ಆನ್ ಲೈನ್ ವಂಚಕರ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ.ನಾನಾ ಮಾರ್ಗಗಳ ಮೂಲಕ ಅಮಾಯಕರನ್ನು ವಂಚಿಸಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ.ಇದಕ್ಕೆ ಸಾಕ್ಷಿ ಎಂಬಂತೆ ಭೋಪಾಲ್ ನಲ್ಲಿ ಕೆಲಸದ ಹೆಸರಿನಲ್ಲಿ ಮೂರು ತಿಂಗಳ ಅವಧಿಯಲ್ಲಿ 31 ಮಂದಿಗೆ ವಂಚಿಸಿ ಬರೋಬರಿ 25ಲಕ್ಷ ರೂ. ದೋಚಿದ್ದಾರೆ.ಈ ವಂಚನೆ ಹೇಗೆ ನಡೆದಿತ್ತು? ಇಲ್ಲಿದೆ ಮಾಹಿತಿ. 

ಭೋಪಾಲ್ (ಜು.13): ಆನ್ ಲೈನ್ ವಹಿವಾಟು,ಸೋಷಿಯಲ್ ಮೀಡಿಯಾಗಳು ಹೆಚ್ಚು ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಬೆನ್ನಲ್ಲೇ ವಂಚನೆ ಪ್ರಕರಣಗಳು ಕೂಡ ಏರಿಕೆ ಕಾಣುತ್ತಿವೆ. ಇತ್ತೀಚಿನ ದಿನಗಳಲ್ಲಿ ವಂಚಕರು ಆನ್ ಲೈನ್ ಮೂಲಕ ನಾನಾ ವಿಧದಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕೆವೈಸಿ ಮಾಹಿತಿ ಕೇಳಿ ಖಾತೆಗೆ ಕನ್ನ ಹಾಕೋದು, ಉದ್ಯೋಗ ಆಮಿಷವೊಡ್ಡಿ ಹಣ ಲೂಟುವುದು, ಮೊಬೈಲ್ ಅಥವಾ ಇ-ಮೇಲ್ ಗೆ ಲಿಂಕ್ ಗಳನ್ನು ಕಳುಹಿಸಿ ಅದರ ಮೂಲಕ ಬ್ಯಾಂಕ್ ಖಾತೆಯಲ್ಲಿರುವ ಹಣ ಎಗರಿಸೋದು ಸೇರಿದಂತೆ ನಾನಾ ವಿಧದಲ್ಲಿ ವಂಚಿಸುತ್ತಿರುವುದು ಪ್ರತಿದಿನ ವರದಿಯಾಗುತ್ತಲೇ ಇರುತ್ತದೆ.ಇಂಥ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದು ಕೂಡ ಸೈಬರ್ ಪೊಲೀಸರಿಗೆ ಕಠಿಣವಾದ ಕೆಲಸವೇ ಆಗಿದೆ. ಹೀಗಿರುವಾಗ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ಸ್ಥಳೀಯ 31 ನಿವಾಸಿಗಳನ್ನು ಆನ್ ಲೈನ್ ವಂಚಕರು ತಮ್ಮ ವಂಚನೆ ಜಾಲಕ್ಕೆ ಬೀಳಿಸಿಕೊಂಡು ಮೂರು ತಿಂಗಳ ಅವಧಿಯಲ್ಲಿ 25 ಲಕ್ಷ ರೂ. ಎಗರಿಸಿರೋದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಲಿಂಕ್ ಗಳನ್ನು ಅಪ್ಲೋಡ್ ಮಾಡುವ ಕೆಲಸಕ್ಕೆ 200ರೂ. ಪಾವತಿಸೋದಾಗಿ 31 ಮಂದಿಯನ್ನು ವಂಚಕರು ನಂಬಿಸಿದ್ದಾರೆ. 

ಪ್ರಾರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ಗಳನ್ನು ಅಪ್ಲೋಡ್ ಮಾಡುವ ಕೆಲಸ ನೀಡೋದಾಗಿ 31 ಜನರನ್ನು ವಂಚಕರು ನಂಬಿಸಿದ್ದಾರೆ. ಪ್ರತಿ ಲಿಂಕ್ ಗೆ 200ರೂ. ಪಾವತಿಸಿದ್ದಾರೆ ಕೂಡ. ಆ ಬಳಿಕ ಪ್ರೀಮಿಯಂ ಗ್ರಾಹಕರಾಗಲು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿ ಅದಕ್ಕೆ ಪ್ರತಿಯಾಗಿ ದೊಡ್ಡ ಪ್ರಮಾಣದಲ್ಲಿ ರಿಟರ್ನ್ಸ್ ಪಡೆಯುವಂತೆ ನಂಬಿಸಲಾಯಿತು. ಸಣ್ಣ ಮೊತ್ತದ ಹಣವನ್ನು ಹೂಡಿಕೆ ಮಾಡಿದವರಿಗೆ ಉತ್ತಮ ರಿಟರ್ನ್ಸ್ ಕೂಡ ನೀಡಲಾಗಿತ್ತು. ಇದನ್ನು ನಂಬಿ ಕೆಲವರು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ್ದರು. ಆದರೆ, ವಂಚಕರು ಎಲ್ಲರೊಂದಿಗೂ ಸಂಪರ್ಕ ಕಳೆದುಕೊಳ್ಳುವ ಜೊತೆಗೆ ಹಣವನ್ನು ಕೂಡ ಹಿಂತಿರುಗಿಸಿಲ್ಲ. ಪರಿಣಾಮ ಕಳೆದ ಮೂರು ತಿಂಗಳಲ್ಲಿ 31 ಜನರು ಈ ಮಾದರಿಯ ಸೈಬರ್ ವಂಚನೆಯಿಂದ 25ಲಕ್ಷ ರೂ. ಕಳೆದುಕೊಂಡಿರೋದು ವರದಿಯಾಗಿದೆ.

