ಡಿಜಿಟಲ್‌ ಕರೆನ್ಸಿ ವಹಿವಾಟಿಗೆ ಸುಪ್ರೀಂಕೋರ್ಟ್‌ ನಿಶಾನೆ| ರಿಸರ್ವ್ ಬ್ಯಾಂಕ್‌ ಹೇರಿದ್ದ ನಿಷೇಧ ರದ್ದು| ಬಿಟ್‌ಕಾಯಿನ್‌, ಮತ್ತಿತರ ಕರೆನ್ಸಿಗಳು ನಿರಾಳ

ನವದೆಹಲಿ[ಮಾ.05]: ‘ಬಿಟ್‌ಕಾಯಿನ್‌’ ರೀತಿಯ ಡಿಜಿಟಲ್‌ ಕರೆನ್ಸಿ ಅಥವಾ ಕ್ರಿಪ್ಟೋಕರೆನ್ಸಿ ವಹಿವಾಟಿನ ಮೇಲೆ ಎರಡು ವರ್ಷಗಳ ಹಿಂದೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ನಿಷೇಧ ಹೇರಿ ಹೊರಡಿಸಿದ್ದ ಸುತ್ತೋಲೆಯನ್ನು ಸುಪ್ರೀಂಕೋರ್ಟ್‌ ಬುಧವಾರ ರದ್ದುಗೊಳಿಸಿದೆ. ಇದರಿಂದಾಗಿ ದೇಶದಲ್ಲಿ ಡಿಜಿಟಲ್‌ ಕರೆನ್ಸಿ ವಹಿವಾಟಿಗೆ ನ್ಯಾಯಾಲಯದಿಂದ ಹಸಿರು ನಿಶಾನೆ ದೊರೆತಂತಾಗಿದೆ. ಇದರ ಪರಿಣಾಮವಾಗಿ, ಡಿಜಿಟಲ್‌ ಕರೆನ್ಸಿಯನ್ನು ಖರೀದಿಸಲು ಅಥವಾ ಅದರ ಮಾರಾಟದಿಂದ ಬರುವ ಹಣವನ್ನು ಖಾತೆಗೆ ಜಮಾ ಮಾಡುವ ಸೌಲಭ್ಯವನ್ನು ಬ್ಯಾಂಕುಗಳು ಒದಗಿಸಬೇಕಾಗುತ್ತದೆ.

ಹಲವು ಸಂಸ್ಥೆಗಳು ಡಿಜಿಟಲ್‌ ಕರೆನ್ಸಿ ಸೇವೆಯನ್ನು ವಿಶ್ವದಲ್ಲಿ ಒದಗಿಸುತ್ತಿವೆ. ಅದರಲ್ಲಿ ಬಿಟ್‌ಕಾಯಿನ್‌ ಭಾರಿ ಜನಪ್ರಿಯವಾಗಿದೆ. ಗೂಢಲಿಪಿ ತಂತ್ರ ಆಧರಿಸಿ ಡಿಜಿಟಲ್‌ ಕರೆನ್ಸಿಯ ಮೌಲ್ಯ ಹಾಗೂ ವರ್ಗಾವಣೆಯನ್ನು ನಿಯಂತ್ರಿಸಲಾಗುತ್ತದೆ. ಈ ಸೇವೆ ಬಗ್ಗೆ ಹಲವು ರಾಷ್ಟ್ರಗಳಲ್ಲಿ ಕಳವಳವಿದೆ. ಆದರೆ ಜಪಾನ್‌ ಮಾತ್ರ ಇದಕ್ಕೆ ಕಾನೂನಿನ ಮಾನ್ಯತೆ ನೀಡಿದೆ.

