ಬಳಕೆದಾರರ ಚಟುವಟಿಕೆಗೆ ಮಿತಿ ಹೇರಿದ ಥ್ರೆಡ್ಸ್; ಮತ್ತೊಮ್ಮೆ ವಾಗ್ದಾಳಿ ನಡೆಸಿದ ಎಲಾನ್ ಮಸ್ಕ್
ಟ್ವಿಟರ್ ಹಾಗೂ ಥ್ರೆಡ್ಸ್ ನಡುವಿನ ಸಮರ ಮುಂದುವರಿದಿದೆ.ಸ್ಪ್ಯಾಮ್ ದಾಳಿ ಹಿನ್ನೆಲೆಯಲ್ಲಿ ಬಳಕೆದಾರರ ಚಟುವಟಿಕೆಗಳಿಗೆ ಮಿತಿ ವಿಧಿಸೋದಾಗಿ ಥ್ರೆಡ್ಸ್ ಪ್ರಕಟಿಸಿದ ಬೆನ್ನಲ್ಲೇ ಟ್ವಟರ್ ಸಿಇಒ ಎಲಾನ್ ಮಸ್ಕ್' ಕಾಪಿ ಕ್ಯಾಟ್' ಎಂಬ ಆರೋಪವನ್ನು ಮತ್ತೆ ಮಾಡಿದ್ದಾರೆ.
ನ್ಯೂಯಾರ್ಕ್( ಜು.19): ಮೆಟಾ ಒಡೆತನದ ಥ್ರೆಡ್ಸ್ ಹಾಗೂ ಟ್ವಿಟರ್ ನಡುವಿನ ವೈರತ್ವ ನಿಲ್ಲುವಂತೆ ಕಾಣುತ್ತಿಲ್ಲ. ಈ ಎರಡೂ ಸಾಮಾಜಿಕ ಜಾಲತಾಣ ಸಂಸ್ಥೆಗಳ ಮುಖ್ಯಸ್ಥರು ಒಬ್ಬರ ಮೇಲೆ ಇನ್ನೊಬ್ಬರು ಆರೋಪಗಳ ಸುರಿಮಳೆಗೈಯುವುದನ್ನು ಮುಂದುವರಿಸಿದ್ದಾರೆ. ಮೆಟಾ ಒಡೆತನದ ಥ್ರೆಡ್ಸ್ ಆಗಮನದ ಬಳಿಕ ಕಂಗಾಲಾಗಿರುವ ಟ್ವಿಟರ್ ಸಿಇಒ ಎಲಾನ್ ಮಸ್ಕ್, ಮಾರ್ಕ್ ಜುಗರ್‌ಬರ್ಗ್ ವಿರುದ್ಧ ವೈಯಕ್ತಿಕ ವಾಗ್ದಾಳಿ ಮಾಡಿದ್ದು, ಥ್ರೆಡ್ಸ್ ವಿರುದ್ಧ ಕೇಸ್ ಹಾಕೋದಾಗಿಯೂ ಬೆದರಿಸಿದ್ದಾರೆ. 'ಟ್ವಿಟರ್ ವ್ಯಾಪಾರ ರಹಸ್ಯಗಳು ಹಾಗೂ ಇತರ ಬೌದ್ಧಿಕ ಆಸ್ತಿಯನ್ನು ಜುಕರ್ ಬರ್ಗ್ ದುರ್ಬಳಕೆ ಮಾಡಿಕೊಂಡಿದ್ದಾರೆ' ಎಂದು ಈ ಹಿಂದೆಯೇ ಮಸ್ಕ್ ಆರೋಪಿಸಿದ್ದರು. ಈಗ ಸ್ಪ್ಯಾಮ್ ದಾಳಿ ಹಿನ್ನೆಲೆಯಲ್ಲಿ ಥ್ರೆಡ್ಸ್ ಬಳಕೆದಾರರ ಚಟುವಟಿಕೆಗಳಿಗೆ ಮಿತಿ ವಿಧಿಸೋದಾಗಿ ಇನ್ ಸ್ಟಾಗ್ರಾಮ್ ಮುಖ್ಯಸ್ಥ ಆಡಂ ಮೊಸ್ಸೆರಿ ಮಾಹಿತಿ ನೀಡಿರುವ ಬೆನ್ನಲ್ಲೇ ಮಸ್ಕ್ ಮತ್ತೊಮ್ಮೆ ಥ್ರೆಡ್ಸ್ ವಿರುದ್ಧ ಗುಡುಗಿದ್ದಾರೆ. ಥ್ರೆಡ್ಸ್ ಟ್ವಿಟರ್ ಅನ್ನು ನಕಲು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಬಳಕೆದಾರರ ಚಟುವಟಿಕೆಗಳಿಗೆ ಮಿತಿ ವಿಧಿಸೋದಾಗಿ ಮೊಸ್ಸೆರಿ ಥ್ರೆಡ್ಸ್ ನಲ್ಲಿ ಪ್ರಕಟಿಸಿರೋದರ ಸ್ಕ್ರೀನ್ ಶಾಟ್ ಅನ್ನು ಒಬ್ಬರು ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಬೆಕ್ಕಿನ ಇಮೋಜಿ ಜೊತೆಗೆ ನಕಲು ಮಾಡಲಾಗಿದೆ ಎಂಬುದಾಗಿ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.
'ಸ್ಪ್ಯಾಮ್ ದಾಳಿಗಳು ಹೆಚ್ಚಿವೆ. ಹೀಗಾಗಿ ದರ ಮಿತಿಗಳು ಸೇರಿದಂತೆ ಬಳಕೆದಾರರ ಚುಟುವಟಿಕೆ ಮೇಲೆ ನಿರ್ಬಂಧ ಹೇರುವಂತಹ ಬಿಗಿ ಕ್ರಮಗಳನ್ನು ನಾವು ತೆಗೆದುಕೊಳ್ಳಬೇಕಾಗಿದೆ. ಈ ಸುರಕ್ಷತಾ ಕ್ರಮಗಳಿಂದ ನೀವು ತೊಂದರೆಗೊಳಗಾಗಿದ್ದರೆ ದಯವಿಟ್ಟು ನಮಗೆ ತಿಳಿಸಿ' ಎಂದು ಮೊಸ್ಸೆರಿ ಥ್ರೆಡ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸ್ಕ್ರೀನ್ ಶಾಟ್ ಅನ್ನು ಬಳಕೆದಾರರೊಬ್ಬರು ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮಸ್ಕ್ ಬೆಕ್ಕಿನ ಇಮೋಜಿ ಜೊತೆಗೆ "Lmaooo" ಹಾಗೂ “Copy” ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೂ ಕಾರಣವಿದೆ. ಟ್ವಿಟರ್ ದರ ಮಿತಿಗಳನ್ನು ವಿಧಿಸುವ ಬಗ್ಗೆ ಕೇವಲ ವಾರದ ಹಿಂದೆ ಘೋಷಣೆ ಮಾಡಿತ್ತಷ್ಟೇ.ಈಗ ಅಂಥದ್ದೇ ಕ್ರಮವನ್ನು ಥ್ರೆಡ್ಸ್ ಘೋಷಿಸಿದೆ.
