ಮುಂಬೈ(ಮಾ.24): ನಷ್ಟದಲ್ಲಿರುವ ಏರ್‌ ಇಂಡಿಯಾ ಖರೀದಿಗೆ ಬಿಡ್‌ ಸಲ್ಲಿಸಲು ಟಾಟಾ ಗ್ರೂಪ್‌ ಹಾಗೂ ಸ್ಪೈಸ್‌ ಜೆಟ್‌ ಪ್ರವರ್ತಕ ಅಜಯ್‌ ಸಿಂಗ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏರ್‌ ಇಂಡಿಯಾದ ಕರಾರು ಪತ್ರಗಳು, ಒಪ್ಪಂದಗಳು ಮತ್ತು ಹೊಣೆಗಾರಿಕೆಯನ್ನು ಒಪ್ಪಿಕೊಂಡ ಬಳಿಕವೇ ಇವರಿಬ್ಬರು ಬಿಡ್‌ಗಳನ್ನು ಸಲ್ಲಿಸಬೇಕಿದೆ. ಏರ್‌ ಇಂಡಿಯಾ ಮೇಲೆ ಈಗಾಗಲೇ 90 ಸಾವಿರ ಕೋಟಿ ರು. ಸಾಲ ವಿದೆ. ಈ ಸಾಲದ ಮೊತ್ತದಲ್ಲಿ ಎಷ್ಟುತೀರಿಸುತ್ತೇವೆ ಮತ್ತು ಎಷ್ಟು ಮುಂಗಡ ಪಾವತಿ ನೀಡುತ್ತೇವೆ ಎಂಬ ಬಗ್ಗೆಯೂ ಬಿಡ್‌ನಲ್ಲಿ ಉಲ್ಲೇಖಿಸಬೇಕಿದೆ.

ಯಾರು ಅತ್ಯಂತ ಆರ್ಥಿಕ ಮೌಲ್ಯದ ಬಿಡ್‌ ಸಲ್ಲಿಸುತ್ತಾರೋ ಅವರು ಬಿಡ್‌ ಅನ್ನು ಗೆದ್ದುಕೊಳ್ಳುತ್ತಾರೆ. ಟಾಟಾ ಗ್ರೂಪ್‌ ಏರ್‌ ಏಷ್ಯಾ ಇಂಡಿಯಾ ಮೂಲಕ ಬಿಡ್‌ ಸಲ್ಲಿಕೆ ಮಾಡಲಿದೆ. ಇನ್ನೊಂದೆಡೆ ಅಜಯ್‌ ಸಿಂಗ್‌ ಮಧ್ಯ ಪ್ರಾಚ್ಯದಲ್ಲಿ ಹೂಡಿಕೆ ಮಾಡಿರುವ ಸಾರ್ವಭೌಮ ನಿಧಿಯನ್ನು ಬಳಸಿಕೊಂಡು ಬಿಡ್‌ ಸಲ್ಲಿಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.