Asianet Suvarna News Asianet Suvarna News

ಇಂದು ವಿಶ್ವ ಉಳಿತಾಯ ದಿನ; ಖರ್ಚು ತಗ್ಗಿಸಿ ಉಳಿತಾಯ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ..

ಹಣ ಗಳಿಸೋದು ಕಷ್ಟದ ಕೆಲಸ. ಆದರೆ, ಖರ್ಚು ಮಾಡೋದು ತುಂಬಾ ಸುಲಭ. ಇಂದಿನ ದುಬಾರಿ ದುನಿಯಾದಲ್ಲಿ ಹಣ ಉಳಿಸೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಹೀಗಾಗಿ ವಿಶ್ವ ಉಳಿತಾಯದ ದಿನದ ಈ ಸಂದರ್ಭದಲ್ಲಿ ಖರ್ಚನ್ನು ಕಡಿಮೆ ಮಾಡಿ ಹಣ ಉಳಿಸೋದು ಹೇಗೆ ಎಂಬ ಬಗ್ಗೆ ತಿಳಿಯೋಣ. 
 

World Savings Day How to celebrate and tips to save money anu
Author
First Published Oct 30, 2023, 10:25 AM IST

Business Desk: ಇಂದು 'ವಿಶ್ವ ಉಳಿತಾಯ ದಿನ'. ಇದನ್ನು 'ವಿಶ್ವ ಮಿತವ್ಯಯದ ದಿನ' ಎಂದು ಕೂಡ ಕರೆಯಲಾಗುತ್ತದೆ. 1924ರಲ್ಲಿ ಮೊದಲ ಅಂತಾರಾಷ್ಟ್ರೀಯ ಉಳಿತಾಯ ಬ್ಯಾಂಕ್ ಕಾಂಗ್ರೆಸ್ ಸಮಯದಲ್ಲಿ ಈ ದಿನ ಜನ್ಮ ತಾಳಿತು. ಅಕ್ಟೋಬರ್ 24ರಂದು ಪ್ರಾರಂಭವಾಗಿದ್ದ ಈ ಸಭೆ ಅಕ್ಟೋಬರ್ 30ರಂದು ಮುಕ್ತಾಯವಾಯಿತು. ಈ ಸಮಯದಲ್ಲಿ ಅಕ್ಟೋಬರ್ 30ರಂದು 'ವಿಶ್ವ ಉಳಿತಾಯದ ದಿನ' ಆಚರಿಸುವ ನಿರ್ಣಯಕ್ಕೆ ಅನುಮೋದನೆ ನೀಡಲಾಯಿತು. ಹಣ ಉಳಿತಾಯದ ಮಹತ್ವದ ಜೊತೆಗೆ ಬ್ಯಾಂಕುಗಳು ಹಾಗೂ ಇತರ ಮಾರ್ಗಗಳ ಮೂಲಕ ಹೇಗೆ ಉಳಿತಾಯ ಮಾಡೋದು ಎಂಬ ವಿಚಾರಕ್ಕೆ ಪ್ರತಿವರ್ಷ ಹೆಚ್ಚಿನ ಒತ್ತು ನೀಡುವ ಸಲುವಾಗಿ ಈ ದಿನ ಆಚರಿಸಲಾಗುತ್ತದೆ. ಆದರೆ, ಮೊದಲನೇ ವಿಶ್ವ ಯುದ್ಧದ ಬಳಿಕ ಆಚರಣೆ ಮಹತ್ವ ಕಳೆದುಕೊಂಡಿತು. ಆದರೆ,ಎರಡನೇ ವಿಶ್ವ ಯುದ್ಧದ ಬಳಿಕ ಈ ದಿನಾಚರಣೆ ಮತ್ತೆ ಮಹತ್ವ ಪಡೆದುಕೊಂಡಿತು. ಶಾಲೆಗಳು, ಕಾಲೇಜುಗಳು ಹಾಗೂ ಸಾರ್ವಜನಿಕ ಮತ್ತು ಖಾಸಗಿ ಕಚೇರಿಗಳಲ್ಲಿ ಉಳಿತಾಯದ ಮಹತ್ವ ಸಾರುವ ಅಜೆಂಡಾವನ್ನು ಉತ್ತೇಜಿಸಲು ಕಾಂಗ್ರೆಸ್ ನಲ್ಲಿ ಅನುಮತಿ ನೀಡಲಾಗಿತ್ತು. ಪ್ರತಿವರ್ಷ ಈ ದಿನವನ್ನು ಅಕ್ಟೋಬರ್ 31ರಂದು ಅಧಿಕೃತವಾಗಿ ಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಾತ್ರ ಅಕ್ಟೋಬರ್ 30ರಂದು ಆಚರಿಸಲಾಗುತ್ತದೆ. ಅಕ್ಟೋಬರ್ 31ರಂದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ನಿಧನರಾಗಿದ್ದರು. ಹೀಗಾಗಿ ವಿಶ್ವ ಉಳಿತಾಯ ದಿನವನ್ನು ಅಕ್ಟೋಬರ್ 30ರಂದು ಆಚರಿಸುವ ಪರಿಪಾಠ ಬೆಳೆದು ಬಂದಿದೆ.

