ಭಾರತದಲ್ಲಿ ಗೋವುಗಳಿಗೆ ಸರಿಯಾದ ಸುರಕ್ಷತೆ ಇಲ್ಲದಿರುವಾಗ, ಐರ್ಲೆಂಡ್‌ನಲ್ಲಿ ಪ್ರತಿ ಹಸುವಿಗೂ ಪಾಸ್‌ಪೋರ್ಟ್ ಕಡ್ಡಾಯ. ಈ ಪಾಸ್‌ಪೋರ್ಟ್ ವಿಶೇಷತೆ ಏನು ಅಂತ ನೋಡೋಣ ಬನ್ನಿ.
ಭಾರತ ಗೋವುಗಳನ್ನು ಪೂಜಿಸುವ ದೇಶ, ಮುಕ್ಕೋಟಿ ದೇವತೆಗಳು ಗೋವಿನಲ್ಲಿ ನೆಲೆಸಿವೆ ಎಂದು ನಂಬುವ ದೇಶ. ಆದರೆ ಇಂತಹ ದೇಶದಲ್ಲಿಯೇ ಗೋವುಗಳಿಗೆ ಸರಿಯಾದ ಸುರಕ್ಷತೆ ಇಲ್ಲ. ಹಾಲು ನೀಡುವ ಹಸುವಿನ ಕೆಚ್ಚಲು ಕಡಿಯುವಂತಹ ಗಬ್ಬದ ಹಸುಗಳನ್ನು ಬಿಡದೇ ಕಡಿದು ತಿನ್ನುವಂತಹ ಹಟ್ಟಿಯಲ್ಲಿ ಕಟ್ಟಿದ ದನಗಳನ್ನು ರಾತ್ರೋರಾತ್ರಿ ಕದ್ದೊಯ್ಯುವಂತಹ ಹಲವು ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿವೆ. ಆದರೆ ಭಾರತಕ್ಕಿಂತಲೂ ಎಷ್ಟು ಕಿಲೋ ಮೀಟರ್ ದೂರದಲ್ಲಿರುವ ಗೋವುಗಳನ್ನು ದೇವರೆಂದು ಪೂಜೆ ಮಾಡದ ಅವುಗಳಿಗೆ ಯಾವುದೇ ಧಾರ್ಮಿಕ ಸ್ಥಾನಮಾನ ನೀಡದ ದೇಶವೊಂದರಲ್ಲಿ ಗೋವಿಗೆ ನೀಡುವ ವಿಶೇಷ ಸ್ಥಾನಮಾನ ನೋಡಿದರೆ ನೀವು ನಿಜಕ್ಕೂ ಅಚ್ಚರಿ ಪಡುವಿರಿ. ಹೌದು ದೇಶದ ಪ್ರತಿಯೊಂದು ಗೋವುಗಳಿಗೂ ಫೋಟೋ ಇರುವಂತಹ ಪಾಸ್‌ಪೋರ್ಟ್ ಕಡ್ಡಾಯವಾಗಿ ಮಾಡಿರುವಂತಹ ದೇಶವೊಂದು ಇದೆ ಎಂದರೆ ಬಹುಶಃ ನಿಮಗೆ ಅಚ್ಚರಿ ಆಗಬಹುದು. ಆದರೆ ಇದು ನಿಜ.
ಇಲ್ಲಿ ಪ್ರತಿಹಸುವಿಗೂ ಇದೆ ಪಾಸ್‌ಪೋರ್ಟ್:
ಹೀಗೆ ದನಗಳಿಗೆ ಪಾಸ್‌ಪೋರ್ಟ್ ಮಾಡಿರುವ ದೇಶ ಯಾವುದು ಎಂದರೆ ಐರ್ಲೆಂಡ್. ಇಲ್ಲಿನ ಪ್ರತಿಯೊಂದು ಹಸುಕರು ದನಗಳಿಗೂ ಕಡ್ಡಾಯವಾಗಿ ಪಾಸ್‌ಪೋರ್ಟ್ ಮಾಡಿಸಲಾಗುತ್ತದೆ. ಆದರೆ ಹಸುಗಳಿಗೆ ಏಕೆ ಪಾಸ್‌ಪೋರ್ಟ್ ಎಂಬ ಕುತೂಹಲ ನಿಮ್ಮಲ್ಲಿ ಮೂಡಬಹುದು. ಪಶುಗಳ ಆಹಾರ ಸುರಕ್ಷತೆ, ಅವುಗಳು ಮೇಯಲು ದೂರ ಹೋಗಿದ್ದರೆ ಅವುಗಳನ್ನು ಪತ್ತೆಹಚ್ಚುವುದಕ್ಕೆ ಹಾಗೂ ಅವುಗಳ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಐರ್ಲೆಂಡ್ ತನ್ನ ದೇಶದ ಪ್ರತಿ ಹಸುವಿಗೂ ಪಾಸ್‌ಪೋರ್ಟ್ ಮಾಡಿಸುತ್ತಿದೆ.
ಈ ಹಸುಗಳ ಪಾಸ್‌ಪೋರ್ಟ್‌ನಲ್ಲಿ ಅವುಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳಿದ್ದು, ಅವುಗಳ ಜನ್ಮ ದಿನಾಂಕ, ಅವುಗಳ ತಳಿ, ಹೆಸರು, ಅವುಗಳು ವಾಸವಿರುವ ಸ್ಥಳ ಹಾಗೂ ಕೃಷಿ ಭೂಮಿ ಅವುಗಳ ಮಾಲೀಕರು ಹಾಗೂ ಮಾಲೀಕತ್ವ ಬದಲಾಗಿದ್ದರೆ ಅವುಗಳ ವಿವರ ಸೇರಿದಂತೆ ಪ್ರತಿಯೊಂದು ವಿವರಗಳು ಅಲ್ಲಿ ಇರುತ್ತವೆ.
