ತೆರಿಗೆದಾರರೇ ಗಮನಿಸಿ; ಆದಾಯ ತೆರಿಗೆಯ ಈ 4 ಕೆಲಸಗಳನ್ನು ಪೂರ್ಣಗೊಳಿಸಲು ಮಾ.31 ಅಂತಿಮ ಗಡುವು
2022-23ನೇ ಆರ್ಥಿಕ ಸಾಲು ಕೊನೆಗೊಳ್ಳಲು ಕೇವಲ ಒಂದು ದಿನ ಬಾಕಿ ಉಳಿದಿದೆ. ಇದು ಅನೇಕ ಕೆಲಸಗಳಿಗೆ ಅಂತಿಮ ಗಡುವಿನ ದಿನ ಕೂಡ ಹೌದು. ಆದಾಯ ತೆರಿಗೆಗೆ ಸಂಬಂಧಿಸಿದ ನಾಲ್ಕು ಪ್ರಮುಖ ಕೆಲಸಗಳನ್ನು ನೀವು ಮಾ.31ರೊಳಗೆ ಪೂರ್ಣಗೊಳಿಸೋದು ಅಗತ್ಯ. ಇಲ್ಲವಾದರೆ ಮುಂದೆ ಸಮಸ್ಯೆ ಎದುರಾಗುತ್ತದೆ.
Business Desk:2022-23ನೇ ಆರ್ಥಿಕ ಸಾಲು ಕೊನೆಗೊಳ್ಳಲು ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಹೊಸ ಹಣಕಾಸು ವರ್ಷದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. 2023ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳು ಏ.1ರಿಂದ ಜಾರಿಗೆ ಬರಲಿವೆ. ಹೂಡಿಕೆ, ಉಳಿತಾಯಕ್ಕೆ ಸಂಬಂಧಿಸಿದ ಕೆಲವು ಯೋಜನೆಗಳಲ್ಲಿ ಬದಲಾವಣೆಯಾಗಲಿದೆ. ಹಾಗೆಯೇ ಒಂದಿಷ್ಟು ವಸ್ತುಗಳು ದುಬಾರಿಯಾದ್ರೆ, ಇನ್ನೊಂದಿಷ್ಟು ವಸ್ತುಗಳು ಅಗ್ಗವಾಗಲಿವೆ. ಹಾಗೆಯೇ ಹಣಕಾಸಿಗೆ ಸಂಬಂಧಿಸಿದ ಕೆಲವೊಂದು ಕಾರ್ಯಗಳನ್ನು ಪೂರ್ಣಗೊಳಿಸಲು ಮಾ.31 ಅಂತಿಮ ಗಡುವಾಗಿದೆ. ಇನ್ನು ಕೆಲವು ಕಾರ್ಯಗಳಿಗೆ ಈ ಹಿಂದೆ ಮಾ.31ರ ಗಡುವು ನೀಡಲಾಗಿತ್ತು. ಆದರೆ, ಅದನ್ನು ವಿಸ್ತರಣೆ ಮಾಡಲಾಗಿದೆ. ಉದಾಹರಣೆಗೆ ಪ್ಯಾನ್-ಆಧಾರ್ ಕಾರ್ಡ್ ಜೋಡಣೆಗೆ ಮಾ.31ರ ಗಡುವು ನೀಡಲಾಗಿತ್ತು. ಆದರೆ ಈಗ ಈ ಗಡುವನ್ನು ವಿಸ್ತರಿಸಲಾಗಿದೆ. ಆದರೆ, ಆದಾಯ ತೆರಿಗೆಗೆ ಸಂಬಂಧಿಸಿದ ಒಂದಿಷ್ಟು ಕೆಲಸಗಳನ್ನು ನೀವು ಮಾ.31ರೊಳಗೆ ಮಾಡಿ ಮುಗಿಸಲೇಬೇಕು. ಇಲ್ಲವಾದ್ರೆ ತೊಂದರೆ ತಪ್ಪಿದ್ದಲ್ಲ. ದಂಡದ ಜೊತೆಗೆ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಹಾಗಾದ್ರೆ ಆದಾಯ ತೆರಿಗೆಗೆ ಸಂಬಂಧಿಸಿದ ಯಾವೆಲ್ಲ ಕೆಲಸಗಳನ್ನು ನೀವು ಮಾ.31ರೊಳಗೆ ಮಾಡಿ ಮುಗಿಸಬೇಕು? ಇಲ್ಲಿದೆ ಮಾಹಿತಿ.
