್ ನಲ್ಲಿ ಒಬ್ಬ ವ್ಯಕ್ತಿ ಹೂಡಿಕೆ ಮಾಡಿದ ಹಣವನ್ನು ಈಕ್ವಿಟಿ, ಕಾರ್ಪೋರೇಟ್ ಬಾಂಡ್ಸ್, ಲಿಕ್ವಿಡ್ ಫಂಡ್ಸ್, ಸರ್ಕಾರಿ ಬಾಂಡ್ ಗಳು ಹಾಗೂ ಸ್ಥಿರ ಹಣಕಾಸಿನ ಸಾಧನಗಳು ಸೇರಿದಂತೆ ಎನ್ ಪಿಎಸ್ ಯೋಜನೆಯಡಿಯಲ್ಲಿನ ವಿವಿಧ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇನ್ನು ಎನ್ ಪಿಎಸ್ ಪಿಎಫ್ ಆರ್ ಡಿಎ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ. ಎನ್ ಪಿಎಸ್ ಕೊಡುಗೆ ಮೇಲೆ ತೆರಿಗೆ ಕಡಿತ, ನಿವೃತ್ತಿ ಬಳಿಕದ ವಿತ್ ಡ್ರಾ ಮೇಲೆ ತೆರಿಗೆ ವಿನಾಯ್ತಿ ಸೇರಿದಂತೆ ಅನೇಕ ತೆರಿಗೆ ಪ್ರಯೋಜನಗಳನ್ನು ಕೂಡ ಒಳಗೊಂಡಿದೆ.
ಇಂದು ವಿಶ್ವ ಉಳಿತಾಯ ದಿನ; ಖರ್ಚು ತಗ್ಗಿಸಿ ಉಳಿತಾಯ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ..
2.ಸ್ಥಿರ ಠೇವಣಿ: ಸ್ಥಿರ ಠೇವಣಿ ಹೂಡಿಕೆಗಳು ನಿಮ್ಮ ಹಣವನ್ನು ಸುರಕ್ಷಿತವಾಗಿಡಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿವೆ. ಇವು ನಿಮಗೆ ಹಣ ಉಳಿತಾಯ ಮಾಡಲು ಮಾತ್ರವಲ್ಲ, ಬದಲಿಗೆ ಅದರಿಂದ ಗಮನಾರ್ಹ ಪ್ರಮಾಣದಲ್ಲಿ ಆದಾಯ ಗಳಿಸಲು ಕೂಡ ನೆರವು ನೀಡುತ್ತವೆ. ಬ್ಯಾಂಕ್ ಎಫ್ ಡಿ ಬಡ್ಡಿದರಗಳು ಠೇವಣಿದಾರರಿಗೆ ಹೂಡಿಕೆ ಮೇಲೆ ಉತ್ತಮ ರಿಟರ್ನ್ಸ್ ಪಡೆಯಲು ನೆರವು ನೀಡುತ್ತವೆ.
3.ಮ್ಯೂಚುವಲ್ ಫಂಡ್ ಎಸ್ ಐಪಿ: ಇದು ಮಹಿಳೆಯರಿಗಿರುವ ಇನ್ನೊಂದು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ. ನಿಮ್ಮ ಹಣಕಾಸಿನ ಉದ್ದೇಶಗಳನ್ನು ಆಧರಿಸಿ ಈಕ್ವಿಟಿ, ಡೆಟ್ ಅಥವಾ ಹೈಬ್ರೀಡ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ದೀರ್ಘಕಾಲದ ಹೂಡಿಕೆಗೆ ಇವು ಅತ್ಯುತ್ತಮ ಮಾರ್ಗಗಳಾಗಿವೆ. ಒಂದು ವೇಳೆ ನೀವು ಈಗಷ್ಟೇ ಹೂಡಿಕೆ ಪ್ರಾರಂಭಿಸುತ್ತಿದ್ದರೆ ಮ್ಯೂಚುವಲ್ ಫಂಡ್ ಎಸ್ ಐಪಿ ಅತ್ಯುತ್ತಮ ವಿಧಾನವಾಗಿದೆ.
4.ಚಿನ್ನ: ಚಿನ್ನ ಕೂಡ ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಅದರಲ್ಲೂ ಮಹಿಳೆಯರಿಗೆ ಚಿನ್ನ ಇಷ್ಟವಾಗದೆ ಇರಲು ಸಾಧ್ಯವೇ? ಚಿನ್ನದ ಮೌಲ್ಯವನ್ನು ಮಹಿಳೆಯರಿಗಿಂತ ಚೆನ್ನಾಗಿ ಬೇರೆ ಯಾರು ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಚಿನ್ನದ ಆಭರಣಗಳು, ನಾಣ್ಯಗಳು, ಬಾರ್ ಗಳು, ಚಿನ್ನದ ವಿನಿಮಯ ಟ್ರೇಡೆಡ್ ಫಂಡ್ಸ್, ಗೋಲ್ಡ್ ಫಂಡ್ಸ್, ಸಾವರಿನ್ ಗೋಲ್ಡ್ ಬಾಂಡ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬಹುದು.
ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9000ರೂ. ಆದಾಯ ಗ್ಯಾರಂಟಿ!
5.ಆರೋಗ್ಯ ವಿಮೆ: ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡೋದು ಅತ್ಯಗತ್ಯ. ಉದ್ಯೋಗಸ್ಥ ಮಹಿಳೆಯರು ತಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಆರೋಗ್ಯ ವಿಮೆ ಖರೀದಿಸಲು ಮರೆಯಬಾರದು. ಇದರಿಂದ ಆರೋಗ್ಯ ವೆಚ್ಚಗಳಿಗೆ ಉಳಿತಾಯದ ಹಣದಲ್ಲಿ ದೊಡ್ಡ ಮೊತ್ತವನ್ನು ವ್ಯಯಿಸೋದು ತಪ್ಪುತ್ತದೆ. ಅಲ್ಲದೆ, ಆರೋಗ್ಯ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಉಳಿತಾಯ ಮಾಡುತ್ತವೆ.