Asianet Suvarna News Asianet Suvarna News

ಜಿ20ಯಿಂದ ಷೇರುಪೇಟೆ ಏರಿಕೆ: ಮೊದಲ ಬಾರಿ 20 ಸಾವಿರ ತಲುಪಿದ ನಿಫ್ಟಿ

ಭಾರತ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯ ಯಶಸ್ಸು ಷೇರು ಮಾರುಕಟ್ಟೆಗೂ ವರವಾಗಿ ಪರಿಣಮಿಸಿದ್ದು, ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಭಾರಿ ಏರಿಕೆ ಕಂಡಿವೆ.

The success of the G20 summit under the chairmanship of India has also been a boon to the stock market, the Bombay Stock Exchange Sensex and the Nifty seen a huge rise akb
Author
First Published Sep 12, 2023, 9:10 AM IST

ಮುಂಬೈ: ಭಾರತ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯ ಯಶಸ್ಸು ಷೇರು ಮಾರುಕಟ್ಟೆಗೂ ವರವಾಗಿ ಪರಿಣಮಿಸಿದ್ದು, ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಭಾರಿ ಏರಿಕೆ ಕಂಡಿವೆ. ಇದೇ ಮೊದಲ ಬಾರಿ ನಿಫ್ಟಿ20 ಸಾವಿರ ಅಂಕಗಳ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ.  ಸೋಮವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌, 528 ಅಂಕಗಳ ಏರಿಕೆ ಕಾಣುವುದರೊಂದಿಗೆ 67,127 ಅಂಕಗಳಿಗೆ ಏರಿಕೆ ಕಂಡಿದೆ. ನಿಫ್ಟಿವಹಿವಾಟಿನ ಮಧ್ಯಂತರ ಸಮಯದಲ್ಲಿ 20,008 ಅಂಕಗಳಿಗೆ ತಲುಪಿದ್ದು, ದಿನದಂತ್ಯಕ್ಕೆ 19,996 ಅಂಕಗಳಲ್ಲಿ ಕೊನೆಗೊಂಡಿದೆ. ಸ್ಥಳೀಯ ಹೂಡಿಕೆದಾರರಲ್ಲಿ ಉಂಟಾದ ಹೆಚ್ಚಳದಿಂದಾಗಿ ಷೇರುಪೇಟೆ ಗಳಿಕೆ ಕಂಡಿದೆ. ಆಕ್ಸಿಕ್‌ ಬ್ಯಾಂಕ್‌, ಪವರ್‌ ಗ್ರಿಡ್‌, ಮಾರುತಿ, ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI), ಟಾಟಾ ಮೋಟ​ರ್‍ಸ್, ಐಟಿಸಿ (ITC), ನೆಸ್ಲೇ ಮತ್ತು ಮಹೀಂದ್ರಾ ಅಂಡ್‌ ಮಹೀಂದ್ರಾ (Mahindra &Mahindra) ಷೇರುಗಳು ಏರಿಕೆ ಕಂಡಿವೆ.

 ಮಾನವ ಹಕ್ಕು, ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮೋದಿ ಜೊತೆ ಪ್ರಸ್ತಾಪ: ಬೈಡೆನ್‌

ಹನೋಯಿ: ಜಿ20 ಶೃಂಗಕ್ಕಾಗಿ ನವದೆಹಲಿಗೆ ಬಂದಿದ್ದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆ ವೇಳೆ ಮಾನವ ಹಕ್ಕು ಉಲ್ಲಂಘನೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ.  2 ದಿನಗಳ ಭೇಟಿಗಾಗಿ ದೆಹಲಿಯಿಂದ ನೇರವಾಗಿ ವಿಯೆಟ್ನಾಂಗೆ ತೆರಳಿದದ ಬೈಡೆನ್‌, ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ವೇಳೆ ಎಂದಿನಂತೆ ನಾನು ಮಾನವ ಹಕ್ಕುಗಳ ರಕ್ಷಣೆ, ನಾಗರಿಕ ಸಮಾಜ ವಹಿಸುವ ಪ್ರಮುಖ ಪಾತ್ರ ಮತ್ತು ಪತ್ರಿಕಾ ಸ್ವಾತಂತ್ರದ ಬಗ್ಗೆ ಪ್ರಸ್ತಾಪಿಸಿದೆ. ಅಲ್ಲದೆ ಸದೃಢ ಮತ್ತು ಶ್ರೀಮಂತ ದೇಶ ಕಟ್ಟುವ ಕುರಿತೂ ನಾನು ಚರ್ಚೆ ನಡೆಸಿದೆ ಎಂದು ಹೇಳಿದರು.

