ಮಹಾರಾಷ್ಟ್ರದಲ್ಲಿ ಟೆಸ್ಲಾ ಕಾರ್ ಫ್ಯಾಕ್ಟರಿ ಬಹುತೇಕ ಖಚಿತ, ಟಾಟಾ ಮೋಟಾರ್ಸ್ ಉದ್ಯೋಗಿಗಳಿಗೆ ಬಂತು ಜಾಬ್ ಕಾಲ್!
ಟೆಸ್ಲಾ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಮತ್ತು ಮಹಾರಾಷ್ಟ್ರದಲ್ಲಿ ತನ್ನ ಮೊದಲ ಫ್ಯಾಕ್ಟರಿಯನ್ನು ಸ್ಥಾಪಿಸುವ ಸಾಧ್ಯತೆಯಿದೆ. ಪುಣೆಯಲ್ಲಿ ಈಗಾಗಲೇ ಕಚೇರಿಯನ್ನು ಹೊಂದಿರುವ ಟೆಸ್ಲಾ, ಚಕನ್ ಅಥವಾ ಚಿಖಾಲಿಯಲ್ಲಿ ಫ್ಯಾಕ್ಟರಿ ಸ್ಥಾಪಿಸಲು ಜಾಗವನ್ನು ಹುಡುಕುತ್ತಿದೆ.

ಬೆಂಗಳೂರು (ಫೆ.19): ಎಲೆಕ್ಟ್ರಿಕ್ ವೆಹಿಕಲ್ ಮೇಕರ್ ಟೆಸ್ಲಾ ಭಾರತಕ್ಕೆ ಎಂಟ್ರಿಯಾಗೋದು ಬಹುತೇಕ ನಿಶ್ಚಿತವಾಗಿದೆ. ಭಾರತದಲ್ಲಿ ತನ್ನ ಕಂಪನಿಯನ್ನು ಆರಂಭ ಮಾಡುವ ನಿಟ್ಟಿನಲ್ಲಿ ಜಾಗದ ಹುಡುಕಾಟದಲ್ಲಿದ್ದು, ಬಹುತೇಕ ಮಹಾರಾಷ್ಟ್ರದಲ್ಲಿ ಟೆಸ್ಲಾದ ಮೊದಲ ಫ್ಯಾಕ್ಟರಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈಗಾಗಲೇ ಟೆಸ್ಲಾ ಕಚೇರಿ ಇದೆ. ಅದಲ್ಲದೆ, ಟೆಸ್ಲಾ ವಾಹನ ನಿರ್ಮಾಣಕ್ಕೆ ಬೇಕಾದ ಬಿಡಿಭಾಗಗಳನ್ನು ತಯಾರಿಸುವ ಸಾಕಷ್ಟು ಸಪ್ಲೈಯರ್‌ಗಳು ಇದೇ ಪ್ರದೇಶದಲ್ಲಿರುವ ಕಾರಣ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಮಹಾರಾಷ್ಟ್ರದ ಪುಣೆಯನ್ನೇ ಟೆಸ್ಲಾ ಫ್ಯಾಕ್ಟರಿಗೆ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಇದಲ್ಲದೆ, ಮಹಾರಾಷ್ಟ್ರ ಸರ್ಕಾರ ಕೂಡ ಚಕನ್ ಹಾಗೂ ಚಿಖಾಲಿಯಲ್ಲಿ ಟೆಸ್ಲಾ ಕಂಪನಿಗೆ ಜಾಗವನ್ನು ನೀಡುವುದಾಗಿ ಆಫರ್ ಮಾಡಿದೆ. ಈ ಎರಡೂ ಪ್ರದೇಶಗಳು ಪುಣೆಗೆ ಬಹಳ ಸಮೀಪದಲ್ಲಿವೆ. ಇನ್ನು ಚಕನ್ ಭಾರತದ ಅತಿದೊಡ್ಡ ಆಟೋ ಮ್ಯಾನ್ಯುಫೆಕ್ಚರಿಂಗ್ ಹಬ್ ಆಗಿ ರೂಪುಗೊಂಡಿದೆ. ವಿಶ್ವದ ಪ್ರಮುಖ ಕಾರ್ ಕಂಪನಿಗಳಾದ ಮರ್ಸಿಡೀಸ್ ಬೆಂಜ್, ಟಾಟಾ ಮೋಟಾರ್ಸ್,ಫೋಕ್ಸ್‌ವಾಗನ್ ಸೇರಿದಂತೆ ಇತರ ಕಂಪನಿಗಳ ಪ್ರೊಡಕ್ಷನ್ ಪ್ಲ್ಯಾಂಟ್ ಇದೇ ಪ್ರದೇಶದಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಮಸ್ಕ್ ಅವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲಿಯೇ ಭಾರತದಲ್ಲಿ ಟೆಸ್ಲಾ ಕಂಪನಿಯ ಯೋಜನೆಗಳು ಮತ್ತಷ್ಟು ಬಲಗೊಂಡಿದ್ದವು. ಟೆಸ್ಲಾದಲ್ಲಿ ಹೊಸ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಕಂಪನಿ ಟಾಟಾ ಮೋಟಾರ್ಸ್‌ನ ಹಲವು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರೆ ಮಾಡಿದೆ ಎಂದು ವರದಿಯಾಗಿದೆ.
