ಹೈದರಾಬಾದ್[ಜೂ.26]: ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿರುವ ಹೊತ್ತಿನಲ್ಲಿ, ಹೈದ್ರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಅನ್ನು ಲೀ.ಗೆ ಕೇವಲ 40 ರು.ಗೆ ಮಾರಾಟ ಮಾಡುತ್ತಿದ್ದಾರೆ. ಪಕ್ಕದ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀ.ಗೆ 73 ರು. ಇದೆ. ಅಂದರೆ ಸುಮಾರು 33 ರು. ಕಡಿಮೆ

ಹೌದು. ಹೈದರಾಬಾದ್ ಮೂಲದ ಮೆಕಾನಿ ಲ್ ಎಂಜಿನಿಯರ್ ಒಬ್ಬರು ಪ್ಲಾಸ್ಟಿಕ್ ಅನ್ನು ಇಂಧನವಾಗಿ ಪರಿವರ್ತಿಸುವ ನೂತನ ಪ್ರಯೋಗವೊಂದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಪ್ಲಾಸ್ಟಿಕ್‌ನಿಂದ ದಿನಕ್ಕೆ ೨೦೦ ಲೀ. ಪೆಟ್ರೋಲ್ ಉತ್ಪಾದಿಸುತ್ತಿರುವ ಇವರ ಸಂಸ್ಥೆ ಅದನ್ನು ಲೀಟರ್‌ಗೆ 40 ರು.ದರಕ್ಕೆ ಮಾರಾಟ ಮಾಡುತ್ತಿದೆ.

ಮೈಕ್ರೋ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳ ಸಚಿವಾಲಯದಲ್ಲಿ ತಮ್ಮ ಸಂಸ್ಥೆ ನೋಂದಣಿ ಮಾಡಿಕೊಂಡಿರುವ ಹೈದರಾ ಬಾದ್‌ನ ಮೆಕಾನಿಕಲ್ ಇಂಜಿನಿಯರ್ ಸತೀಶ್ ಕುಮಾರ್ ಅವರು, ಮೂರು ಹಂತದ ಪ್ರಕ್ರಿಯೆಗಳ ಮೂಲಕ ಪ್ಲಾಸ್ಟಿಕ್ ಅನ್ನು ಇಂಧನವಾಗಿ ಪರಿವರ್ತಿಸಿದ್ದಾರೆ. ಈ ಮೂಲಕ ಮಣ್ಣಿನಲ್ಲಿ ಕೊಳೆತು ಹೋಗದ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಕುಮಾರ್ ಅವರು, ‘ಪ್ಲಾಸ್ಟಿಕ್ ಮರು ಬಳಕೆ ಮೂಲಕ ಡೀಸೆಲ್, ವಿಮಾನಗಳ ಇಂಧನ ಹಾಗೂ ಪೆಟ್ರೋಲ್ ಆಗಿ ಪರಿವರ್ತಿಸಲು ನಾನು ಶೋಧಿಸಿದ ಪ್ರಕ್ರಿಯೆ ನೆರವಾಗುತ್ತದೆ. 500 ಕೇಜಿ ತೂಕದ ಪ್ಲಾಸ್ಟಿಕ್ ವಸ್ತುಗಳಿಂದ 400 ಲೀಟರ್‌ಗಳ ಇಂಧನ ಉತ್ಪಾದನೆ ಮಾಡಬಹುದು. ಅಲ್ಲದೆ, ಇದೊಂದು ಸುಲಭ ಪ್ರಕ್ರಿಯೆ ಯಾಗಿದ್ದು, ಇದಕ್ಕೆ ನೀರಿನ ಅಗತ್ಯವಿಲ್ಲ. ಜೊತೆಗೆ, ಇದರಿಂದ ಗಾಳಿ, ನೀರು ಸೇರಿದಂತೆ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಯಾವುದೇ ವಸ್ತು ಬಿಡುಗಡೆಯಾಗಲ್ಲ’ ಎಂದರು.