ಭಾರತದ ಜಿ-20 ಅಧ್ಯಕ್ಷತೆಗೆ ವಿದೇಶಿ ಮಾಧ್ಯಮಗಳಿಂದಲೂ ಭಾರಿ ಮೆಚ್ಚುಗೆ : ಯಾವ ನಾಯಕರು ಏನಂದರು?

ಈ ನಡುವೆ ಬೈಡೆನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌(Jai Ram Ramesh), ನಾನೂ ಪತ್ರಿಕಾಗೋಷ್ಠಿ ನಡೆಸಲ್ಲ, ಬೇರೆಯವರಿಗೂ ನಡೆಸಲು ಬಿಡುವುದಿಲ್ಲ ಎಂಬ ನಿಲುವು ಯಾವುದೇ ಫಲ ಕೊಟ್ಟಿಲ್ಲ. ಏಕೆಂದರೆ ಭಾರತದಲ್ಲಿ ಮೋದಿ ಎದುರು ಏನು ಹೇಳಿದ್ದರೋ ಅದನ್ನೇ ಬೈಡೆನ್‌ ವಿಯೆಟ್ನಾಂನಲ್ಲಿ ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.  ಇದಕ್ಕೂ ಮೊದಲು ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಅಮೆರಿಕದ ಪ್ರಸ್ತಾಪಕ್ಕೆ ಮೋದಿ ತಡೆ ಒಡ್ಡಿದ್ದಾರೆ ಎಂದು ಜೈರಾಂ ಕಿಡಿಕಾರಿದ್ದರು.

ಜಿ20 ಆಯ್ತು ಇನ್ನು ದೇಶದ ಸಮಸ್ಯೆ ನೋಡಿ: ಸರ್ಕಾರಕ್ಕೆ ಖರ್ಗೆ

 ಇದೀಗ ಜಿ20 ಶೃಂಗ ಸಭೆ ಮುಕ್ತಾಯವಾಗಿದ್ದು, ಪ್ರಧಾನಿ ಮೋದಿ ಸರ್ಕಾರ ಇನ್ನು ಹಣದುಬ್ಬರ (Inflation), ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರದಂತಹ ದೇಶೀಯ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಖರ್ಗೆ ಈಗ ಜಿ20 ಸಭೆ ಮುಗಿದಿದೆ. ಇನ್ನು ಮೋದಿ ದೇಶಿಯ ಸಮಸ್ಯೆಗಳತ್ತ ಗಮನಹರಿಸಬೇಕು. ದೇಶದಲ್ಲಿ ಆಗಸ್ಟ್‌ನಲ್ಲಿ ಸಾಮಾನ್ಯ ಊಟದ ದರ ಶೇ.24ರಷ್ಟು ಏರಿಕೆಯಾಗಿದೆ. ಇನ್ನು ನಿರುದ್ಯೋಗ ದರವು ಶೇ.8ರಷ್ಟಿದ್ದು ಯುವಕರ ಭವಿಷ್ಯ ಮಂಕಾಗಿದೆ ಎಂದು ಕಿಡಿಕಾರಿದ್ದಾರೆ.

ಅಲ್ಲದೇ ‘ಜಮ್ಮು ಮತ್ತು ಕಾಶ್ಮೀರದಲ್ಲಿ 13,000 ಕೋಟಿ ರು. ಜಲಜೀವನ ಹಗರಣ ಬೆಳಕಿಗೆ ಬಂದಿದೆ. ಭ್ರಷ್ಟಾಚಾರವನ್ನು ಬಯಲಿಗೆಳೆದ ದಲಿತ ಐಎಎಸ್‌ ಅಧಿಕಾರಿಗೆ ಕಿರುಕುಳ ನೀಡಲಾಗಿದೆ. ಅಲ್ಲದೇ 2019ರ ಚುನಾವಣೆ ವೇಳೆ ಆರ್‌ಬಿಐ ಖಜಾನೆಯಿಂದ ಸರ್ಕಾರಕ್ಕೆ 3 ಲಕ್ಷ ಕೋಟಿ ರು. ಹಣ ವರ್ಗಾಯಿಸುವಂತೆ ಆರ್‌ಬಿಐನ ಮಾಜಿ ಡೆಪ್ಯೂಟಿ ಗವರ್ನರ್‌ ವಿರಳ್‌ ಆಚಾರ್ಯ (Viral Acharya)ಅವರಿಗೆ ಮೋದಿ ಸರ್ಕಾರ ಒತ್ತಡ ಹೇರಿದ್ದು ಇತ್ತೀಚೆಗೆ ತಿಳಿದಿದೆ. ಇನ್ನೊಂದೆಡೆ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಮರಳಿದ್ದರೆ, ಹಿಮಾಚಲ ಪ್ರದೇಶದ ಪ್ರಕೃತಿ ವಿಕೋಪವನ್ನು ದುರಹಂಕಾರಿ ಮೋದಿ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ ಎಂದು ಹರಿಹಾಯ್ದಿದ್ದಾರೆ.

ದಿಲ್ಲಿ ಘೋಷಣೆ ಹಿಂದೆ 200 ಗಂಟೆ ಸಭೆ 300 ಚರ್ಚೆ: ಜಿ20 ಯಶಸ್ಸಿನ ಹಿಂದಿರುವ ರಾಜತಾಂತ್ರಿಕರಿವರು

ಜಿ20 ಔತಣಕ್ಕೆ ಮಮತಾ  ಬ್ಯಾನರ್ಜಿ ಹೋಗಿದ್ದಕ್ಕೆ ಕಾಂಗ್ರೆಸ್‌ ಆಕ್ಷೇಪ
ಕೋಲ್ಕತಾ: ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಆಯೋಜಿತವಾಗಿದ್ದ ಔತಣ ಕೂಟದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಗಿಯಾಗಿದ್ದನ್ನು ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chaudhary) ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳ ಇಂಡಿಯಾ ಕೂಟದಲ್ಲಿ ಮತ್ತೊಂದು ಬಿರುಕು ಬಯಲಾದಂತಾಗಿದೆ. ಸುದ್ದಿಗಾರರ ಜತೆ ಮಾತನಾಡಿದ ಅಧೀರ್‌, ‘ಕೇಂದ್ರದ ತಾರತಮ್ಯ ಹಿನ್ನೆಲೆಯಲ್ಲಿ ಹಲವು ಬಿಜೆಪಿಯೇತರ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಔತಣಕ್ಕೆ ಗೈರಾಗಿದ್ದರು. ಹೀಗಿರುವಾಗ ಮಮತಾ ಅಲ್ಲಿಗೆ ತೆರಳುವ ಅವಶ್ಯಕತೆ ಏನಿತ್ತು? ಬೇರೆ ಎಲ್ಲರಿಗಿಂತಲೂ ಮೊದಲೇ ಮಮತಾ ದೆಹಲಿ ಸೇರಿಕೊಂಡಿದ್ದರು. ಔತಣದಲ್ಲಿ ಅಮಿತ್‌ ಶಾ ಪಕ್ಕವೇ ನಿಂತಿದ್ದರು. ಅವರ ಹೋಗದಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ. ಇಂಥ ನಡೆ ಇಂಡಿಯಾ ಮೈತ್ರಿಕೂಟದ ಉದ್ದೇಶವನ್ನೇ ಹಾಳು ಮಾಡುತ್ತದೆ ಎಂದರು.

ಈ ನಡುವೆ ಅಧೀರ್‌ ಹೇಳಿಕೆಗೆ ತಿರುಗೇಟು ನೀಡಿರುವ ಟಿಎಂಸಿ ಸಂಸದ ಸಂತನು ಸೇನ್‌ (santanu sen), ಮುಖ್ಯಮಂತ್ರಿ ಯಾವಾಗ, ಎಲ್ಲಿಗೆ ಹೋಗಬೇಕು ಎಂಬ ಕುರಿತು ಅಧೀರ್‌ ಪಾಠ ಮಾಡುವ ಅವಶ್ಯಕತೆ ಇಲ್ಲ. ಆಡಳಿತಾತ್ಮಕ ದೃಷ್ಟಿಕೋನದಲ್ಲಿ ಮುಖ್ಯಮಂತ್ರಿ ಕೆಲವೊಂದು ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios