ಮಾ.31ಕ್ಕೆ ಕೊನೆಗೊಳ್ಳಲಿವೆ ಈ ನಾಲ್ಕು ಬ್ಯಾಂಕ್ ಗಳ ವಿಶೇಷ FD ಯೋಜನೆಗಳು
ಹಿರಿಯ ನಾಗರಿಕರಿಗೆ ಕೆಲವು ಬ್ಯಾಂಕ್ ಗಳು ವಿಶೇಷ ಎಫ್ ಡಿ ಯೋಜನೆಗಳನ್ನು ರೂಪಿಸಿವೆ. ಎಸ್ ಬಿಐ, ಐಡಿಬಿಐ, ಎಚ್ ಡಿಎಫ್ ಸಿ, ಇಂಡಿಯನ್ ಬ್ಯಾಂಕಿನ ಈ ವಿಶೇಷ ಎಫ್ ಡಿಗಳು ಮಾ.31ಕ್ಕೆ ಅಂತ್ಯಗೊಳ್ಳಲಿವೆ.
Business Desk:ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕಳೆದ ಒಂದು ವರ್ಷದ ಅವಧಿಯಲ್ಲಿ ರೆಪೋ ದರಲ್ಲಿ ಭಾರೀ ಏರಿಕೆ ಮಾಡಿದೆ. ಇದರಿಂದ ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದವರಿಗೆ ಉತ್ತಮ ಬಡ್ಡಿ ಸಿಗುತ್ತಿದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಅಂದರೆ 60 ವರ್ಷ ಮೇಲ್ಪಟ್ಟವರಿಗೆ ಕೆಲವು ಬ್ಯಾಂಕ್ ಗಳು ವಿಶೇಷ ಸ್ಥಿರ ಠೇವಣಿ ಅಥವಾ ಎಫ್ ಡಿಗಳನ್ನು ಹೊಂದಿವೆ. ಅಲ್ಲದೆ, ಕೋವಿಡ್-19 ಪೆಂಡಾಮಿಕ್ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕುಗಳು ಹಿರಿಯ ನಾಗರಿಕರಿಗೆ ನೆರವಾಗಲು ಅಧಿಕ ಬಡ್ಡಿದರ ನೀಡೋ ವಿಶೇಷ ಸ್ಥಿರ ಠೇವಣಿಗಳನ್ನು ಪ್ರಾರಂಭಿಸಿದ್ದವು. ವಿಶೇಷ ಎಫ್ ಡಿ (ಎಫ್ ಡಿ) ಯೋಜನೆಯನ್ನು ಅಲ್ಪಾವಧಿಗೆ ಪ್ರಾರಂಭಿಸಲಾಗಿತ್ತು, ಆದ್ರೆ ತೆರಿಗೆ ವ್ಯವಸ್ಥೆ ಮೇಲೆ ಕೋವಿಡ್ -19 ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಈ ಯೋಜನೆಯನ್ನು ವಿಸ್ತರಿಸಿದ್ದವು. ಆದರೆ, ಈಗ ಈ ವಿಶೇಷ ಎಫ್ ಡಿಗಳನ್ನು ಕೆಲವು ಬ್ಯಾಂಕ್ ಗಳು ಕೊನೆಗೊಳಿಸಲಿವೆ. 2023ರ ಮಾ.31ರ ಬಳಿಕ ಈ ವಿಶೇಷ ಎಫ್ ಡಿಗಳು ಲಭಿಸೋದಿಲ್ಲ. ಆರ್ ಬಿಐ ರೆಪೋ ದರ ಏರಿಕೆ ಬೆನ್ನಲ್ಲೇ ಈ ವಿಶೇಷ ಎಫ್ ಡಿಗಳ ಮೇಲಿನ ಬಡ್ಡಿದರದಲ್ಲಿ ಭಾರೀ ಏರಿಕೆಯಾಗಿತ್ತು. ಹಾಗಾದ್ರೆ ಯಾವೆಲ್ಲ ಬ್ಯಾಂಕ್ ಗಳು ವಿಶೇಷ ಎಫ್ ಡಿ ಯೋಜನೆಗಳನ್ನು ಕೊನೆಗೊಳಿಸಲಿವೆ? ಇಲ್ಲಿದೆ ಮಾಹಿತಿ.
