ಬಜೆಟ್ ಮೂಲಕ ಜೈ ಜವಾನ್, ಜೈ ಕಿಸಾನ್, ಜೈ ಮಿಡಲ್ ಕ್ಲಾಸ್ ಎಂದ ಮೋದಿ| ತೆರಿಗೆ ಹೊರೆ ಇಳಿಸಿ ಸೈ ಎನಿಸಿಕೊಂಡ ಮೋದಿ ಸರ್ಕಾರ| ಆದಾಯ ತೆರಿಗೆ ಮಿತಿ ಎರಡೂವರೆ ಲಕ್ಷದಿಂದ 5 ಲಕ್ಷಕ್ಕೆ ಏರಿಕೆ| 5 ಲಕ್ಷ ರೂ.ವರೆಗಗಿನ ಹೂಡಿಕೆಗೆ ಟ್ಯಾಕ್ಸ್ ಹೊರೆ ಇಲ್ಲ| ಶಿಕ್ಷಣ ಸಾಲ, ಮೆಡಿಕಲ್ ಇನ್ಶೂರೆನ್ಸ್ ಗೆ ತೆರಿಗೆ ವಿನಾಯ್ತಿ| ಹಿರಿಯ ನಾಗರಿಕರ ಔಷಧ ಮತ್ತು ಮೆಡಿಕಲ್ ವೆಚ್ಚಕ್ಕೂ ಇಲ್ಲ ತೆರಿಗೆ| ಟಿಡಿಎಸ್ ಮಿತಿ 10 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಳ
ನವದೆಹಲಿ(ಫೆ.02): ಬಜೆಟ್ ಎಂಬ ಮಂತ್ರ ಹಿಡಿದ ಪಿಯೂಶ್ ಗೋಯೆಲ್ ದೊಡ್ಡ ಮ್ಯಾಜಿಕ್ ಮಾಡಿದ್ದಾರೆ. ಮೋದಿ ಬತ್ತಳಿಕೆಯಲ್ಲಿ ಏನಿದೆ ಎನ್ನುತ್ತಿದ್ದವರಿಗೆ ಬಜೆಟ್ ಮೂಲಕ ಖಡಕ್ ಉತ್ತರ ನೀಡಲಾಗಿದೆ. ಮಧ್ಯಮ ವರ್ಗದ ಜನರಿಗೆ ಭರಪೂರ ಕೊಡುಗೆ ನೀಡಿ, ಲೋಕಸಭೆ ಚುನಾವಣೆಗೆ ಸಿದ್ಧ ಎಂದು ಎನ್‌ಡಿಎ ಸರ್ಕಾರ ಸಾರಿ ಹೇಳಿದೆ.
ಚುನಾವಣೆ ಹೊಸ್ತಿಲಲ್ಲಿ ನಿಂತಿದ್ದ ನರೇಂದ್ರ ಮೋದಿ ಎಂತಹ ಬಜೆಟ್ ನೀಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಅದರಲ್ಲೂ ಮುಖ್ಯವಾಗಿ ತೆರಿಗೆ ಮಿತಿಯ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದ್ದವು. ಈ ಎಲ್ಲಾ ನಿರೀಕ್ಷೆಗಳಗೆ ಕೇಂದ್ರ ಬಜೆಟ್ ಉತ್ತರ ನೀಡಿದೆ.
ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ:
ಮೋದಿ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ದಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ. ಅದರಂತೆ ಆದಾಯ ತೆರಿಗೆ ಮಿತಿ ಹೆಚ್ಚಿಸಿದ ಬಳಿಕ ಯಾವೆಲ್ಲಾ ಬದಲಾವಣೆ ಆಗಿದೆ ಅಂತ ನೋಡುವುದಾದರೆ 5 ಲಕ್ಷ ರೂ. ವರೆಗಿನ ಆದಾಯ ಇದ್ದವರು ಈ ಮೊದಲು 13 ಸಾವಿರ ರೂ. ತೆರಿಗೆ ಕಟ್ಟಬೇಕಿತ್ತು ಆದರೆ ಇನ್ನು ಮುಂದೆ ಅವರು ತೆರಿಗೆಯನ್ನೇ ಕಟ್ಟಬೇಕಿಲ್ಲ.
ಅದರಂತೆ 7.5 ಲಕ್ಷ ರೂ. ಆದಾಯಕ್ಕೆ 65 ಸಾವಿರ ರೂ. ತೆರಿಗೆ ಕಟ್ಟುವ ಬದಲು ಈಗ 49, 920 ರೂ. ಟ್ಯಾಕ್ಸ್ ಕಟ್ಟಬೇಕಾಗುರತ್ತದೆ. ಇನ್ನು 10 ಲಕ್ಷ ರೂ. ಆದಾಯ ಇದ್ದವರು 1,17,000 ರೂ. ತೆರಿಗೆ ಕಟ್ಟಬೇಕಾಗುತ್ತದೆ.
ಜೊತೆಗೆ 20 ಲಕ್ಷದ ಆದಾಯಕ್ಕೆ 4,29,000 ರೂ. ತೆರಿಗೆ ಕಟ್ಟಬೇಕು. 5 ಲಕ್ಷ ರೂ.ವರೆಗೆ ಹೂಡಿಕೆ ಮಾಡುವವರಿಗೆ ಯಾವುದೇ ಟ್ಯಾಕ್ಸ್ ಹೊರೆ ಇಲ್ಲ. ಎರಡೂವರೆ ಲಕ್ಷವರೆಗಿನ ಗೃಹಸಾಲಕ್ಕೂ ತೆರಿಗೆ ಇಲ್ಲ ಎಂದು ಘೋಷಿಸಲಾಗಿದೆ.
ಇವಕ್ಕೆಲ್ಲಾ ತೆರಿಗೆ ವಿನಾಯ್ತಿ:
ಹಾಗೆಯೇ ಶಿಕ್ಷಣ ಸಾಲ, ಮೆಡಿಕಲ್ ಇನ್ಶೂರೆನ್ಸ್ ಗೆ ತೆರಿಗೆ ವಿನಾಯ್ತಿ ಇದ್ದು, ಹಿರಿಯ ನಾಗರಿಕರ ಔಷಧ ಮತ್ತು ಮೆಡಿಕಲ್ ವೆಚ್ಚಕ್ಕೂ ಯಾವುದೇ ತೆರಿಗೆ ಅನ್ವಯವಾಗಲ್ಲ.
ಟಿಡಿಎಸ್ ಮಿತಿ ಹೆಚ್ಚಳ:
ಉಳಿದಂತೆ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಠೇವಣಿ ಹೂಡಿರುವ ಟಿಡಿಎಸ್ ಮಿತಿಯನ್ನು, 10 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಬಾಡಿಗೆ ಮೇಲಿನ ತೆರಿಗೆ ವಿನಾಯ್ತಿಯನ್ನು 1,80,000 ರೂ. ದಿಂದ 2,40,000 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ತೆರಿಗೆದಾರರಿಗೆ ಬಹುದೊಡ್ಡ ರಿಲೀಫ್ ಸಿಕ್ಕಂತಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 2, 2019, 3:11 PM IST