ಈ ಹಿಂದೆ, ಬ್ಲೂಮ್‌ಬರ್ಗ್ ಟೆಸ್ಲಾ ಭಾರತದಲ್ಲಿ ತನ್ನ ನೆಲೆಯನ್ನು ನೇಮಕಾತಿ ಯೋಜನೆಗಳೊಂದಿಗೆ ಬಲಪಡಿಸುತ್ತಿದೆ ಎಂದು ವರದಿ ಮಾಡಿತ್ತು, ಇದು ಶೀಘ್ರದಲ್ಲೇ ಮಾರುಕಟ್ಟೆಯನ್ನು ಪ್ರವೇಶಿಸಲು ಬಯಸುತ್ತಿದೆ ಎಂಬ ಮಾಹಿತಿಯನ್ನು ನೀಡಿತ್ತು. ಎಲೆಕ್ಟ್ರಿಕ್-ವಾಹನ ತಯಾರಕ ಕಂಪನಿಯು ಗ್ರಾಹಕ-ಮುಖಿ ಮತ್ತು ಬ್ಯಾಕ್-ಎಂಡ್ ಉದ್ಯೋಗಗಳು ಸೇರಿದಂತೆ 13 ಸೀನಿಯರ್ ಫೋಸ್ಟ್‌ಗಳಿಗೆ ಅಭ್ಯರ್ಥಿಗಳನ್ನು ಹುಡುಕುತ್ತಿದೆ ಎಂದು ಸೋಮವಾರ ತನ್ನ ಲಿಂಕ್ಡ್‌ಇನ್ ಪುಟದ ಜಾಹೀರಾತಿನಲ್ಲಿ ತಿಳಿಸಿತ್ತು.
ಎಲಾನ್ ಮಸ್ಕ್ ಪತ್ನಿ, ಗೆಳತಿಯರು ಮತ್ತು 13 ಮಕ್ಕಳ ರಹಸ್ಯ; ಉದ್ಯಮಿಯ ಖಾಸಗಿ ಜೀವನ ಫುಲ್ ಸಸ್ಪೆನ್ಸ್
ಟೆಸ್ಲಾ ಮತ್ತು ಭಾರತ ವರ್ಷಗಳಿಂದ ಪರಸ್ಪರ ಒಪ್ಪಂದ ಮಾಡಿಕೊಂಡಿವೆ, ಆದರೆ ಹೆಚ್ಚಿನ ಆಮದು ಸುಂಕದ ಬಗ್ಗೆ ಕಳವಳ ವ್ಯಕ್ತಪಡಿಸಿ ಕಾರು ತಯಾರಕರು ದಕ್ಷಿಣ ಏಷ್ಯಾದ ರಾಷ್ಟ್ರದಿಂದ ದೂರ ಉಳಿದಿದ್ದರು. ಭಾರತವು ಈಗ $40,000 ಕ್ಕಿಂತ ಹೆಚ್ಚಿನ ಬೆಲೆಯ ಉನ್ನತ ದರ್ಜೆಯ ಕಾರುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು 110% ರಿಂದ 70% ಕ್ಕೆ ಇಳಿಸಿದೆ. ಚೀನಾಕ್ಕೆ ಹೋಲಿಸಿದರೆ ಭಾರತದ ವಿದ್ಯುತ್ ವಾಹನ ಮಾರುಕಟ್ಟೆ ಇನ್ನೂ ಹೊಸತನವನ್ನು ಕಂಡಿದ್ದರೂ, ಕಳೆದ ಒಂದು ದಶಕದಲ್ಲಿ ಮೊದಲ ಬಾರಿಗೆಎ ವಾರ್ಷಿಕ ವಿದ್ಯುತ್ ವಾಹನಗಳ ಮಾರಾಟ ಕುಸಿತ ಕಂಡ ನಂತರ ಟೆಸ್ಲಾ ನಿಧಾನಗತಿಯ ಮಾರಾಟವನ್ನು ಪರಿಶೀಲಿಸಲು ಇನ್ನೊಂದು ಮಾರ್ಗ ಹುಡುಕಾಟದಲ್ಲಿದೆ. ಕಳೆದ ವರ್ಷ ಭಾರತದ ವಿದ್ಯುತ್ ವಾಹನಗಳ ಮಾರಾಟವು ಚೀನಾದ 11 ಮಿಲಿಯನ್ ಯುನಿಟ್‌ಗಳಿಗೆ ಹೋಲಿಸಿದರೆ 100,000 ಯುನಿಟ್‌ಗಳ ಸಮೀಪಕ್ಕೆ ತಲುಪಿದೆ.
ಪ್ರಮುಖ ಹುದ್ದೆಗಳಿಗೆ ಕರೆ ಕೊಟ್ಟ ಟೆಸ್ಲಾ ಇಂಡಿಯಾ, ಈಗಲೇ ಅರ್ಜಿ ಸಲ್ಲಿಸಿ