ಬೆಂಗಳೂರು[ಫೆ.12]: ಸಿಂಡಿಕೇಟ್‌ ಬ್ಯಾಂಕ್‌ ಇತಿಹಾಸದಲ್ಲಿ ಮೊದಲ ಬಾರಿಗೆ 2019-20ನೇ ಸಾಲಿನಲ್ಲಿ ಬ್ಯಾಂಕ್‌ನ ವಾರ್ಷಿಕ ವಹಿವಾಟು 5 ಲಕ್ಷ ಕೋಟಿ ರು. ತಲುಪಿದೆ. 2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಸಾಲ ನೀಡಿಕೆ, ವಸೂಲಾತಿ, ಠೇವಣಿ ಹಾಗೂ ಬಂಡವಾಳ ಸೇರಿದಂತೆ ಎಲ್ಲ ವಹಿವಾಟುಗಳಲ್ಲಿ ಬ್ಯಾಂಕ್‌ ಗಣನೀಯ ಪ್ರಗತಿ ಸಾಧಿಸಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದರು.

ಮಂಗಳವಾರ ಬೆಂಗಳೂರಿನ ಸಿಂಡಿಕೇಟ್‌ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಮೂರನೇ ತ್ರೈಮಾಸಿಕದಲ್ಲಿ (2018-19) 108 ಕೋಟಿ ರು. ನಿವ್ವಳ ಲಾಭ ಹೊಂದಿದ್ದ ಬ್ಯಾಂಕ್‌, 2019-20ರ ಮೂರನೇ ತ್ರೈಮಾಸಿಕದ ವೇಳೆ ನಿವ್ವಳ ಲಾಭದ ಪ್ರಮಾಣವನ್ನು 435 ಕೋಟಿ ರು.ಗೆ ಹೆಚ್ಚಿಸಿಕೊಂಡಿದೆ. ಬ್ಯಾಂಕಿನ ಒಟ್ಟು ವ್ಯವಹಾರವು 2019ರ ಡಿಸೆಂಬರ್‌ಗೆ 5,00,971 ಕೋಟಿ ರು.ಗೆ ಏರಿಕೆಯಾಗಿದೆ. 2018ರ ಡಿಸೆಂಬರ್‌ನಲ್ಲಿ ದಾಖಲಾದ 4,67,911 ಕೋಟಿ ರು. ವ್ಯವಹಾರಕ್ಕೆ ಹೋಲಿಸಿದರೆ ಈ ಬಾರಿ ಶೇ.7ರಷ್ಟುಹೆಚ್ಚಳವಾಗಿದೆ. ಇನ್ನು 2018ರ ಡಿಸೆಂಬರ್‌ನಲ್ಲಿ 634 ಕೋಟಿ ರು. ಇದ್ದ ಬ್ಯಾಂಕಿನ ನಿರ್ವಹಣಾ ಲಾಭವು 2019ರ ಡಿಸೆಂಬರ್‌ಗೆ 1,336 ಕೋಟಿ ರು.ಗೆ ಏರಿಕೆಯಾಗಿದೆ. ಈ ಮೂಲಕ ಶೇ.111ರಷ್ಟುನಿರ್ವಹಣಾ ಲಾಭ ಹೆಚ್ಚಾಗಿದೆ ಎಂದು ವಿವರಿಸಿದರು.

ಬ್ಯಾಂಕಿನ ಒಟ್ಟು ಠೇವಣಿ 2018ರಲ್ಲಿ 2,59,064 ಕೋಟಿ ರು. ಇತ್ತು. 2019ರ ಡಿಸೆಂಬರ್‌ಗೆ 2,77,368 ಕೋಟಿ ರು.ಗೆ ಏರಿಕೆಯಾಗಿದೆ. ಈ ಮೂಲಕ ಚಾಲ್ತಿ ಹಾಗೂ ಉಳಿತಾಯ ಖಾತೆಗಳಲ್ಲಿ ಠೇವಣಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ.8.13ರಷ್ಟುಏರಿಕೆಯಾಗುತ್ತಿದೆ. 2018ರ ಡಿಸೆಂಬರ್‌ನಲ್ಲಿ 1,619 ಕೋಟಿ ರು. ಇದ್ದ ನಿವ್ವಳ ಬಡ್ಡಿ ಆದಾಯ 2019ರ ಡಿಸೆಂಬರ್‌ ವೇಳೆಗೆ 1,871 ಕೋಟಿ ರು.ಗೆ ಹೆಚ್ಚಳವಾಗಿದೆ. ಈ ಮೂಲಕ ಶೇ.16 ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಚಿಲ್ಲರೆ ಮತ್ತು ಕೃಷಿ ಕ್ಷೇತ್ರದಲ್ಲಿ ಕ್ರಮವಾಗಿ ಶೇ.7 ಮತ್ತು ಶೇ.10ರಷ್ಟುಬೆಳವಣಿಗೆ ಕಂಡುಬಂದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್‌.ಕೃಷ್ಣನ್‌, ಅಜಯ್‌ ಕೆ.ಖುರಾನಾ, ಮೊದಲಾದವರು ಉಪಸ್ಥಿತರಿದ್ದರು.