ನವದೆಹಲಿ[ಅ.02]: ಹಿಂಜರಿತಕ್ಕೆ ಒಳಗಾಗಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಹತ್ತು ದಿನಗಳ ಹಿಂದೆ ಕಾರ್ಪೋರೆಟ್‌ ತೆರಿಗೆಯನ್ನು ಶೇ.10ರಷ್ಟುಇಳಿಕೆ ಮಾಡಿದ್ದ ಕೇಂದ್ರ ಸರ್ಕಾರ, ಆದಾಯ ತೆರಿಗೆ ಪಾವತಿಸುವವರಿಗೆ ಬಂಪರ್‌ ಕೊಡುಗೆಯೊಂದನ್ನು ಘೋಷಿಸಲು ತಯಾರಿ ನಡೆಸುತ್ತಿದೆ. ಆದಾಯ ತೆರಿಗೆ ಸ್ಲಾ್ಯಬ್‌ಗಳನ್ನು ಕಡಿತಗೊಳಿಸುವ ಮೂಲಕ ಜನರು ಹೆಚ್ಚು ಹೆಚ್ಚು ಖರ್ಚು ಮಾಡುವಂತೆ, ತನ್ಮೂಲಕ ಆರ್ಥಿಕತೆ ಸರಿದಾರಿಗೆ ಬರುವಂತೆ ಮಾಡಲು ಚಿಂತನೆ ನಡೆಸುತ್ತಿದೆ. ದೀಪಾವಳಿಗೂ ಮುನ್ನವೇ ಆದಾಯ ತೆರಿಗೆ ಕಡಿತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವಾರ್ಷಿಕ 3ರಿಂದ 5 ಲಕ್ಷ ರು.ವರೆಗೆ ಆದಾಯ ಹೊಂದಿರುವವರಿಗೆ ಹಾಲಿ ಶೇ.5ರಷ್ಟುತೆರಿಗೆ ಇದೆ. 5ರಿಂದ 10 ಲಕ್ಷ ರು.ವರೆಗಿನ ಆದಾಯದಾರರಿಗೆ ಶೇ.20 ಹಾಗೂ 10 ಲಕ್ಷ ರು. ಮೇಲ್ಪಟ್ಟಆದಾಯ ಹೊಂದಿದವರಿಗೆ ಶೇ.30ರಷ್ಟುತೆರಿಗೆ ವಿಧಿಸಲಾಗುತ್ತಿದೆ. 2.5 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಇದೀಗ ಕೇಂದ್ರ ಸರ್ಕಾರ 5ರಿಂದ 10 ಲಕ್ಷ ರು.ವರೆಗಿನ ಆದಾಯ ತೆರಿಗೆ ದರವನ್ನು ಶೇ.20ರಿಂದ ಶೇ.10ಕ್ಕೆ ಕಡಿತಗೊಳಿಸಲು ಚಿಂತನೆ ನಡೆಸಿದೆ. ಹಾಲಿ ಶೇ.30ರಷ್ಟುತೆರಿಗೆ ಪಾವತಿಸುತ್ತಿರುವವರಿಗೆ ಸೆಸ್‌, ಸರ್ಚಾಜ್‌ರ್‍ ಕಡಿತಗೊಳಿಸುವ ಮೂಲಕ ತೆರಿಗೆ ದರವನ್ನು ಶೇ.25ಕ್ಕೆ ಇಳಿಸುವ ಉದ್ದೇಶ ಇದೆ ಎಂದು ಹೇಳಲಾಗಿದೆ.

ಆದಾಯ ತೆರಿಗೆ ಕಡಿತದಿಂದ ಸರ್ಕಾರದ ಬೊಕ್ಕಸದ ಮೇಲಾಗುವ ಪರಿಣಾಮವನ್ನು ಆಧರಿಸಿ ವಿವಿಧ ಲೆಕ್ಕಾಚಾರಗಳನ್ನು ನಡೆಸಲಾಗುತ್ತಿದೆ. ಪ್ರತಿಯೊಬ್ಬ ತೆರಿಗೆದಾರನಿಗೆ ಕನಿಷ್ಠ ಶೇ.5ರಷ್ಟಾದರೂ ತೆರಿಗೆ ವಿನಾಯಿತಿ ನೀಡಬೇಕು ಎಂಬ ಉದ್ದೇಶ ಸರ್ಕಾರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ದೀಪಾವಳಿಗೂ ಮುನ್ನ ಸರ್ಕಾರದಿಂದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಇದರಿಂದಾಗಿ ತಕ್ಷಣವೇ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಬರಲಿದ್ದು, ಬಳಕೆ ಹೆಚ್ಚಲಿದೆ. ಹೀಗಾಗಿ ಆರ್ಥಿಕತೆಗೆ ಚೈತನ್ಯ ಸಿಗಲಿದೆ ಎಂಬ ವಿಶ್ಲೇಷಣೆ ಇದೆ.

ಅ.02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: