ಟೇಬಲ್ ಸ್ಪೇಸ್ ಟೆಕ್ನಾಲಜೀಸ್ ಸಂಸ್ಥೆಯ ₹800 ಕೋಟಿ ಐಪಿಒಗೂ ಮುನ್ನ ಸಹ-ಸಂಸ್ಥಾಪಕನ 22.14% ಷೇರುಗಳಿಗಾಗಿ ಕುಟುಂಬದಲ್ಲಿ ಆಸ್ತಿ ಕಲಹ ಸ್ಫೋಟಗೊಂಡಿದೆ. ಮೃತ ಅಮಿತ್ ಬ್ಯಾನರ್ಜಿ ಅವರ ಪತ್ನಿ ಶ್ರುತಿ, ತಮ್ಮನ್ನು ಹೊರಗಿಟ್ಟಿರುವ ನೋಂದಾಯಿಸದ ವಿಲ್ ಪ್ರಶ್ನಿಸಿ ಕೋರ್ಟ್ ಮತ್ತು ಸೆಬಿಗೆ ದೂರು ನೀಡಿದ್ದಾರೆ.
ನವದೆಹಲಿ (ಸೆ.29): ಬ್ಯಾಕ್ ಆಫೀಸ್ ಹಾಗೂ ಮ್ಯಾನೇಜ್ಡ್ ವರ್ಕ್‌ಸ್ಪೇಸ್ (Managed Workspace) ರಂಗದಲ್ಲಿ ಮುಂಚೂಣಿಯಲ್ಲಿರುವ, ಪ್ರಸಿದ್ಧ 'ಹಿಲ್‌ಹೌಸ್ ಇನ್ವೆಸ್ಟ್‌ಮೆಂಟ್' (Hillhouse Investment) ಬೆಂಬಲಿತ 'ಟೇಬಲ್ ಸ್ಪೇಸ್ ಟೆಕ್ನಾಲಜೀಸ್' (Table Space Technologies) ಸಂಸ್ಥೆಯು ಭಾರಿ ಮೊತ್ತದ ₹800 ಕೋಟಿ ಐಪಿಒಗೆ (IPO) ಸಜ್ಜಾಗುತ್ತಿರುವ ಬೆನ್ನಲ್ಲೇ ಸಂಸ್ಥೆಯಲ್ಲಿ ಭಾರಿ ಆಂತರಿಕ ಬಿಕ್ಕಟ್ಟು ಸ್ಫೋಟಗೊಂಡಿದೆ. ಕಂಪನಿಯ ಐದನೇ ಒಂದು ಭಾಗಕ್ಕೂ ಹೆಚ್ಚಿನ (22.14%) ಈಕ್ವಿಟಿ ಷೇರುಗಳ ಮಾಲೀಕತ್ವಕ್ಕಾಗಿ ಸಂಸ್ಥಾಪಕ ಕುಟುಂಬದಲ್ಲೇ ತೀವ್ರ ಆಸ್ತಿ ಕಲಹ ಆರಂಭವಾಗಿದ್ದು, ಇದು ಸಂಪೂರ್ಣ ಐಪಿಒ ಪ್ರಕ್ರಿಯೆಯನ್ನೇ ಬುಡಮೇಲು ಮಾಡುವ ಆತಂಕ ಎದುರಾಗಿದೆ.
ಸಂಸ್ಥೆಯು ಆಗಸ್ಟ್ ತಿಂಗಳಷ್ಟೇ ₹800 ಕೋಟಿ ಮೌಲ್ಯದ ಐಪಿಒ ಆರಂಭಿಸಲು ಕರಡು ದಾಖಲೆಗಳನ್ನು (Draft Red Herring Prospectus - DRHP) ಸಲ್ಲಿಸಿತ್ತು. ಆದರೆ, ಪ್ರಮುಖ 22.14 ಶೇಕಡಾ ಈಕ್ವಿಟಿ ಪಾಲಿನ ಮೇಲಿನ ಕೋರ್ಟ್ ವ್ಯಾಜ್ಯವು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
ವಿವಾದಕ್ಕೆ ಮೂಲ ಕಾರಣವೇನು?
