ನವದೆಹಲಿ(ಆ.31): ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಬದಲಾವಣೆಗಳು ಸಹಜ. ಅದರಂತೆ ಒಂದು ಕೋಟಿ ರೂ.ಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಮಾಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ನೂತನ ವ್ಯವಸ್ಥೆ ನಾಳೆ(ಸೆ.01)ರಿಂದಲೇ ಜಾರಿಗೆ ಬರಲಿದ್ದು, ಆ.31ರವರೆಗೆ 1 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ನಗದನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ರಾಹಕರು ವಿತ್ ಡ್ರಾ ಮಾಡಿದ್ದರೆ ಅವರಿಗೂ ಶೇ.2ರಷ್ಟು ಟಿಡಿಎಸ್ ಕಡಿತ ಅನ್ವಯವಾಗುತ್ತದೆ. 

ಕಳೆದ ಕೇಂದ್ರ ಬಜೆಟ್’ನಲ್ಲಿ 1 ಕೋಟಿ ರೂ. ಅಧಿಕ ಹಣವನ್ನು ವಿತ್ ಡ್ರಾ ಮಾಡಿದ ಗ್ರಾಹಕರ ಮೇಲೆ ಶೇ.2ರಷ್ಟು ಟಿಡಿಎಸ್ ಹಾಕುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. 

ಬ್ಯಾಂಕ್’ಗಳಲ್ಲಿ ಗಳಲ್ಲಿ ನಗದು ವಹಿವಾಟುಗಳಿಗೆ ಕಡಿವಾಣ ಹಾಕಿ ಡಿಜಿಟಲ್ ಮೂಲಕ ವ್ಯವಹಾರ ಉತ್ತೇಜಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. 

ಸೆಪ್ಟೆಂಬರ್ 1ರಿಂದ ಮೊದಲು 1 ಕೋಟಿ ರೂ.ಗಿಂತ ಕಡಿಮೆ ನಗದು ಮೊತ್ತ ವಿತ್ ಡ್ರಾ ಮಾಡಿದ್ದರೆ ಟಿಡಿಎಸ್ ಅನ್ವಯವಾಗುವುದಿಲ್ಲ, ಆದರೆ ಹಣಕಾಸು ಕಾಯ್ದೆ 194 ಎನ್ ಅಡಿಯಲ್ಲಿ ಏ.1ರಿಂದ ಇಲ್ಲಿಯವರೆಗೆ ನಗದು ವಿತ್ ಡ್ರಾ ಮಾಡಿ, ಅದರ ಮೊತ್ತ 1 ಕೋಟಿ ರೂ. ದಾಟಿದ್ದರೆ ಶೇ.2ರಷ್ಟು ಟಿಡಿಎಸ್ ಕಡಿತವಾಗುತ್ತದೆ. 

ಅಲ್ಲದೆ ಆ.31ರವರೆಗೆ ವ್ಯಕ್ತಿ ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಿಂದ ವಿತ್ ಡ್ರಾ ಮಾಡಿದ ಹಣದ ಮೊತ್ತ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಮುಂದಿನ ವಿತ್ ಡ್ರಾಗಳಿಗೆ ಶೇ.2ರಷ್ಟು ಟಿಡಿಎಸ್ ಕಡಿತ ಅನ್ವಯವಾಗುತ್ತದೆ.