ಎಸ್ ಬಿಐ ಅಮೃತ್ ಕಲಶ ಠೇವಣಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಇತ್ತೀಚೆಗಷ್ಟೇ ಎಸ್ ಬಿಐ ಅಮೃತ್ ಕಲಶ್ ಯೋಜನೆ ಪರಿಚಯಿಸಿದೆ. ಇದು ನಿಗದಿತ ಅವಧಿಯ ಸ್ಥಿರ ಠೇವಣಿಯಾಗಿದೆ. ಗ್ರಾಹಕರಿಗೆ ಅತ್ಯಾಕರ್ಷಕ ರಿಟರ್ನ್ಸ್ ಕೂಡ ನೀಡುತ್ತಿದೆ. ಈ ಯೋಜನೆ ಸಾಮಾನ್ಯ ನಾಗರಿಕರಿಗೆ ಶೇ.7.10 ಬಡ್ಡಿದರ ಒದಗಿಸುತ್ತಿದೆ. ಇನ್ನು ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ.0.50ರಷ್ಟು ಬಡ್ಡಿದರ ನೀಡುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ ಶೇ.7.60ರಷ್ಟು ರಿಟರ್ನ್ ಸಿಗುತ್ತಿದೆ. ಇನ್ನು ಬ್ಯಾಂಕಿನ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಹೆಚ್ಚುವರಿ ಶೇ.1ರಷ್ಟು ಬಡ್ಡಿದರ ಪಡೆಯಲು ಅರ್ಹತೆ ಹೊಂದಿದ್ದಾರೆ. ಎಸ್ ಬಿಐ ಅಮೃತ್ ಕಲಶ್ ಯೋಜನೆಯ ಅವಧಿ 400 ದಿನಗಳಾಗಿವೆ. ಈ ಯೋಜನೆಯಲ್ಲಿ ಹೂಡಿಕೆದಾರರು ಹಣವನ್ನು 2023ರ ಫೆಬ್ರವರಿ 15 ಹಾಗೂ 2023ರ ಮಾರ್ಚ್ 31ರ ನಡುವೆ ಹೂಡಿಕೆ ಮಾಡಬೇಕು. ಗ್ರಾಹಕರು ಎಸ್ ಬಿಐ ಅಮೃತ್ ಕಲಶ್ ಖಾತೆಯನ್ನು ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅಲ್ಲಿ ತೆರೆಯಬಹುದು ಅಥವಾ ಎಸ್ ಬಿಐ ಯೋನೋ ಆಪ್ ಮೂಲಕ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಮ್ಯೂಚುವಲ್ ಫಂಡ್ ಹೂಡಿಕೆದಾರರು ತುಸು ನಿರಾಳ; ನಾಮಿನಿ ಸಲ್ಲಿಕೆ ಅಂತಿಮ ಗಡುವು ಸೆ.30ಕ್ಕೆ ವಿಸ್ತರಣೆ
ಎಸ್ ಬಿಐ ವಿ ಕೇರ್ ಠೇವಣಿ ಯೋಜನೆ
ಎಸ್ ಬಿಐ ವಿ ಕೇರ್ ಠೇವಣಿ ಯೋಜನೆಯಡಿಯಲ್ಲಿ ಐದು ವರ್ಷಗಳು ಅಥವಾ ಅದಕ್ಕಿಂತ ದೀರ್ಘ ಅವಧಿಯ ಸ್ಥಿರ ಠೇವಣಿಗಳನ್ನು (ಎಫ್ ಡಿ) ಹೊಂದಿರೋರಿಗೆ ಇತರ ಸಾಆನ್ಯ ಎಫ್ ಡಿಗಿಂತ 50 ಬೇಸಿಸ್ ಪಾಯಿಂಟ್ಸ್ ಅಥವಾ ಶೇ.0.5ರಷ್ಟು ಅಧಿಕ ಬಡ್ಡಿ ನೀಡಲಾಗುತ್ತಿದೆ. ಹೀಗಾಗಿ ಎಸ್ ಬಿಐ ಹಿರಿಯ ನಾಗರಿಕರ ಎಫ್ ಡಿಗಳ ಮೇಲೆ ಶೇ.7.50 ಬಡ್ಡಿ ನೀಡಲಾಗುತ್ತಿದೆ. ಎಸ್ ಬಿಐಯ ಈ ವಿಶೇಷ ಎಫ್ ಡಿ ಯೋಜನೆ 2023ರ ಮಾರ್ಚ್ 31ರಂದು ಕೊನೆಗೊಳ್ಳಲಿದೆ.