ಈ ವರ್ಷದ ಧ್ಯೇಯ ಏನು?
'ವಿಶ್ವ ಉಳಿತಾಯದ ದಿನ 2023'ಕ್ಕೆ ಅಂತಾರಾಷ್ಟ್ರೀಯ ಉಳಿತಾಯಗಳ ಬ್ಯಾಂಕ್ ಕಾಂಗ್ರೆಸ್ ಧ್ಯೇಯ 'ಉಳಿತಾಯದ ಮೂಲಕ ನಿಮ್ಮ ನಾಳೆಗಳನ್ನು ಜಯಿಸಿ.' ಹಣ ಉಳಿತಾಯ ಮಾಡೋದು ಪ್ರಮುಖ ಹಣಕಾಸಿನ ಕೌಶಲ್ಯವಾಗಿದೆ. ಇದು ನಿಮ್ಮ ಹಣಕಾಸಿನ ಗುರಿಗಳನ್ನು ತಲುಪಲು, ತುರ್ತುನಿಧಿ ಸ್ಥಾಪನೆ ಹಾಗೂ ಸುಭದ್ರ ಭವಿಷ್ಯ ನಿರ್ಮಾಣಕ್ಕೆ ನಿಮಗೆ ನೆರವು ನೀಡುತ್ತವೆ. ಹಣವನ್ನು ಸುರಕ್ಷಿತವಾಗಿ ಉಳಿತಾಯ ಮಾಡಲು ನೆರವು ನೀಡುವ ಕೆಲವು ಟಿಪ್ಸ್ ಇಲ್ಲಿವೆ.

ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9000ರೂ. ಆದಾಯ ಗ್ಯಾರಂಟಿ!

*ಗುರಿಗಳು ಸ್ಪಷ್ಟವಾಗಿರಲಿ: ನಿಮ್ಮ ಹಣಕಾಸಿನ ಗುರಿಗಳು ಸ್ಪಷ್ಟವಾಗಿರಲಿ. ಅಂದರೆ ಯಾವ ಉದ್ದೇಶಕ್ಕೆ ನೀವು ಉಳಿತಾಯ ಮಾಡಲು ಬಯಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಪ್ರವಾಸಕ್ಕೆ, ತುರ್ತು ನಿಧಿ, ಮನೆ ಖರೀದಿ ಡೌನ್ ಪೇಮೆಂಟ್ ಅಥವಾ ನಿವೃತ್ತಿ ಹೀಗೆ ಯಾವ ಕಾರಣಕ್ಕೆ ಉಳಿತಾಯ ಮಾಡಲು ಬಯಸುತ್ತೀರಿ ಎಂಬ ಸ್ಪಷ್ಟತೆ ಇರಲಿ.

