ಈ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಐಫೋನ್‌ 15 ಮೊಬೈಲ್‌ ಫೋನ್‌ಗಳು ಭಾರತದಲ್ಲೇ ಉತ್ಪಾದನೆಯಾಗಲಿವೆ. ಭಾರತವನ್ನು ಐಫೋನ್‌ ಉತ್ಪಾದನಾ ಹಬ್‌ ಮಾಡಬೇಕು ಎಂಬ ಭಾರತ ಸರ್ಕಾರದ ಕನಸಿಗೆ ಮತ್ತಷ್ಟು ಶಕ್ತಿ ದೊರಕಿದೆ. 

ನವದೆಹಲಿ(ಮೇ.17):  ಪ್ರಮುಖ ಮೊಬೈಲ್‌ ಫೋನ್‌ ತಯಾರಿಕ ಕಂಪನಿ ಐಫೋನ್‌ನ ಮುಂದಿನ ಆವೃತ್ತಿ ಭಾರತದಲ್ಲೇ ತಯಾರಾಗಲಿದ್ದು, ಇದನ್ನು ಟಾಟಾ ಕಂಪನಿ ಉತ್ಪಾದನೆ ಮಾಡಲಿದೆ. ಈಗಾಗಲೇ ಕೋಲಾರ ಬಳಿ ಇರುವ ನರಸಾಪುರದ ವಿಸ್ಟ್ರಾನ್‌ ಕಾರ್ಖಾನೆಯನ್ನು ಟಾಟಾ ಗ್ರೂಪ್‌ ಖರೀದಿ ಮಾಡಿದ್ದು, ಉತ್ಪಾದನೆಯನ್ನು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಆ್ಯಪಲ್‌ ಕಂಪನಿಯ ಸಿಇಒ ಟಿಮ್‌ ಕುಕ್‌ ಏಪ್ರಿಲ್‌ನಲ್ಲಿ ಭಾರತ ಪ್ರವಾಸದಲ್ಲಿದ್ದಾಗ ಟಾಟಾ ಗ್ರೂಪ್‌ನ ಎನ್‌.ಚಂದ್ರಶೇಖರನ್‌ ಅವರ ಜೊತೆ ಮಾತುಕತೆ ನಡೆಸಿದ್ದು, ಟಾಟಾ ಗ್ರೂಪ್‌ ಐಫೋನ್‌ ಉತ್ಪಾದನೆಗೆ ಕಾಲಿಟ್ಟಿದೆ. ಇಲ್ಲಿಯವರೆಗೆ ನರಸಾಪುರದಲ್ಲಿರುವ ಕಾರ್ಖಾನೆಯಲ್ಲಿ ತೈವಾನ್‌ನ ವಿಸ್ಟ್ರಾನ್‌ ಐಫೋನ್‌ಗಳನ್ನು ಉತ್ಪಾದನೆ ಮಾಡುತ್ತಿತ್ತು. ಇದೀಗ ಟಾಟಾ ಗ್ರೂಪ್‌ ಈ ಕಾರ್ಖಾನೆ ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಟಾಟಾದ ಅಧಿಕಾರಿಗಳು ಕಾರ್ಖಾನೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್‌ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!

ಹಾಗಾಗಿ ಈ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಐಫೋನ್‌ 15 ಮೊಬೈಲ್‌ ಫೋನ್‌ಗಳು ಭಾರತದಲ್ಲೇ ಉತ್ಪಾದನೆಯಾಗಲಿವೆ. ಭಾರತವನ್ನು ಐಫೋನ್‌ ಉತ್ಪಾದನಾ ಹಬ್‌ ಮಾಡಬೇಕು ಎಂಬ ಭಾರತ ಸರ್ಕಾರದ ಕನಸಿಗೆ ಮತ್ತಷ್ಟು ಶಕ್ತಿ ದೊರಕಿದೆ. ಟಾಟಾ ಗ್ರೂಪ್‌ ಐಫೋನ್‌ ಜೊತೆ ಒಪ್ಪಂದ ಮಾಡಿಕೊಂಡ ಬಳಿಕ ವಿಸ್ಟ್ರಾನ್‌ ಭಾರತ ಬಿಟ್ಟು ಹೊರಹೋಗಲಿದೆಯೇ ಅಥವಾ ಆ್ಯಪಲ್‌ ಹೊರತುಪಡಿಸಿ ಉಳಿದ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಿದೆಯೇ ಎಂಬುದು ತಿಳಿದುಬಂದಿಲ್ಲ.