ಇದಕ್ಕೂ ಮುನ್ನ ಮಾರ್ಕ್ ಜುಕರ್ ಬರ್ಗ್ ಥ್ರೆಡ್ಸ್ ನಲ್ಲಿ ಖಾತೆ ಹೊಂದಿರದ ಬಗ್ಗೆ ಎಲಾನ್ ಮಸ್ಕ್ ಲೇವಾಡಿ ಮಾಡಿದ್ದರು ಹಾಗೂ 'ಮೆಟಾ ಇಸಿಒ ಹೊಸ ಉತ್ಪನ್ನ ಥ್ರೆಡ್ಸ್ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ' ಎಂದು ಟ್ವೀಟ್ ಮಾಡಿದ್ದರು. ಮಸ್ಕ್ ಟ್ವೀಟ್ ಗೆ ಪ್ರತಿಯಾಗಿ 24 ಗಂಟೆಗಳೊಳಗೆ ಥ್ರೆಡ್ಸ್ ನಲ್ಲಿ ಹೊಸ ಪೋಸ್ಟ್ ಶೇರ್ ಮಾಡಿದ ಮಾರ್ಕ್ ಜುಕರ್ ಬರ್ಗ್, ಸರೋವರದಲ್ಲಿ ಸರ್ಫಿಂಗ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದರು. ಇದಕ್ಕೆ 'ಇನ್ನೊಂದು ದೊಡ್ಡ ವಾರ ಮುಂದಿರುವ ಹಿನ್ನೆಲೆಯಲ್ಲಿ ಸರೋವರದಲ್ಲಿ ಶಾಂತವಾದ ಬೆಳಗ್ಗೆ' ಎಂದು ಶೀರ್ಷಿಕೆ ನೀಡಿದ್ದರು. ಇನ್ನು ಮಾರ್ಕ್ ಜುಕರ್ ಬರ್ಗ್ ಅವರ ಥ್ರೆಡ್ಸ್ ಪೋಸ್ಟ್ ಸ್ಕ್ರೀನ್ ಶಾಟ್ ಅನ್ನುಟ್ವಿಟರ್ ನಲ್ಲಿ ಹಂಚಿಕೊಂಡ ಬಳಿಕ ಎಲಾನ್ ಮಸ್ಕ್ ಅದಕ್ಕೆ ಪ್ರತಿಕ್ರಿಯಿಸಿದ್ದು,'ಈತ ನಿಜಕ್ಕೂ ಮಧ್ಯರಾತ್ರಿಯ ಎಣ್ಣೆಯನ್ನು ಕರಗಿಸಿಕೊಳ್ಳುತ್ತಿದ್ದಾನೆ' ಎಂದು ಕಾಲೆಳೆದಿದ್ದರು.
ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ವೈರತ್ವ ಮರೆತು ಸ್ನೇಹಿತರಾದ್ರಾ? ವೈರಲ್ ಆಯ್ತು ಇಬ್ಬರ ಈ ಫೋಟೋ
ಪ್ರಾರಂಭದಲ್ಲಿ ಟ್ವಿಟರ್ ಪೇಯ್ಡ್ ಬಳಕೆದಾರರಿಗೆ ದಿನಕ್ಕೆ 6,000 ಪೋಸ್ಟ್ ಗಳನ್ನು ಹಂಚಿಕೊಳ್ಳಲು ಅನುಮತಿ ನೀಡಿತ್ತು. ಇನ್ನು ಪರಿಶೀಲಿಸದ ಬಳಕೆದಾರರಿಗೆ 600 ಪೋಸ್ಟ್ ಗಳನ್ನಷ್ಟೇ ಮಾಡಲು ಅನುಮತಿ ನೀಡಲಾಗಿತ್ತು. ಆದರೆ, ಕಾಲಕ್ರಮೇಣ ಈ ಮಿತಿಗಳನ್ನು ತಿದ್ದುಪಡಿ ಮಾಡಲಾಗಿದ್ದು, ಪರಿಶೀಲಿಸಿರುವ ಖಾತೆಗಳಿಗೆ ಗರಿಷ್ಠ 10,000 ಪೋಸ್ಟ್ ಗಳು ಹಾಗೂ ಪರಿಶೀಲಿಸದ ಖಾತೆಗಳಿಗೆ 1,000 ಪೋಸ್ಟ್ ಗಳಿಗೆ ಅನುಮತಿ ನೀಡಲಾಗಿತ್ತು. ಇನ್ನು ಹೊಸ ಪರಿಶೀಲಿಸದ ಖಾತೆಗಳಿಗೆ ದಿನಕ್ಕೆ 500 ಪೋಸ್ಟ್ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.