ಪೇಟಿಎಂಗೆ ಆರ್ ಬಿಐ ನಿರ್ಬಂಧ, ಈ ಮೂರು ಕಂಪನಿಗಳಿಗೆ ಭಾರೀ ಲಾಭ!
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧದ ಬೆನ್ನಲ್ಲೇ ಇತರ ಕೆಲವು ಪಾವತಿ ಆಪ್ ಗಳಿಗೆ ಭಾರೀ ಲಾಭವಾಗಿದೆ. ವರ್ತಕರು ಪೇಟಿಎಂ ಆಪ್ ತ್ಯಜಿಸಿ ಬೇರೆ ಪಾವತಿ ಆಪ್ ಗಳತ್ತ ಮುಖ ಮಾಡುತ್ತಿದ್ದಾರೆ.
Business Desk:ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಕ್ರಾಂತಿಯನ್ನೇ ಸೃಷ್ಟಿಸಿದೆ. ಯುಪಿಐ ಪಾವತಿ ಸಾಕಷ್ಟು ಜನಪ್ರಿಯತೆ ಗಳಿಸುವ ಮೂಲಕ ವಿಶ್ವದ ಇತರ ರಾಷ್ಟ್ರಗಳು ಭಾರತದೆಡೆಗೆ ನೋಡುವಂತೆ ಮಾಡಿತ್ತು. ಆದರೆ, ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಯುಪಿಐ ಪಾವತಿ ವ್ಯವಸ್ಥೆ ಬಗ್ಗೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ತುಸು ಭಯ ಮೂಡಿರೋದಂತೂ ನಿಜ. ಆರ್ ಬಿಐ ನಿರ್ಧಾರದ ಬೆನ್ನಲ್ಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫೆಬ್ರವರಿ 28ರಂದು ಮುಚ್ಚಲ್ಪಡಲಿದೆ. ಇದರಿಂದ ಭಾರತದ ದಿನಸಿ ಅಂಗಡಿಗಳು ಹಾಗೂ ಇತರ ವ್ಯಾಪಾರಿಗಳು ಪೇಟಿಎಂ ತೊರೆದು ಇತರ ಪಾವತಿ ಆಪ್ ಗಳತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಶೇ.42ಕ್ಕೂ ಅಧಿಕ ಶಾಪ್ ಗಳು
ಪೇಟಿಎಂ ಬಿಟ್ಟು ಮೊಬಿಕ್ವಿಕ್ , ಭಾರತ್ ಪೇ, ಫೋನ್ ಪೇ ಹಾಗೂ ಗೂಗಲ್ ಪೇ ಬಳಸುತ್ತಿವೆ. ಹೀಗಾಗಿ ಪೇಟಿಎಂ ಮೇಲಿನ ನಿರ್ಬಂಧದಿಂದ ಇತರ ಯುಪಿಐ ಪಾವತಿ ಆಪ್ ಗಳಿಗೆ ಲಾಭವಾಗುತ್ತಿದೆ. ಒಂದು ವರದಿ ಪ್ರಕಾರ ಭಾರತ್ ಪೇ ಗ್ರಾಹಕರ ಪ್ರಮಾಣದಲ್ಲಿ ದೇಶಾದ್ಯಂತ ಶೇ.100ರಷ್ಟು ಹೆಚ್ಚಳವಾಗಿದೆ. ಟೈರ್-1, ಟೈರ್-2, ಹಾಗೂ ಟೈರ್ -3 ನಗರಗಳಲ್ಲಿ ಭಾರತ್ ಪೇ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
ಮೆಟ್ರೋ ನಗರಗಳಲ್ಲಿ ಮಾತ್ರವೇ ಭಾರತ್ ಪೇ ತಿಂಗಳಿಂದ ತಿಂಗಳಿಗೆ ಶೇ.104ಕ್ಕಿಂತಲೂ ಹೆಚ್ಚಿನ ಪ್ರಗತಿ ದರವನ್ನು ದಾಖಲಿಸಿದೆ. ಇನ್ನು ಟೈರ್-1 ಹಾಗೂ ಟೈರ್-2 ನಗರಗಳು ಕೂಡ ಹಿಂದಿ ಬಿದ್ದಿಲ್ಲ. ಗ್ರಾಹಕರನ್ನು ಸೆಳೆಯುವಲ್ಲಿ ಶೇ.95ರಷ್ಟು ಪ್ರಗತಿ ದಾಖಲಿಸಿದೆ. ಹೀಗಾಗಿ ಪೇಟಿಎಂ ಮೇಲಿನ ನಿರ್ಬಂಧ ಭಾರತ್ ಪೇಗೆ ವರವಾಗಿ ಪರಿಣಮಿಸಿದೆ.
ಪೇಟಿಎಂ FAStag ಮಾನ್ಯವಲ್ಲ, ಬ್ಯಾಂಕ್ ಪಟ್ಟಿಯಿಂದ PBBL ತೆಗೆದು ಹಾಕಿದ ಹೆದ್ದಾರಿ ಪ್ರಾಧಿಕಾರ!