ಇಲ್ಲಿ ಹಸುಗಳು ಜನಿಸಿದ ಸ್ವಲ್ಪ ಸಮಯದ ನಂತರ ಅವುಗಳಿಗೆ ಕೃಷಿ ಇಲಾಖೆಯಿಂದ ಪಾಸ್‌ಪೋರ್ಟ್ ಮಾಡಿಸಲಾಗುತ್ತದೆ. ಪ್ರತಿ ಹಸುವಿಗೂ ಪಾಸ್‌ಪೋರ್ಟ್‌ಗೆ ಹೊಂದಿಕೆಯಾಗುವಂತೆ ವಿಶಿಷ್ಟವಾದ ಐಡಿಗಳನ್ನು ಹೊಂದಿರುವ ಎರಡು ಇಯರ್ ಟ್ಯಾಗ್‌ಗಳನ್ನು ಅವುಗಳ ಕಿವಿಗಳಿಗೆ ಫಿಕ್ಸ್ ಮಾಡಲಾಗಿರುತ್ತದೆ.

ಈ ಪಾಸ್‌ಪೋರ್ಟ್ ಹಸುಗಳ ಪ್ರತಿ ಹೆಜ್ಜೆಯನ್ನು ದಾಖಲಿಸುತ್ತದೆ. ಕೊಟ್ಟಿಗೆಯಿಂದ ಹೋದ ಹಸು ಬೇರೆಯವರ ಜಮೀನುಗಳಿಗೆ ಹೋಗಿದ್ದರೆ ಅಥವಾ ಮಾರುಕಟ್ಟೆಗೆ ಹೋಗಿದ್ದರೆ ಅಥವಾ ಇನ್ನೆಲ್ಲಾದರು ತಪ್ಪಿಸಿಕೊಂಡಿದ್ದರೆ ತಕ್ಷಣವೇ ಅದರ ಮಾಲೀಕರಿಗೆ ಮಾಹಿತಿ ತಲುಪುತ್ತದೆ. ಇದರ ಜೊತೆಗೆ ಹಸುವಿಗೆ ನೀಡಿದ ಲಸಿಕೆ ಪಶುವೈದ್ಯರಿಂದ ತಪಾಸಣೆ ಮಾಡಿಸಿದ್ದರ ಅದರ ವಿವರ ಹೀಗೆ ಹಸುವಿಗೆ ಸಂಬಂಧಿಸಿದ ಪ್ರತಿಯೊಂದು ವಿವರವನ್ನು ಈ ಪಾಸ್‌ಪೋರ್ಟ್‌ಗೆ ದಾಖಲಿಸಲಾಗುತ್ತದೆ.
ಹೀಗೆ ನೀಡುವ ದಾಖಲೆಗಳು ಐರ್ಲೆಂಡ್‌ನ ಗೋಮಾಂಸವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸುವುದಕ್ಕೂ ಸಹಾಯ ಮಾಡುತ್ತದೆಯಂತೆ. ಐರ್ಲೆಂಡ್‌ನಲ್ಲಿ ಎಐಎಂ ಎಂಬ ವಿಧಾನದ ಮೂಲಕ ಪ್ರಾಣಿಗಳ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಐರ್ಲೆಂಡ್‌ನ ಈ ಹಸುಗಳ ಪಾಸ್‌ಪೋರ್ಟ್ ಅದರ ಪಾರದರ್ಶಕತೆ ಹಾಗೂ ದಕ್ಷತೆಯ ಕಾರಣಕ್ಕಾಗಿ ವಿಶ್ವದೆಲ್ಲೆಡೆ ಹೆಸರುವಾಸಿಯಾಗಿದೆ.

ನೋಡಿದ್ರಲ್ಲ, ಐರ್ಲೆಂಡ್ ಮಾಂಸಾಹಾರಿಗಳ ದೇಶ ಆದರೂ ಹಸುಗಳನ್ನು ನಿರ್ವಹಿಸುವುದಕ್ಕೆ ಅವುಗಳ ರಕ್ಷಣೆಗೆ ಆ ದೇಶ ಕೈಗೊಂಡಿರುವ ಕಾರ್ಯವಿಧಾನ ಬಹಳ ಅದ್ಭುತವಾದುದು. ಗೋವುಗಳ ರಕ್ಷಣೆಯಾಗಬೇಕು ಗೋವುಗಳ ದೇಶದ ಆಸ್ತಿ ನಮ್ಮ ಅಸ್ಮಿತೆಯ ಭಾಗ ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳು ಬರೀ ಬೀದಿಗಳಲ್ಲಿ ನಿಂತು ಭಾಷಣ ಮಾಡುವ ಬದಲು ಇದೊಂದು ಕಾರ್ಯವಿಧಾನವನ್ನು ಜಾರಿಗೆ ತರಲು ಮುಂದಾದರೆ ಯಾವ ಹಸುಕರುಗಳು ಅಕ್ರಮವಾಗಿ ಕಸಾಯಿ ಖಾನೆಗೆ ಸೇರುವುದು ತಪ್ಪುತ್ತದೆ. ಈ ಬಗ್ಗೆ ನೀವೇನಂತರಿ.