ತೆರಿಗೆ ಉಳಿತಾಯ ಹೂಡಿಕೆ: ತೆರಿಗೆ ಉಳಿತಾಯ ಮಾಡಲು ಯಾವುದಾದರೂ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ಯೋಚಿಸಿದ್ದರೆ ಆ ಕೆಲಸ ಮಾಡಿ ಮುಗಿಸಲು ನಾಳೆ ಒಂದೇ ದಿನ ಬಾಕಿ ಉಳಿದಿದೆ. 2022-2023ನೇ ಆರ್ಥಿಕ ಸಾಲಿಗೆ ತೆರಿಗೆ ಉಳಿತಾಯ ಮಾಡಲು ಯಾವುದಾದರೂ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದ್ರೆ ಅದಕ್ಕೆ ಮಾ.31 ಅಂತಿಮ ಗಡುವು. ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಹಾಗೂ 80ಡಿ ಅಡಿಯಲ್ಲಿ 1.5ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಪಡೆಯಬಹುದು.
ಏ.1ರಿಂದ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಬದಲಾವಣೆ; ಮಹಿಳೆಯರಿಗೆ ಹೊಸ ಉಳಿತಾಯ ಯೋಜನೆ ಪ್ರಾರಂಭ
ಮುಂಗಡ ತೆರಿಗೆ ಪಾವತಿ: ಟಿಡಿಎಸ್/ಟಿಸಿಎಸ್ ಹಾಗೂ ಮ್ಯಾಟ್ ಕಡಿ ಮಾಡಿದ ಬಳಿಕವೂ ಯಾರ ವಾರ್ಷಿಕ ತೆರಿಗೆ ಬಾಕಿ 10 ಸಾವಿರ ರೂ.ಗಿಂತ ಹೆಚ್ಚಿರುತ್ತದೋ ಅವರು ನಾಲ್ಕು ಕಂತುಗಳಲ್ಲಿ ಮುಂಗಡ ತೆರಿಗೆ ಪಾವತಿಸಬೇಕು. 2022-23ನೇ ಆರ್ಥಿಕ ಸಾಲಿಗೆ ತೆರಿಗೆದಾರರು 2023ರ ಮಾ.15ರೊಳಗೆ ಶೇ.100ರಷ್ಟು ಮುಂಗಡ ತೆರಿಗೆ ಪಾವತಿಸಬೇಕು. ಒಂದು ವೇಳೆ ನೀವು ಇನ್ನೂ ಮುಂಗಡ ತೆರಿಗೆ ಪಾವತಿಸದಿದ್ರೆ ಮಾ.31ರೊಳಗೆ ಕಡ್ಡಾಯವಾಗಿ ಪಾವತಿಸಬೇಕು. ಒಂದು ವೇಳೆ ನೀವು ಮಾ.31ರೊಳಗೆ ಮುಂಗಡ ತೆರಿಗೆ ಪಾವತಿಸದಿದ್ರೆ ನಿಮಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಎಲೆಕ್ಟ್ರಿಕ್ ವಾಹನ ಖರೀದಿ ಸಾಲಕ್ಕೆ ಬಡ್ಡಿ ಪ್ರಯೋಜನ: ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಎಲೆಕ್ಟ್ರಿಕ್ ವಾಹನ ಖರೀದಿಗಾಗಿ ಸಾಲ ಮಾಡಿದ್ರೆ ಅದರ ಮೇಲೆ ಸೆಕ್ಷನ್ 80 EEB ಅಡಿಯಲ್ಲಿ ಬಡ್ಡಿ ಪ್ರಯೋಜನ ಪಡೆಯಲು ಮಾ.31 ಅಂತಿಮ ದಿನಾಂಕವಾಗಿದೆ.
ಐಟಿಆರ್ ಅಪ್ಡೇಟ್: 2019-20ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಈ ತನಕ ಅಪ್ಡೇಟ್ ಮಾಡದವರು ಅದನ್ನು 2023ರ ಮಾ.31ರೊಳಗೆ ಮಾಡಿ ಮುಗಿಸಬೇಕು.
ಮಾ.31ಕ್ಕೆ ಕೊನೆಗೊಳ್ಳಲಿವೆ ಈ ನಾಲ್ಕು ಬ್ಯಾಂಕ್ ಗಳ ವಿಶೇಷ FD ಯೋಜನೆಗಳು
2023ರ ಏಪ್ರಿಲ್ 1ರಿಂದ ತೆರಿಗೆದಾರರು ತಮ್ಮ ಸ್ವಂತ ಆದಾಯ ಹಾಗೂ ಇತರ ಮೂಲಗಳಿಂದ ಗಳಿಸಿದ ಆದಾಯದ ಮೇಲೆ ಪಾವತಿಸುವ ತೆರಿಗೆ ದರದಲ್ಲಿ ಬದಲಾವಣೆ ಆಗಲಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಗರಿಷ್ಠ ಹೂಡಿಕೆ ಮಿತಿಯನ್ನು 15ಲಕ್ಷ ರೂ.ನಿಂದ 30ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹೀಗಾಗಿ ತೆರಿಗೆದಾರರು ಏಪ್ರಿಲ್ 1ರಿಂದ ಆದಾಯ ತೆರಿಗೆ ವ್ಯವಸ್ಥೆಯಲ್ಲಿನ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ.