28 ವರ್ಷದ ಯುವ ಉದ್ಯಮಿಯೊಬ್ಬರು ಕೋಟಿ ಸಂಪಾದಿಸುತ್ತಿದ್ದರೂ ನೆಮ್ಮದಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆರೋಗ್ಯ ಹದಗೆಟ್ಟಿದೆ, ಆಯಾಸದಿಂದ ಬಳಲುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಖುಷಿ ನೆಮ್ಮದಿ ಎನ್ನುವುದನ್ನು ಹಣದಿಂದಾಗಿ ಐಷಾರಾಮಿ ಜೀವನದಿಂದಾಗಲಿ ಪಡೆಯಲು ಸಾಧ್ಯವಿಲ್ಲ. ಇದರ ಬಗ್ಗೆ ಅನೇಕರು ಹೇಳಿಕೊಂಡಿದ್ದಾರೆ. ಅದು ಎಂತಹ ವಸ್ತುವೇ ಆಗಿರಲಿ ಎಲ್ಲವೂ ಸಿಕ್ಕ ಮೇಲೆ ನಮಗದರ ಮೇಲೆ ವ್ಯಾಮೋಹ ಹೋಗುತ್ತದೆ ಇದು ಸತ್ಯ ಕೂಡ ಅದೇ ರೀತಿ 28 ವರ್ಷದ ಭಾರತೀಯ ಯುವ ಉದ್ಯಮಿಯೊಬ್ಬರು ರೆಡಿಟ್‌ನಲ್ಲಿ ಯಶಸ್ಸು, ಹಣ ಹಾಗೂ ಭಾವನಾತ್ಮಕ ನೆಮ್ಮದಿಯ ಬಗ್ಗೆ ಬರೆದುಕೊಂಡು ಮಾಡಿದ ಪೋಸ್ಟ್ ಒಂದು ಭಾರಿ ವೈರಲ್ ಆಗಿದೆ. ಯಶಸ್ವಿ ಉದ್ಯಮಿ ಎನಿಸಿದ್ದರು, ಪ್ರೀಮಿಯಂ ಕಾರು, ವಿದೇಶದಲ್ಲಿ ಪ್ರವಾಸ ಕೋಟ್ಯಾಂತರ ಮೊತ್ತದ ಬ್ಯಾಂಕ್ ಬ್ಯಾಲೆನ್ಸ್ ಇದೆಲ್ಲವೂ ಇದ್ದರೂ ತಾನು ಖುಷಿಯಾಗಿಲ್ಲ ಎಂದು ಉದ್ಯಮಿಯೊಬ್ಬರು ಹೇಳಿಕೊಂಡಿದ್ದಾರೆ.
ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ನಾನು ವಾರ್ಷಿಕವಾಗಿ 1 ಕೋಟಿಗೂ ಹೆಚ್ಚು ಸಂಪಾದಿಸುತ್ತೇನೆ , ಆದರೆ ನಾನು ಸಂತೋಷವಾಗಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ತಮಗೆ ಸಿಕ್ಕ ಎಲ್ಲಾ ಆರ್ಥಿಕ ಯಶಸ್ಸು ತಮಗೆ ಸಂತೋಷ ತಂದಿದೆಯೇ ಎಂದು ಬಳಕೆದಾರರೊಬ್ಬರು ಕೇಳಿದಾಗ ಅವರು ಹೀಗೆ ಉತ್ತರಿಸಿದ್ದಾರೆ. ಮೊದಲೆಲ್ಲಾ ನಾನು ಸದಾ ಖುಷಿಯಾಗಿರುವ ಮುಕ್ತ ಮನಸ್ಸಿನ ವ್ಯಕ್ತಿಯಾಗಿದ್ದೆ ಈಗ ನಾನು ಯಾವಾಗಲೂ ಆತಂಕದಿಂದಲೇ ಇರುತ್ತೇವೆ. ನನ್ನ ಆರೋಗ್ಯವು ಕೆಟ್ಟದಾಗಿದೆ, ಮತ್ತು ನನ್ನ ಬಳಿ ಹಣವಿದ್ದರೂ, ನಾನು ಅದನ್ನು ಆನಂದಿಸಲು ಸಾಧ್ಯವಿಲ್ಲ. ದೀರ್ಘ ಪ್ರವಾಸಗಳ ಪ್ರಶ್ನೆಯೇ ಇಲ್ಲ ನಾನು ಆಯಾಸಗೊಳ್ಳುವಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ನಾನು ಕೆಳಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವನು, 12ನೇ ತರಗತಿಯ ನಂತರ ವಿದ್ಯಾರ್ಥಿವೇತನದ ಮೂಲಕ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಪದವಿ ಪಡೆದಿದ್ದೇನೆ. 2017 ರಲ್ಲಿ ಉದ್ಯಮಿಯಾಗುವ ಗುರಿಯೊಂದಿಗೆ ನಾನು ಮಾಡಿದ ₹1 ಲಕ್ಷ ಹೂಡಿಕೆ ವಿಫಲವಾಯಿತು. 2020ರಲ್ಲಿ ಕೋವಿಡ್ ಸಮಯದಲ್ಲಿ ನನ್ನ ದಿನಚರಿ ಬದಲಾಯ್ತು, ನಾನು ಸಿಎ ಫಲಿತಾಂಶಕ್ಕಾಗಿ ಕಾಯುತ್ತಿದ್ದೆ. ಹೀಗಾಗಿ ಆ ಖಾಲಿ ಸಮಯವನ್ನು ಬಳಸಿಕೊಂಡು ಇನ್ಸ್ಟಾಗ್ರಾಮ್‌ನಲ್ಲಿ ಸೇವಾ ಆಧಾರಿತ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಿದೆ. ಆದರೆ ಇದಕ್ಕಾಗಿ ಯಾವುದೇ ಹೂಡಿಕೆ ಮಾಡಿರಲಿಲ್ಲ, ಕೇವಲ ಡಿಜಿಟಲ್ ಮಾರ್ಕೆಟಿಂಗ್, ಮತ್ತು ಶೀಘ್ರದಲ್ಲೇ ನಾನು ತಿಂಗಳಿಗೆ ₹1 ರಿಂದ 2 ಲಕ್ಷ ಗಳಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಯಶಸ್ಸಿನ ನಂತರ ಅವರು ಅನೇಕ ಉದ್ಯಮಗಳನ್ನು ಸ್ಥಾಪಿಸಿದ್ದಾರೆ. ದುಬೈನಲ್ಲೂ ಕಾರ್ಯಾಚರಣೆ ಆರಂಭಿಸಿದ್ದಾರೆ, ಅದರಿಂದಲೂ ಈಗಾಗಲೇ ಆದಾಯ ಬರುತ್ತಿದೆ. ಇನ್ನು ವಿಶೇಷ ಎಂದರೆ ಅವರು ಯಾವುದೇ ಸಾಲವನ್ನು ತೆಗೆದುಕೊಳ್ಳದೆ ಅಥವಾ ವೈಯಕ್ತಿಕ ಬಂಡವಾಳವನ್ನು ಕೂಡ ಬಳಸದೆ ತಮ್ಮ ಎಲ್ಲಾ ವ್ಯವಹಾರಗಳನ್ನು ಬೆಳೆಸಿದ್ದಾಗಿ ಹೇಳಿಕೊಂಡಿದ್ದಾರೆ, ಅಲ್ಲದೇ ಲಾಭವನ್ನು ಕಂಪನಿಯಲ್ಲಿ ಮರುಹೂಡಿಕೆ ಮಾಡಿದ್ದಾಗಿ ಹೇಳಿದ್ದಾರೆ.
ಇಂದು ಅವರ ಸಾಧನೆ ನೋಡಿ ಅವರ ಪೋಷಕರು ಹೆಮ್ಮೆ ಪಡುತ್ತಾರೆ. ಇಂದು ನಾವು ಏನನ್ನಾದರು ಖರೀದಿಸುವಾಗ ಅದರ ಬೆಲೆಯನ್ನು ನೋಡುವ ಅಗತ್ಯವಿಲ್ಲ ಹಣವೂ ನಮಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಆದರೆ ಇಂದು ನಾನು ನೆಮ್ಮದಿಯನ್ನು ಕಳೆದುಕೊಂಡಿದ್ದೇನೆ, ನಾನು ಬಹಳ ಸಮಯದವರೆಗೆ ಕೆಲಸ ಮಾಡುತ್ತೇನೆ ನಾನು ಸರಿಯಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಅನೇಕರನ್ನು ಸೆಳೆದಿದೆ. ಅನೇಕರು ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ಮಾಡಿದ್ದು,ನಿಜವಾದ ಯಶಸ್ಸು ಹೇಗಿರುತ್ತದೆ ಎಂಬುದರ ಕುರಿತು ಚರ್ಚೆ ಮಾಡಿದ್ದಾರೆ. ಅನೇಕರು ತಮ್ಮ ಆರೋಗ್ಯದ ಕಡೆಯೂ ಗಮನ ನೀಡುವಂತೆ ಈ ಯುವ ಉದ್ಯಮಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ವ್ಯಯಕ್ತಿಕ ಬದುಕು ಹಾಗೂ ಕೆಲಸದ ನಡುವೆ ಸಮತೋಲನ ಸಾಧಿಸುವಂತೆ ಸಲಹೆ ನೀಡಿದ್ದಾರೆ.
ಡ್ಯೂಡ್, ನಿನ್ನಲ್ಲಿ ಎಲ್ಲವೂ ಇದೆ.. ನೀನು ಅನೇಕರ ಕನಸಿನ ಜೀವನವನ್ನು ನಡೆಸುತ್ತಿದ್ದೀಯ ಮತ್ತು ಇದೆಲ್ಲವೂ ನನಗೆ ತುಂಬಾ ಸಂತೋಷವಾಗಿ ಕಾಣುತ್ತಿದೆ ಎಂದು ಒಬ್ಬರು ಬರೆದಿದ್ದಾರೆ. ನಿಮ್ಮ ಯಶಸ್ಸಿನ ಬಗ್ಗೆ ನೀವು ಎಷ್ಟು ಸೂಕ್ಷ್ಮವಾಗಿ ಮಾತನಾಡುತ್ತಿದ್ದೀರಿ ಎಂಬುದು ನನಗೆ ತುಂಬಾ ಇಷ್ಟವಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸಾಲವಿಲ್ಲದ ಮತ್ತು ಸರಳ ಜೀವನಶೈಲಿ ಉತ್ತಮ ಮಾರ್ಗ ಅಭಿನಂದನೆಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