ಇದೀಗ ಸುಪ್ರೀಂಕೋರ್ಟ್‌ ತೀರ್ಪಿನಿಂದಾಗಿ ಭಾರತದಲ್ಲೂ ಡಿಜಿಟಲ್‌ ಕರೆನ್ಸಿ ವ್ಯವಹಾರಕ್ಕೆ ಅನುಮತಿ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರ ಏನಾದರೂ ಕಾನೂನು ತರದೇ ಹೋದಲ್ಲಿ, ಭಾರತದಲ್ಲೂ ಡಿಜಿಟಲ್‌ ಕರೆನ್ಸಿ ಬಳಕೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಹೀಗಾಗಿ ಆ ಸೇವೆ ಒದಗಿಸುವ ಕಂಪನಿಗಳು ನಿರಾಳವಾಗುವಂತಾಗಿದೆ.

ಏನಿದು ಪ್ರಕರಣ?:

2013ರಿಂದಲೂ ಡಿಜಿಟಲ್‌ ಕರೆನ್ಸಿ ಬಗ್ಗೆ ಆರ್‌ಬಿಐ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಇದನ್ನು ಆರಂಭದಲ್ಲೇ ಚಿವುಟಿ ಹಾಕಬೇಕು. ಇಲ್ಲದೇ ಹೋದಲ್ಲಿ ಆರ್ಥಿಕತೆ ಅಪಾಯವಾಗಬಹುದು ಎಂದು ಹೇಳಿಕೊಂಡು ಬಂದಿತ್ತು. 2018ರ ಏ.6ರಂದು ಸುತ್ತೋಲೆ ಹೊರಡಿಸಿದ್ದ ಆರ್‌ಬಿಐ, ಬಿಟ್‌ಕಾಯಿನ್‌ನಂತಹ ಡಿಜಿಟಲ್‌ ಕರೆನ್ಸಿ ಸೇವಾ ಸಂಸ್ಥೆಗಳಿಗೆ ಯಾವುದೇ ರೀತಿಯ ಸೇವೆಗಳನ್ನು ಒದಗಿಸದಂತೆ ಬ್ಯಾಂಕುಗಳು ಹಾಗೂ ಹಣಕಾಸು ಸೇವಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

ಆದರೆ ಈ ಕ್ರಮದ ವಿರುದ್ಧ ಭಾರತೀಯ ಇಂಟರ್ನೆಟ್‌ ಹಾಗೂ ಮೊಬೈಲ್‌ ಸಂಘ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವರ್ಚುವಲ್‌ ಕರೆನ್ಸಿ ಮೂಲಕ ತಾವು ಕಾನೂನುಬದ್ಧವಾಗಿ ಉದ್ಯಮ ಚಟುವಟಿಕೆಗಳನ್ನು ಪರಿಣಾಮಕಾರಿಯನ್ನು ನಡೆಸುತ್ತಿದ್ದೇವೆ. ಇದೇನು ನೈಜ ಕರೆನ್ಸಿ ಏನಲ್ಲ. ಒಂದು ರೀತಿ ಸರಕು ಇದ್ದಂತೆ. ಡಿಜಿಟಲ್‌ ಕರೆನ್ಸಿಗೆ ನಿಷೇಧ ಹೇರುವ ಕಾನೂನೇ ದೇಶದಲ್ಲಿಲ್ಲ. ಹೀಗಾಗಿ ನಿಷೇಧ ಹೇರುವ ಅಧಿಕಾರ ಆರ್‌ಬಿಐಗೆ ಇಲ್ಲ ಎಂದು ವಾದಿಸಿತ್ತು.

ವಾದ- ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ರೋಹಿಂಟನ್‌ ನಾರಿಮನ್‌, ಅನಿರುದ್ಧ ಬೋಸ್‌ ಹಾಗೂ ವಿ. ರಾಮಸುಬ್ರಮಣಿಯನ್‌ ಅವರಿದ್ದ ಪೀಠ ತೀರ್ಪು ಪ್ರಕಟಿಸಿ, ಆರ್‌ಬಿಐ ಸುತ್ತೋಲೆಯನ್ನು ರದ್ದುಗೊಳಿಸಿದೆ.