ಎಚ್ ಡಿಎಫ್ ಸಿ ಸೀನಿಯರ್ ಸಿಟಿಜನ್ ಕೇರ್ ಎಫ್ ಡಿ
ಸೀನಿಯರ್ ಸಿಟಿಜನ್ ಕೇರ್ ಎಫ್ ಡಿ ಅನ್ನೋದು ಹಿರಿಯ ನಾಗರಿಕರಿಗಾಗಿ ಖಾಸಗಿ ವಲಯದ ಬ್ಯಾಂಕ್ ಎಚ್ ಡಿಎಫ್ ಸಿ ರೂಪಿಸಿರುವ ವಿಶೇಷ ಸ್ಥಿರ ಠೇವಣಿ ಯೋಜನೆ. ಈ ಯೋಜನೆಯನ್ನು 2020ರ ಮೇ 18ರಂದು ಪ್ರಾರಂಭಿಸಲಾಗಿತ್ತು. ಆ ಬಳಿಕ ಈ ಯೋಜನೆಯನ್ನು ಬ್ಯಾಂಕ್ ಸ್ಥಗಿತಗೊಳಿಸಿತ್ತು. ಆದರೆ, ನಂತರ ಮರಳಿ ಈ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಎಫ್ ಡಿಗಳು 5 ವರ್ಷ ಒಂದು ದಿನದಿಂದ 10 ವರ್ಷಗಳ ಅವಧಿಯದ್ದಾಗಿದ್ದು, 5 ಕೋಟಿ ರೂ.ಗಿಂತ ಕಡಿಮೆ ಠೇವಣಿಗೆ ಸಂಬಂಧಿಸಿದ್ದಾಗಿದೆ. ಈ ಎಫ್ ಡಿ 2023ರ ಮಾ.31ಕ್ಕೆ ಕೊನೆಗೊಳ್ಳಲಿದೆ.
ಆಯುಷ್ಮಾನ್ ಯೋಜನೆ ಶೀಘ್ರದಲ್ಲಿ ಮಧ್ಯಮ ವರ್ಗಕ್ಕೂ ವಿಸ್ತರಣೆ ಸಾಧ್ಯತೆ; ವಿಮಾ ಕವರೇಜ್ ಎಷ್ಟು?
ಐಡಿಬಿಐ ಬ್ಯಾಂಕ್ ನಮನ್ ಹಿರಿಯ ನಾಗರಿಕರ ಯೋಜನೆ
ಐಡಿಬಿಐ ಬ್ಯಾಂಕ್ ಹಿರಿಯ ನಾಗರಿಕರಿಗಾಗಿ 'ನಮನ್' ಎಂಬ ಎಫ್ ಡಿ ಪರಿಚಯಿಸಿದೆ. ಈ ಎಫ್ ಡಿಗೆ ಸಾಮಾನ್ಯ ಎಫ್ ಡಿಗಿಂತ ಶೇ. 0.75 ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಒಂದು ಹಾಗೂ ಎರಡು ವರ್ಷಗಳ ನಡುವೆ ಮೆಚ್ಯುರ್ ಆಗುವ ಎಫ್ ಡಿಗಳಿಗೆ ಶೇ.7.50 ಬಡ್ಡಿ ನೀಡಲಾಗುತ್ತದೆ. ಮೂರು ವರ್ಷ ಹಾಗೂ 10 ವರ್ಷಗಳ ನಡುವಿನ ಎಫ್ ಡಿಗಳಿಗೆ ಶೇ.7ರಷ್ಟು ಬಡ್ಡಿ ನೀಡಲಾಗುತ್ತದೆ. ಹೊಸ ಠೇವಣಿ ಹಾಗೂ ರಿನ್ಯೂ ಮಾಡಿದ ಠೇವಣಿಗಳು ಕೂಡ ಅಧಿಕ ಬಡ್ಡಿ ಪಡೆಯಲು ಅರ್ಹತೆ ಗಳಿಸಿವೆ.
ಇಂಡಿಯನ್ ಬ್ಯಾಂಕ್
ಇಂಡಿಯನ್ ಬ್ಯಾಂಕ್ ಇಂಡ್ ಶಕ್ತಿ 555ದಿನಗಳ ಎಫ್ ಡಿ ಪರಿಚಯಿಸಿದೆ. ಇದಕ್ಕೆ ಬ್ಯಾಂಕ್ ಶೇ. 7.50 ಬಡ್ಡಿ ನೀಡುತ್ತಿದೆ.