ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಲ್ಲಿರೋ ಗ್ರಾಹಕರ ಹಣ ಏನಾಗುತ್ತೆ? ಯಾರು ಭದ್ರತೆ ನೀಡ್ತಾರೆ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಬ್ಯಾಂಕ್ ಖಾತೆಯಲ್ಲಿರುವ ಹಣ ಎಷ್ಟು ಸುರಕ್ಷಿತ? ಬ್ಯಾಂಕ್ ದಿವಾಳಿಯಾದ್ರೆ ಅಥವಾ ಆರ್ ಬಿಐ ನಿರ್ಬಂಧ ವಿಧಿಸಿದ್ರೆ ನಮ್ಮ ಹಣ ಏನಾಗುತ್ತೆ? ಎಂಬ ಪ್ರಶ್ನೆಗಳು ಅನೇಕರಲ್ಲಿ ಹುಟ್ಟಿವೆ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
Business Desk:ನಾವೆಲ್ಲರೂ ಬ್ಯಾಂಕ್ ಉಳಿತಾಯ ಖಾತೆ ಅಥವಾ ಸ್ಥಿರ ಠೇವಣಿಯಲ್ಲಿ (ಎಫ್ ಡಿ) ಒಂದಿಷ್ಟು ಹಣವನ್ನು ಉಳಿತಾಯ ಮಾಡಿರುತ್ತೇವೆ. ಬ್ಯಾಂಕಿನಲ್ಲಿಟ್ಟಿರುವ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ನಮಗಿರುತ್ತದೆ. ನಮ್ಮ ಹಣವನ್ನು ಸುರಕ್ಷಿತವಾಗಿಡುವಲ್ಲಿ ಬ್ಯಾಂ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ನಗದು ಹಣ ಇಟ್ಟುಕೊಳ್ಳೋರ ಸಂಖ್ಯೆ ತಗ್ಗಿದೆ. ಹೀಗಾಗಿ ಬ್ಯಾಂಕ್ ಖಾತೆಯಲ್ಲಿರುವ ಹಣದ ಮೊತ್ತ ಕೂಡ ಹೆಚ್ಚಿದೆ. ಆದರೆ, ನಿಮ್ಮ ಹಣವಿರುವ ಬ್ಯಾಂಕ್ ಮುಚ್ಚಿದ್ರೆ ಅಥವಾ ಅದರ ವಿರುದ್ಧ ಆರ್ ಬಿಐ ಕ್ರಮ ಕೈಗೊಂಡರೆ? ಆಗ ನಿಮ್ಮ ಹಣ ಏನಾಗುತ್ತದೆ. ಇಂಥದೊಂದು ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡಿರಬಹುದು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ ಬಿಐ ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಗ್ರಾಹಕರಲ್ಲಿ ಬ್ಯಾಂಕ್ ನಲ್ಲಿರುವ ತಮ್ಮ ಹಣದ ಸುರಕ್ಷತೆ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ.
ಬ್ಯಾಂಕ್ ವಿಫಲವಾದ್ರೆ ಯಾರು ನಿಮ್ಮ ಹಣ ಸಂರಕ್ಷಿಸುತ್ತಾರೆ?
ಷೆಡ್ಯೂಲ್ಡ್ ಬ್ಯಾಂಕುಗಳಲ್ಲಿನ ಠೇವಣಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಅಂಗಸಂಸ್ಥೆ ಡೆಫಾಸಿಟ್ ಇನ್ಯುರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ (ಡಿಐಸಿಜಿಸಿ) ವಿಮಾ ಕವರೇಜ್ ಒದಗಿಸುತ್ತದೆ. ಡಿಐಸಿಜಿಸಿ ಅಡಿಯಲ್ಲಿ ವಿಮೆ ಹೊಂದಿರುವ ಬ್ಯಾಂಕುಗಳ ಪಟ್ಟಿ ನಿಮಗೆ ಆನ್ ಲೈನ್ ನಲ್ಲಿ ಸಿಗುತ್ತದೆ. ಆರ್ ಬಿಐ ಪ್ರಕಾರ 1960ರಲ್ಲಿ ಲಕ್ಷ್ಮೀ ಬ್ಯಾಂಕ್ ಹಾಗೂ ಪಲೈ ಸೆಂಟ್ರಲ್ ಬ್ಯಾಂಕ್ ವೈಫಲ್ಯದಿಂದ ಆರ್ ಬಿಐ ಠೇವಣಿ ವಿಮೆಯನ್ನು ಪರಿಚಯಿಸಲಾಗಿತ್ತು. ಸಂಸತ್ತಿನಲ್ಲಿ ದಿ ಡೆಫಾಸಿಟ್ ಇನ್ಯುರೆನ್ಸ್ ಕಾರ್ಪೋರೇಷನ್ (ಡಿಐಸಿ) ಮಸೂದೆಯನ್ನು 1961ರ ಆಗಸ್ಟ್ 21ರಂದು ಮಂಡಿಸಲಾಗಿತ್ತು. ಈ ಮಸೂದೆಗೆ 1961ರ ಡಿಸೆಂಬರ್ 7ರಂದು ಅಂಗೀಕಾರ ನೀಡಲಾಗಿತ್ತು. ದಿ ಡೆಫಾಸಿಟ್ ಇನ್ಯುರೆನ್ಸ್ ಕಾರ್ಪೋರೇಷನ್ 1962ರ ಜನವರಿ 1ರಿಂದ ಕಾರ್ಯಾರಂಭ ಮಾಡಿತು.
ಆರ್‌ಬಿಐ ಕ್ರಮದ ಬೆನ್ನಲ್ಲಿಯೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ದೇಶಕ ಮಂಡಳಿಯ ಸದಸ್ಯ ರಾಜೀನಾಮೆ!
ಡೆಪಾಸಿಟ್ ಇನ್ಯುರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ( ತಿದ್ದುಪಡಿ) ಕಾಯ್ದೆಗೆ (DICGC Act)2021ರಲ್ಲಿ ಸಂಸತ್ತಿನ ಅನುಮೋದನೆ ಸಿಕ್ಕಿತ್ತು. ಇದು ಭಾರತದಲ್ಲಿ ಠೇವಣಿ ವಿಮೆಯ ಸ್ವರೂಪವನ್ನೇ ಬದಲಾಯಿಸಿತ್ತು. 2020- 21ನೇ ಸಾಲಿನ ಬಜೆಟ್ ನಲ್ಲಿ ಠೇವಣಿ ವಿಮೆ ಕವರೇಜ್ ಮೊತ್ತವನ್ನು ಒಂದು ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. ಠೇವಣಿ ವಿಮೆ ಕವರೇಜ್ ಮೊತ್ತ 1961ರಲ್ಲಿ ಪ್ರಾರಂಭಗೊಂಡಿದ್ದು,1,500ರೂ. ಆಗಿತ್ತು. ಈ ಮೊತ್ತ ನಿಧಾನವಾಗಿ ಹೆಚ್ಚಳಗೊಳ್ಳುತ್ತ 1993 ರಲ್ಲಿ ಒಂದು ಲಕ್ಷ ರೂ. ತಲುಪಿತ್ತು. 2020ರ ತನಕ ಈ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ದಿವಾಳಿಯಾದ ಅಥವಾ ಆರ್ ಬಿಐನಿಂದ ನಿಷೇಧಕ್ಕೊಳಪಟ್ಟ ಬ್ಯಾಂಕುಗಳ ಠೇವಣಿದಾರರಿಗೆ DICGC ಮಧ್ಯಂತರ ಪಾವತಿ ಮಾಡಲು ಡೆಪಾಸಿಟ್ ಇನ್ಯುರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ( ತಿದ್ದುಪಡಿ) ಕಾಯ್ದೆ ಅವಕಾಶ ಕಲ್ಪಿಸುತ್ತದೆ. ಇಂಥ ಬ್ಯಾಂಕುಗಳ ಠೇವಣಿದಾರರಿಗೆ ನಿಷೇಧದ ಹಿನ್ನೆಲೆಯಲ್ಲಿ ತಮ್ಮ ಉಳಿತಾಯವನ್ನು ಹಿಂಪಡೆಯಲು ಸಾಧ್ಯವಾಗೋದಿಲ್ಲ.
1000 ಖಾತೆಗೆ ಒಂದೇ ಪಾನ್: ಪೇಟಿಎಂ ಬ್ಯಾಂಕ್ ಗೋಲ್ಮಾಲ್
ಮಧ್ಯಂತರ ಪಾವತಿಗೆ DICGCಗೆ ಕಾಯ್ದೆ 90 ದಿನಗಳ ಕಾಲಾವಕಾಶವನ್ನು ನೀಡುತ್ತದೆ. ಮೊದಲ 45 ದಿನಗಳ ಅವಧಿಯಲ್ಲಿ ವಿಮೆಗೊಳಪಟ್ಟ ಬ್ಯಾಂಕು ತನ್ನ ಎಲ್ಲ ಠೇವಣಿದಾರರ ಮಾಹಿತಿಗಳನ್ನು ನಿಗಮಕ್ಕೆ ನೀಡಬೇಕು. ಮಾಹಿತಿಗಳನ್ನು ಪಡೆದ 30 ದಿನಗಳೊಳಗೆ ನಿಗಮವು ಕ್ಲೈಮ್ಸ್ ನಲ್ಲಿ ಬ್ಯಾಂಕು ನಮೂದಿಸಿರೋ ಮಾಹಿತಿಗಳನ್ನು ಪರಿಶೀಲಿಸಬೇಕು. ಇನ್ನು ಪರಿಶೀಲನೆ ನಡೆಸಿದ 15 ದಿನಗಳೊಳಗೆ ಪಾವತಿ ಮಾಡಬೇಕು. ಇದರರ್ಥ ದಿವಾಳಿಯಾದ ಅಥವಾ ಯಾವುದೇ ಕಾರಣದಿಂದ ಬಂದ್ ಆದ ಬ್ಯಾಂಕ್ ಗ್ರಾಹಕರಿಗೆ 90 ದಿನಗಳೊಳಗೆ ವಿಮಾ ಮೊತ್ತವನ್ನು DICGC ಪಾವತಿಸಬೇಕು. ಡೆಪಾಸಿಟ್ ಇನ್ಯುರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ( ತಿದ್ದುಪಡಿ) ಕಾಯ್ದೆಯಿಂದ ಶೇ.98.3 ರಷ್ಟು ಬ್ಯಾಂಕ್ ಖಾತೆದಾರರಿಗೆ ಸಂಪೂರ್ಣ ಸುರಕ್ಷತೆ ಸಿಕ್ಕಿದೆ.