ಸುಮಾರು 19 ತಿಂಗಳ ಹಿಂದೆ 'ಟೇಬಲ್ ಸ್ಪೇಸ್' ಸಂಸ್ಥೆಯ ಸಹ-ಸಂಸ್ಥಾಪಕ ಅಮಿತ್ ಬ್ಯಾನರ್ಜಿ (Amit Banerjee) ಅಕಾಲಿಕ ಮರಣ ಹೊಂದಿದ್ದರು. 44ರ ವಯಸ್ಸಲ್ಲೇ ಹೃದಾಯಾಘಾತದಿಂದ ಅವರ ನಿಧನವಾಗಿತ್ತು. ಅವರ ನಿಧನದ ಬೆನ್ನಲ್ಲೇ 'ನೋಂದಾಯಿಸದ ವಿಲ್' (Unregistered Will) ಒಂದನ್ನು ಆಡಳಿತ ಮಂಡಳಿಯ ಕಡೆಯವರು ಬಹಿರಂಗಪಡಿಸಿದರು.
ಈ ವಿಲ್‌ನಲ್ಲಿ ಅಮಿತ್ ಬ್ಯಾನರ್ಜಿ ಅವರ ಸಂಪೂರ್ಣ ಆಸ್ತಿಯನ್ನು ಅವರ ತಾಯಿ ಸರಿತಾ ಬ್ಯಾನರ್ಜಿ (Sarita Banerjee) ಹಾಗೂ ಅಪ್ರಾಪ್ತ ವಯಸ್ಸಿನ ಮಗಳಿಗೆ ಸಮಾನವಾಗಿ (ತಲಾ ಅರ್ಧದಷ್ಟು) ಹಂಚಿಕೆ ಮಾಡಲಾಗಿತ್ತು. ಮಗಳಿಗೆ 25 ವರ್ಷ ತುಂಬುವವರೆಗೆ ತಾಯಿ ಸರಿತಾ ಅವರನ್ನೇ ಆಕೆಯ ಷೇರುಗಳ ಪಾಲಕಿ (Custodian) ಎಂದು ಹೆಸರಿಸಲಾಗಿತ್ತು. ಆದರೆ, ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ಅಮಿತ್ ಬ್ಯಾನರ್ಜಿ ಅವರ ಪತ್ನಿ ಶ್ರುತಿ ಬ್ಯಾನರ್ಜಿ (Shruti Banerjee) ಅವರನ್ನು ಈ ಆಸ್ತಿಯ ಹಕ್ಕಿನಿಂದ ಸಂಪೂರ್ಣವಾಗಿ ಹೊರಗಿಡಲಾಗಿತ್ತು.
ಈ ವಿಲ್ ಅನ್ನು ಪ್ರಶ್ನಿಸಿ ಪತ್ನಿ ಶ್ರುತಿ ತಕ್ಷಣವೇ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ವಿಚಾರಣೆ ನಡೆಸಿದ ಕೋರ್ಟ್, "ಇದು ನೋಂದಾಯಿತವಲ್ಲದ ವಿಲ್ ಆಗಿರುವುದರಿಂದ ತಕ್ಷಣವೇ ಯಾವುದೇ ಕಾನೂನಾತ್ಮಕ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ," ಎಂದು ಸ್ಪಷ್ಟಪಡಿಸಿತ್ತು.
ಸೆಬಿಗೆ (SEBI) ಅಧಿಕೃತ ದೂರು ನೀಡಿದ ಪತ್ನಿ ಶ್ರುತಿ
ನ್ಯಾಯಾಲಯದಲ್ಲಿ ವ್ಯಾಜ್ಯ ಚಾಲ್ತಿಯಲ್ಲಿರುವಾಗಲೇ, ಆಗಸ್ಟ್ 29 ರಂದು ಪತ್ನಿ ಶ್ರುತಿ ಬ್ಯಾನರ್ಜಿ ಅವರು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ 'ಸೆಬಿ'ಗೆ (SEBI) ಅಧಿಕೃತ ದೂರು ಸಲ್ಲಿಸಿದ್ದಾರೆ. ಟೇಬಲ್ ಸ್ಪೇಸ್ ಆಡಳಿತ ಮಂಡಳಿಯು ಐಪಿಒ ಕರಡು ಪ್ರತಿಯಲ್ಲಿ (DRHP) ಅಮಿತ್ ಅವರ ತಾಯಿ ಸರಿತಾ ಅವರನ್ನು 'ಪ್ರೊಮೋಟರ್' (Promoter) ಎಂದು ವರ್ಗೀಕರಿಸಿರುವುದನ್ನು ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ.