ಇನ್ನು 2 ವರ್ಷದಲ್ಲಿ ಇಂಟರ್ನೆಟ್‌ ಅಂತ್ಯ, ಆರ್ಥಿಕತೆ ಮೇಲೆ ತೀವ್ರ ಪರಿಣಾಮ: ಇದರ ಹಿಂದಿದೆ ಅಚ್ಚರಿಯ ಕಾರಣ!

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಬಳಕೆದಾರರ ಐಡಿ ಅಗತ್ಯವಿಲ್ಲದ ಕಾರಣ ನಕಲಿ ಖಾತೆಗಳನ್ನು ತೆರೆದು ವಂಚಿಸೋದು ಸುಲಭ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಎಫ್ ಐಆರ್ ಕೂಡ ದಾಖಲಾಗಿಲ್ಲ. ವಂಚನೆಗೊಳಗಾದವರು ಹಣವನ್ನು ವರ್ಗಾಯಿಸಿರುವ ಬ್ಯಾಂಕ್ ಖಾತೆ ವಂಚಕರ ಹೆಸರಿನಲ್ಲಿ ಇಲ್ಲ. ಈಗಾಗಲೇ ವಂಚಕರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣಗಳಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಎಫ್ ಐಆರ್ ದಾಖಲಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕೂಡ ತಿಳಿಸಿದ್ದಾರೆ. 

20 ರೂಪಾಯಿ ಸಮೋಸಾ ಆರ್ಡರ್ ಮಾಡಿ 1.4 ಲಕ್ಷ ರೂ ಕಳೆದುಕೊಂಡ ಡಾಕ್ಟರ್!

ಈ ರೀತಿ ಕೆಲಸ ಆಧಾರಿತ ವಂಚನೆಗಳು ಬಿಹಾರ್, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ ಎಂದು ಸೈಬರ್ ಸೆಲ್ ಮಾಹಿತಿ ನೀಡಿದೆ. ಈ ರೀತಿಯ ವಂಚನೆ ಪ್ರಕರಣಗಳನ್ನು ಆನ್ ಲೈನ್ ಮೂಲಕವೇ ಮಾಡಲಾಗುತ್ತಿದೆ. ಜನರು ಯಾವುದೇ ಕಾರಣಕ್ಕೂ ಇಂಥ ವಂಚಕರ ಬಲೆಯಲ್ಲಿ ಬೀಳಬಾರದು ಎಂದು ಭೋಪಾಲ ಸೈಬರ್ ಕ್ರೈಮ್ ಸಹಾಯಕ ಆಯುಕ್ತ ಸುಜೀತ್ ತಿವಾರಿ ಎಚ್ಚರಿಸಿದ್ದಾರೆ. ಅಲ್ಲದೆ, ಕೆಲಸಕ್ಕೆ ಪ್ರಯತ್ನಿಸುವಾಗ ಆದಷ್ಟು ಆಪ್ ಲೈನ್ ನಲ್ಲೇ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಉದ್ಯೋಗ ಹೆಸರಿನಲ್ಲಿ ಬರುವ ಮೆಸೇಜ್ ಗಳು, ಇ-ಮೇಲ್ ಗಳು ಅಥವಾ ಕರೆಗಳಿಗೆ ಪ್ರತಿಕ್ರಿಯಿಸುವ ಮುನ್ನ ಎಚ್ಚರ ವಹಿಸಿ. ಯಾವುದೇ ಸಂಸ್ಥೆಯಾದರೂ ಅದರ ಬಗ್ಗೆ ವಿಚಾರಿಸದೆ ಹಣ ವರ್ಗಾವಣೆ ಮಾಡೋದು ಅಥವಾ ಇನ್ನಿತರ ಮಾಹಿತಿಗಳನ್ನು ಹಂಚಿಕೊಳ್ಳುವ ಕೆಲಸ ಮಾಡಬೇಡಿ.