*ಬಜೆಟ್ ಸಿದ್ಧಪಡಿಸಿ: ನಿಮ್ಮ ಆದಾಯ ಹಾಗೂ ವೆಚ್ಚಗಳನ್ನು ಪರಿಗಣಿಸಿ ಮಾಸಿಕ ಬಜೆಟ್ ಸಿದ್ಧಪಡಿಸಿ. ಇದು ನಿಮಗೆ ನಿಮ್ಮ ಹಣ ಎಲ್ಲಿ ಖರ್ಚಾಯಿತು ಹಾಗೂ ಎಲ್ಲಿ ನೀವು ವೆಚ್ಚ ಕಡಿತಗೊಳಿಸಬಹುದು ಎಂಬ ಮಾಹಿತಿ ಪಡೆಯಲು ನೆರವು ನೀಡುತ್ತದೆ.

*ವೆಚ್ಚದ ಮೇಲೆ ಹಿಡಿತ ಸಾಧಿಸಿ: ನಿಮ್ಮ ವೆಚ್ಚಗಳನ್ನು ಒಂದು ಪುಸ್ತಕದಲ್ಲಿ ಬರೆದಿಡಿ ಅಥವಾ ಬಜೆಟಿಂಗ್ ಅಪ್ಲಿಕೇಷನ್ ನಲ್ಲಿ ಉಳಿಸಿಡಿ. ಇನ್ನು ನಿಮ್ಮ ವೆಚ್ಚವನ್ನು ಎಲ್ಲಿ ಕಡಿತಗೊಳಿಸಬಹುದು ಎಂಬ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸಿ.

*ಅಟೋಮ್ಯಾಟ್ ಉಳಿತಾಯದ ಸೌಲಭ್ಯ ಕಲ್ಪಿಸಿ: ನಿಮ್ಮ ವೇತನ ಖಾತೆಯಿಂದ ಉಳಿತಾಯ ಖಾತೆಗೆ ಹಣ ಅಟೋಮ್ಯಾಟ್ ಆಗಿ ವರ್ಗಾವಣೆ ಆಗುವಂತೆ ಮಾಡಿ. ಇದು ನಿಮ್ಮ ಆದಾಯದ ಒಂದು ಭಾಗ ನೇರವಾಗಿ ನಿಮ್ಮ ಉಳಿತಾಯ ಖಾತೆಗೆ ಹೋಗುವಂತೆ ಮಾಡುತ್ತದೆ. ಇದರಿಂದ ನೀವು ವೆಚ್ಚ ಮಾಡುವ  ಮುನ್ನ ಹಣದ ಉಳಿತಾಯವಾಗುತ್ತದೆ.

ಸಣ್ಣ ಉಳಿತಾಯ ಖಾತೆಗೆ ಆಧಾರ್, ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಒಂದು ತಿಂಗಳ ಅವಕಾಶ ನೀಡಿದ ಅಂಚೆ ಇಲಾಖೆ

*ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿ: ನಿಮ್ಮ ತಿಂಗಳ ಬಿಲ್ ಗಳನ್ನು ಪರಿಶೀಲಿಸಿ ಹಾಗೂ ಅದನ್ನು ತಗ್ಗಿಸುವ ಮಾರ್ಗಗಳ ಬಗ್ಗೆ ಯೋಚಿಸಿ. ಅನಗತ್ಯ ವಸ್ತುಗಳ ಖರೀದಿ ನಿಲ್ಲಿಸೋದು, ಹೋಟೆಲ್ ಅಥವಾ ರೆಸ್ಟೋರೆಂಟ್ ಭೇಟಿ ತಗ್ಗಿಸೋದು ಮುಂತಾದ ಕ್ರಮಗಳ ಮೂಲಕ ಖರ್ಚನ್ನು ತಗ್ಗಿಸಬಹುದು.

ಜಾಣತನದ ಖರೀದಿ: ಖರೀದಿ ಮಾಡುವ ಸಂದರ್ಭದಲ್ಲಿ ಡಿಸ್ಕೌಂಟ್ಸ್, ಕೂಪನ್ಸ್ ಹಾಗೂ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಗಮನಿಸಿ. ಇದರಿಂದ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
 

Follow Us:
Download App:
  • android
  • ios