ದೂರಿನಲ್ಲಿ ಶ್ರುತಿ ಪ್ರಮುಖ ಅಂಶಗಳನ್ನು ಎತ್ತಿ ತೋರಿಸಿದ್ದಾರೆ. ಸರಿತಾ ಬ್ಯಾನರ್ಜಿ ಅವರು ಕಂಪನಿಯಲ್ಲಿ ಯಾವುದೇ ನೇರ ಈಕ್ವಿಟಿ ಷೇರುಗಳನ್ನು ಹೊಂದಿಲ್ಲ ಅಲ್ಲದೆ, ಕಂಪನಿಯ ಯಾವುದೇ ಕಾರ್ಯಾಚರಣೆ ಅಥವಾ ಆಡಳಿತದಲ್ಲಿ (Operational Role) ಅವರು ತೊಡಗಿಸಿಕೊಂಡಿಲ್ಲ. ಹೀಗಿರುವಾಗ ಅವರನ್ನು ಐಪಿಒ ಕರಡಿನಲ್ಲಿ 'ಪ್ರೊಮೋಟರ್' ಎಂದು ಏಕೆ ಹೆಸರಿಸಲಾಗಿದೆ?ಮತ್ತೊಂದೆಡೆ, ಸಂಸ್ಥಾಪಕನ ನಿಜವಾದ ವಾರಸುದಾರರಾದ ಪತ್ನಿ ಶ್ರುತಿ ಮತ್ತು ಅವರ ಅಪ್ರಾಪ್ತ ಮಗಳನ್ನು ಪ್ರೊಮೋಟರ್ ಗ್ರೂಪ್ ಲಿಸ್ಟ್‌ನಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ ಎಂದಿದ್ದಾರೆ.
ಇದರ ಜೊತೆಗೆ, ಪ್ರಸ್ತುತ ಟೇಬಲ್ ಸ್ಪೇಸ್ ಸಂಸ್ಥೆಯ ಚೇರ್ಮನ್ ಆಗಿರುವ ಕರಣ್ ಚೋಪ್ರಾ (Karan Chopra) ಅವರು ಸರಿತಾ ಬ್ಯಾನರ್ಜಿ ಅವರ ಮಗಳನ್ನು (ಅಂದರೆ ಮೃತ ಅಮಿತ್ ಬ್ಯಾನರ್ಜಿ ಅವರ ಸಹೋದರಿಯನ್ನು) ಮದುವೆಯಾಗಿದ್ದಾರೆ. ಈ ಎಲ್ಲಾ ಅಂಶಗಳು ಸಂಸ್ಥೆಯ ಒಳಗಿನ ಆಡಳಿತ ಹಿತಾಸಕ್ತಿ ಸಂಘರ್ಷಕ್ಕೆ (Conflict of Interest) ಸಾಕ್ಷಿಯಾಗಿವೆ.
ಹೂಡಿಕೆದಾರರಿಗೆ ಇದರಿಂದಾಗುವ ಅಪಾಯವೇನು?
ಷೇರು ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿರುವ ಈ ಕಂಪನಿಯ ಹೂಡಿಕೆದಾರರಿಗೆ ಇದು ಅತ್ಯಂತ ನಿರ್ಣಾಯಕ ವಿಷಯವಾಗಿದೆ. ಕಂಪನಿಯ ಒಟ್ಟು ಷೇರುಗಳ ಪೈಕಿ ಬೃಹತ್ 22.14% ಷೇರುಗಳು ಈಗ ಕೋರ್ಟ್ ಕಟಕಟೆಯಲ್ಲಿ ಸಿಲುಕಿವೆ. ಒಂದು ವೇಳೆ ನ್ಯಾಯಾಲಯದಲ್ಲಿ ಪತ್ನಿ ಶ್ರುತಿಗೆ ಜಯ ಸಿಕ್ಕಿದರೆ, ಕಂಪನಿಯ ಶೇಕಡಾ 15 ಕ್ಕಿಂತ ಹೆಚ್ಚಿನ ಮತದಾನದ ಹಕ್ಕು (Voting Power) ಪ್ರಸ್ತುತ ಕಂಪನಿಯನ್ನು ಮುನ್ನಡೆಸುತ್ತಿರುವ ಮುಖ್ಯಸ್ಥರ ವಿರುದ್ಧವೇ ಹೋರಾಡುತ್ತಿರುವ ವ್ಯಕ್ತಿಯ ಕೈಗೆ ಸೇರಲಿದೆ. ಪ್ರೊಮೋಟರ್‌ಗಳ ನಡುವಿನ ಈ ಆಂತರಿಕ ಕಾದಾಟವು ಕಂಪನಿ ಲಿಸ್ಟ್ ಆದ ನಂತರ ಅದರ ಷೇರು ಮೌಲ್ಯ ಹಾಗೂ ಮಾರುಕಟ್ಟೆ ಸ್ಥಿರತೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರುವುದು ಖಚಿತವಾಗಿದೆ.