ಇತ್ತೀಚೆಗೆ ಕಿರಣಾ ಕ್ಲಬ್ ನಡೆಸಿದ ಸಮೀಕ್ಷೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ ಬಿಐ ನಿರ್ಬಂಧಗಳನ್ನು ವಿಧಿಸಿದ ಬಳಿಕ ಶೇ.42ರಷ್ಟು ಕಿರಾಣಿ ಅಂಗಡಿಗಳು ಪೇಟಿಎಂನಿಂದ ದೂರ ಸರಿದಿದ್ದು, ಬೇರೆ ಮೊಬೈಲ್ ಆ್ಯಪ್ ಗಳನ್ನು ಬಳಸಲು ಪ್ರಾರಂಭಿಸಿವೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ ಬಿಐ ಕ್ರಮದ ಬಳಿಕ ಶೇ.68ರಷ್ಟು ಕಿರಾಣಿ ಅಂಗಡಿಗಳಿಗೆ ಪೇಟಿಎಂ ಮೇಲಿನ ನಂಬಿಕೆ ತಗ್ಗಿದೆ ಎಂದು ಈ ಸಮೀಕ್ಷೆ ಹೇಳಿದೆ.
ಸಮೀಕ್ಷೆ ಪ್ರಕಾರ ಶೇ.50ರಷ್ಟು ರಿಟೇಲರ್ ಗಳು ಇತರ ಪೇಮೆಂಟ್ ಆ್ಯಪ್ ಗಳನ್ನು ಬಳಸಲು ಯೋಜನೆ ರೂಪಿಸಿದ್ದು, ಅವರ ಆಯ್ಕೆ ಫೋನ್ ಪೇ ಆಗಿದೆ. ಇನ್ನು ಶೇ.30ರಷ್ಟು ಮಂದಿ ಗೂಗಲ್ ಪೇ ಕಡೆಗೆ ಒಲವು ತೋರಿದ್ದರೆ, ಶೇ.10ರಷ್ಟು ಮಂದಿ ಭಾರತ್ ಪೇ ಬಳಸಲು ಯೋಚಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 31 ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಹೊಸ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಫೆಬ್ರವರಿ 29 ರ ನಂತರ ಕ್ರೆಡಿಟ್ ವಹಿವಾಟುಗಳನ್ನು ಮಾಡುವುದು ಸೇರಿದಂತೆ ಪ್ರಮುಖ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿತ್ತು. 2024ರ ಫೆಬ್ರವರಿ 29 ರ ನಂತರ ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಇನ್ಸ್‌ಟ್ರುಮೆಂಟ್‌ಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು, ಎನ್‌ಸಿಎಂಸಿ ಕಾರ್ಡ್‌ಗಳು ಇತ್ಯಾದಿಗಳಲ್ಲಿ ಯಾವುದೇ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಸಮಯದಲ್ಲಿ ಕ್ರೆಡಿಟ್ ಮಾಡಬಹುದಾದ ಯಾವುದೇ ಹೆಚ್ಚಿನ ಠೇವಣಿ ಅಥವಾ ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್ ಅಪ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಲ್ಲಿರೋ ಗ್ರಾಹಕರ ಹಣ ಏನಾಗುತ್ತೆ? ಯಾರು ಭದ್ರತೆ ನೀಡ್ತಾರೆ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಸಾವಿರಾರು ಬಳಕೆದಾರರ ಸರಿಯಾದ ಗುರುತೇ ಇಲ್ಲದೇ ಅವರ ಹೆಸರಿನಲ್ಲಿ ಖಾತೆಗಳನ್ನು ತೆರೆಯಲಾಗಿದೆ. ಇನ್ನು 1000ಕ್ಕೂ ಹೆಚ್ಚು ಖಾತೆಗಳಿಗೆ 1 ಪಾನ್ ಕಾರ್ಡ್ ಸಂಖ್ಯೆ ಬಳಸಿರುವುದು ಕೂಡಾ ಕಂಡುಬಂದಿದೆ. ಜೊತೆಗೆ ಗ್ರಾಹಕರ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಪರಿಶೀಲನೆಯನ್ನು ಸೂಕ್ತವಾಗಿ ನಡೆಸದೇ ಇರುವುದು ಬೆಳಕಿಗೆ ಬಂದಿದೆ. ಕೆಲವು ಖಾತೆಗಳಲ್ಲಿ ನಡೆದ ದೊಡ್ಡಮಟ್ಟದ ಹಣಕಾಸಿನ ವ್ಯವಹಾರಗಳ ಬಗ್ಗೆ ಗ್ರೂಪ್‌ನ ಒಳಗೆ ಮತ್ತು ಸಹಯೋಗಿ ಪಾಲುದಾರರ ಜೊತೆ ಮಾಹಿತಿ ಹಂಚಿಕೊಂಡಿಲ್ಲ. ಈ ವ್ಯವಹಾರ ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಿರುವ ಸಾಧ್ಯತೆ ಇದೆ.