ನಮ್ಮ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪು ಕೇವಲ ದಕ್ಷಿಣ ಭಾರತದಲ್ಲಷ್ಟೇ ಪ್ರಖ್ಯಾತವಲ್ಲ, ದೇಶದಾದ್ಯಂತ ಬಹುತೇಕ ಮಂದಿಗಿದು ಅಚ್ಚುಮೆಚ್ಚು. ದೀಪಾವಳಿ ಹಾಗೂ ಪ್ರಮುಖ ಹಬ್ಬದ ದಿನ ಇದನ್ನು ವಿಶೇಷವಾಗಿ ಬಳಸುತ್ತಾರೆ. ಆದರೆ ಮೈಸೂರ್ ಸ್ಯಾಂಡಲ್ ಉತ್ಪಾದಿಸುವ ಐಡಿಯಾ ಬಂದಿದ್ದು ಹೇಗೆ ಎಂಬ ವಿಚಾರ ತಿಳಿದಿದೆಯಾ? ಮಾಜಿ ಕ್ರಿಕೆಟ್ ನಾಯಕ ಧೋನಿ ಹಾಗೂ ಈ ಸೋಪಿನ ನಡುವಿನ ನ್ಯಾಯಾಂಗ ಸಂಬಂಧವೇನು? 

ಮೈಸೂರು ಸ್ಯಾಂಡಲ್ ವುಡ್ ಸೋಪು- ಐಡಿಯಾ ಬಂದಿದ್ದು ಹೇಗೆ?

ಒಂದು ಬಾರಿ ಮೈಸೂರಿನ ಮಹಾರಾಜರಿಗೆ ಭಾರತೀಯ ಗಂಧದ ಮರದ ಎಣ್ಣೆಯಿಂದ ಮಾಡಿದ ಸಾಬೂನನ್ನು ಪ್ಯಾಕ್ ಒಂದನ್ನು ಉಡುಗೊರೆಯಗಿ ನೀಡಲಾಗಿತ್ತು. ಈ ಮೂಲಕ ಗಂಧದಿಂದ ಸಾಬೂನನ್ನು ಮಾಡುವ ಐಡಿಯಾ ಜಾರಿಗೆ ಬಂತು.
 
102 ವರ್ಷದ ಇತಿಹಾಸ ಹೊಂದಿರುವ ಸಾಬೂನು

ಮೈಸೂರು ಸ್ಯಾಂಡಲ್ ಸೋಪನ್ನು ಕರ್ನಾಟಕ ರಾಜ್ಯದ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್(KSDL) ಉತ್ಪಾದಿಸುತ್ತದೆ. KSDL ಇತ್ತೀಚೆಗಷ್ಟೇ ಈ ಸಾಂಪ್ರದಾಯಿಕ ಸಾಬೂನು ಉತ್ಪಾದನೆಯಲ್ಲಿ 102 ವರ್ಷಗಳನ್ನು ಪೂರೈಸಿದೆ. 1918ರಲ್ಲಿ ಮೊದಲ ಬಾರಿ ಈ ಸಾಬೂನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು.

100 ವರ್ಷದಿಂದ ಮೈಸೂರು ಸ್ಯಾಂಡಲ್ ಸೋಪ್ ಭಾರತೀಯರ ಫೆವರಿಟ್!

ಮೊದಲ ಜಾಗತಿಕ ಯುದ್ಧವು ಸ್ಯಾಂಡಲ್ ವುಡ್ ಆಯ್ಲ್ ಬಳಕೆಗೆ ಮತ್ತಷ್ಟು ಇಂಬು ನೀಡಿತು

ಮೈಸೂರು ಹಿಂದಿನಿಂದಲೂ ಗಂಧಕ್ಕೆ ಹೆಸರುವಾಸಿ. ಆದರೆ ಮೊದಲನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಅವುಗಳನ್ನು ಯೂರೋಪ್ ಗೆ ರಫ್ತು ಮಾಡುವುದು ಅಸಾಧ್ಯವಾಗಿತ್ತು. ಇದು ಗಂಧದ ಎಣ್ಣೆಯ ಸಾಬೂನುಗಳನ್ನು ಉತ್ಪಾದಿಸುವ ಕಾರ್ಖಾನೆ ನಿರ್ಮಿಸುವ ಯೋಚನೆ ಹುಟ್ಟು ಹಾಕಿತು.

ಎಸ್. ಜಿ ಶಾಸ್ತ್ರಿ ಗಂಧದ ಸಾಬೂನಿಗೆ ಬೇಕಾದ ಸುಗಂಧ ದ್ರವ್ಯವನ್ನು ಅಭಿವೃದ್ಧಿಪಡಿಸಿದರು

ಕೈಗಾರಿಕಾ ರಸಾಯನಶಾಸ್ತ್ರಜ್ಞ ಎಸ್. ಜಿ ಶಾಸ್ತ್ರಿ ಇದಕ್ಕಾಗಿ ಬೇಕಾದ ಗಂಧದ ಸುಗಂಧ ದ್ರವ್ಯ ಅಭಿವೃದ್ಧಿಪಡಿಸಿದರು. ಇದು ಅಂದು ಉತ್ಪಾದಿಸಲಾದ ಮೊದಲ ಸ್ಯಾಂಡಲ್ ಸೋಪಿಗೆ ಬಳಸಲಾಯಿತು. ಈ ಸುವಾಸನೆ ಶತಮಾನಕ್ಕೂ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. 

ಶೇ. 100 ರಷ್ಟು ಗಂಧದ ಎಣ್ಣೆಯಿಂದ ಮಾಡಲಾಗುವ ಏಕೈಕ ಸಾಬೂನು

ಮೈಸೂರು ಸ್ಯಾಂಡಲ್ ಸೋಪು ಶೇ. 100 ರಷ್ಟು ಗಂಧದ ಎಣ್ಣೆಯಿಂದಲೇ ಉತ್ಪಾದಿಸಲಾಗುವ ಜಗತ್ತಿನ ಏಕೈಕ ಸಾಬೂನು ಎಂಬ ಹೆಗ್ಗಳಿಕೆ ಗಳಿಸಿದೆ. ಈ ಸೋಪಿನ ಮೆಲೆ KSDL ಬೌದ್ಧಿಕ ಆಸ್ತಿ ಹಕ್ಕನ್ನು ಹೊಂದಿದೆ. ಇದು ಕಂಪೆನಿಗೆ ಸಾಬೂನಿನ ಮೇಲೆ ಸಂಪೂರ್ಣ ಹಕ್ಕು ನೀಡುತ್ತದೆ. ಅಲ್ಲದೇ ಅನಧಿಕೃತ ಕಂಪೆನಿಗಳು ಇದನ್ನು ದುರುಪಯೋಗಪಡಿಸುವುದನ್ನೂ ತಡೆಯುತ್ತದೆ.

ಎಂ. ಎಸ್ ಧೋನಿ ಮೊದಲ ರಾಯಭಾರಿ

2006ರಲ್ಲಿ KSDL ಮೈಸೂರ್ ಸ್ಯಾಂಡಲ್ ವುಡ್ ಸೋಪಿನ ಪ್ರಚಾರಕ್ಕಾಗಿ ಮೊದಲ ಬಾರಿ ಮಹೇಂದ್ರ ಸಿಂಗ್ ಧೋನಿಯನ್ನು ರಾಯಭಾರಿಯನ್ನಾಗಿಸಿತು. ಆದರೆ ಇದು ಹೆಚ್ಚು ಕಾಲ ಮುಂದುವರೆಯಲಿಲ್ಲ. ಧೋನಿ ವಾಣಿಜ್ಯ ಬದ್ಧತೆಯನ್ನು ಮುರಿದಿದ್ದಾರೆ ಎಂದು ಕಂಪೆನಿ ಆಯುಕ್ತರು ಆರೋಪಿಸಿದರು. ಆದರೆ ನ್ಯಾಯಾಲಯದಲ್ಲಿ ಈ ಪ್ರಕರಣದಲ್ಲಿ ಧೋನಿಯೇ ಮೇಲುಗೈ ಸಾಧಿಸಿದರು.

KSDL ಬಹುದೊಡ್ಡ ಕಾರ್ಖಾನೆಗಳಲ್ಲೊಂದು

ಮೈಸೂರ್ ಸ್ಯಾಂಡಲ್ ವುಡ್ ಸೋಪು ಉತ್ಪಾದಿಸುವ ಬೆಂಗಳೂರಿನಲ್ಲಿರುವ ಮೈಸೂರ್ KSDL ಕಾರ್ಖಾನೆ ದೇಶದ ಬಹುದೊಡ್ಡ ಕಾರ್ಖಾನೆಗಳಲ್ಲೊಂದು. ಇದು ವರ್ಷವೊಂದಕ್ಕೆ 26,000 ಟನ್ ಸೋಪು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಶೇ. 85ರಷ್ಟು ಮಾರಾಟವನ್ನು ಕೇವಲ ದಕ್ಷಿಣ ಭಾರತದ ಮೂರು ರಾಜ್ಯಗಳಿಗೆ ಸೀಮಿತ

ಮೈಸೂರ್ ಸ್ಯಾಂಡಲ್ ವುಡ್ ಸೋಪು ದೇಶದೆಲ್ಲೆಡೆ ಲಭ್ಯವಿದ್ದರೂ ಶೇ. 85ರಷ್ಟು ಮಾರಾಟವನ್ನು ಕೇವಲ ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿಗೆ ಸೀಮಿತಗೊಳಿಸಲಾಗಿದೆ. ಇದನ್ನು ಬಳಸುವ ಗ್ರಾಹಕರಲ್ಲಿ ಅಧಿಕ ಮಂದು 40 ವರ್ಷ ಮೇಲ್ಪಟ್ಟವರಾಗಿದ್ದಾರೆ. ಯುವ ಜನರು ಇದನ್ನು ಬಳಸಲು ಇನ್ನಷ್ಟೇ ಆರಂಭಿಸಬೇಕಿದೆ.