ಗೂಗಲ್ ಸಿಇಒ ಸುಂದರ್ ಪಿಚೈ ಇಂಗ್ಲೆಂಡ್-ಇಂಡಿಯಾ ಟೆಸ್ಟ್ ಪಂದ್ಯದಲ್ಲಿ ಕಾಮೆಂಟರಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ನಾಯಕತ್ವ ಮತ್ತು ಆಕ್ರಮಣಕಾರಿ ಮನೋಭಾವವನ್ನು ಮೆಚ್ಚಿದ್ದಾರೆ. ಟೆಸ್ಟ್ ಕ್ರಿಕೆಟ್ ಪ್ರಿಯರೆಂದು ಹೇಳಿಕೊಂಡಿದ್ದಾರೆ.

ಬೆಂಗಳೂರು (ಆ.2): ವಿಶ್ವದ ಅತ್ಯಂತ ಪ್ರಖ್ಯಾತ ಟೆಕ್‌ ಸಂಸ್ಥೆ, ಸಿಲಿಕಾನ್‌ ವ್ಯಾಲಿ ಕಿಂಗ್‌ ಆಗಿರುವ ಗೂಗಲ್‌ ಕಂಪನಿಯ ಸಿಇಒ ಆಗಿರುವ ಭಾರತೀಯ ಮೂಲದ ಸುಂದರ್‌ ಪಿಚೈ, ಶನಿವಾರ ಇಂಗ್ಲೆಂಡ್‌-ಇಂಡಿಯಾ ನಡುವಿನ ಐದನೇ ಟೆಸ್ಟ್‌ ಪಂದ್ಯದ ಮೂರನೇ ದಿನ ಹಾಜರಾಗಿದ್ದರು. ಈ ವೇಳೆ ಪಂದ್ಯದ ಕಾಮೆಂಟರಿ ಮಾಡುವ ಮೂಲಕವೂ ಗಮನಸೆಳೆದಿದ್ದಾರೆ. ಕ್ರಿಕೆಟ್‌ ವಿಶ್ಲೇಷಕ ಹರ್ಷ ಭೋಗ್ಲೆ ಅವರ ಜೊತೆ ಸುಂದರ್‌ ಪಿಚೈ ಕಾಮೆಂಟರಿ ಮಾಡಿ ಗಮನಸೆಳೆದರು.

ಒಂದೆಡೆ ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ಪ್ರಹಾರ ಮಾಡಲು ಆರಂಭಿಸಿದರೆ, ಇನ್ನೊಂದೆಡೆ ಸುಂದರ್‌ ಪಿಚೈ ತಮ್ಮ ಕ್ರಿಕೆಟ್‌ ಪ್ರೀತಿಯನ್ನು ಬಹಿರಂಗ ಮಾಡಿದರು.

ಈ ವೇಳೆ ಹರ್ಷ ಭೋಗ್ಲೆ ನೇರವಾಗಿ ಸುಂದರ್‌ ಪಿಚೈ ಅವರಿಗೆ ನಿಮ್ಮ ಫೇವರಿಟ್‌ ಕ್ರಿಕೆಟರ್‌ ಯಾರು ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಒಂಚೂರು ಅನುಮಾನವಿಲ್ಲದೆ, 'ನಿಸ್ಸಂಶಯವಾಗಿ ಅದು ವಿರಾಟ್‌ ಕೊಹ್ಲಿ. ಅವರ ಆಕ್ರಮಣಕಾರಿ ಶೈಲಿಯ ವ್ಯಕ್ತಿತ್ವಕ್ಕೆ ನಾನು ದೊಡ್ಡ ಅಭಿಮಾನಿ. ಎಂದಿಗೂ ಸೋಲದ ಅವರ ಮನೋಭಾವವನ್ನು ನಾನು ಬಹಳ ಇಷ್ಟಪಡುತ್ತೇನೆ' ಎಂದು ಹೇಳಿದ್ದಾರೆ. ಅದೇ ವೇಳೆ ನೀವೊಂದು ಕ್ರಿಕೆಟ್‌ ಟೀಮ್ಅನ್ನು ಕಟ್ಟಿದರೆ ಅದಕ್ಕೆ ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡುತ್ತೀರಿ ಎನ್ನುವ ಪ್ರಶ್ನೆಗೂ, 'ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾನು ಯಾವುದೇ ಅನುಮಾನವಿಲ್ಲದೆ ವಿರಾಟ್‌ ಕೊಹ್ಲಿಯನ್ನು ಆಯ್ಕೆ ಮಾಡುತ್ತೇನೆ' ಎಂದು ಹೇಳಿದ್ದಾರೆ.

ಇನ್ನು ಸುಂದರ್‌ ಪಿಚೈ ಅವರೊಂದಿಗೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಕ್ಷಣವನ್ನು ಹರ್ಷ ಭೋಗ್ಲೆ ಕೂಡ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. 'ಈ ರೀತಿಯ ಘನತೆಯ ಕಾರ್ಪೊರೇಟ್ ನಾಯಕರೊಂದಿಗೆ ನಾನು ಕಾಮೆಂಟರಿ ಬಾಕ್ಸ್‌ನಲ್ಲಿ ಇದ್ದೇನೆ ಅಂತ ನನಗನ್ನಿಸುವುದಿಲ್ಲ. ಕ್ರಿಕೆಟ್ ಅನ್ನು ತುಂಬಾ ಪ್ರೀತಿಸ್ತಾರೆ. ಹಾಗೂ ಬಹಳ ಸರಳ ಸ್ವಭಾವದವರು' ಎಂದು ಬರೆದುಕೊಂಡಿದ್ದಾರೆ.

ಸುಂದರ್‌ ಪಿಚೈ ಕಾಮೆಂಟರಿ ಮಾಡುವ ವೇಳೆ ವಾಷಿಂಗ್ಟನ್‌ ಸುಂದರ್‌ ಬ್ಯಾಟಿಂಗ್‌ ಮಾಡುತ್ತಿದ್ದರು. ಇದಕ್ಕೆ ಹಲವಾರು ತಮಾಷೆಯ ಕಾಮೆಂಟ್‌ಗಳು ಬಂದಿವೆ. ಹಾಗೇನಾದರೂ ಸುಂದರ್‌ ಪಿಚೈ, ವಾಷಿಂಗ್ಟನ್‌ ಸುಂದರ್‌ ಅವರನ್ನು ಮದುವೆಯಾದರೆ ಅವರ ಹೆಸರು ಸುಂದರ್‌ ಸುಂದರ್‌ ಆಗಲಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಸುಂದರ್‌ ಪಿಚೈ ಹಾಗೂ ರಿಷಿ ಸುನಕ್‌ ಅವರ ಕ್ರಿಕೆಟ್‌ ಪ್ರೀತಿಯನ್ನು ಎಂದಿಗೂ ಹೀಗಳೆಯಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. ಎಲ್ಲಾ ಕ್ರಿಕೆಟ್‌ ಅಭಿಮಾನಿಗೂ ಒಮ್ಮೆಯಾದರೂ ಕಾಮೆಂಟರಿ ಬಾಕ್ಸ್‌ನಲ್ಲಿ ಕೂರುವ ಆಸೆ ಇರುತ್ತದೆ. ಸುಂದರ್‌ ಪಿಚೈ ಅವರು ಇದನ್ನು ಈಡೇರಿಸಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇಂಗ್ಲೆಂಡ್ vs ಭಾರತ ಟೆಸ್ಟ್ ಪಂದ್ಯದ ಕಾಮೆಂಟರಿ ಬಾಕ್ಸ್‌ನಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಇದ್ದರು. ಕಾಮೆಂಟರಿ ಮಾಡುವಾಗ ಸುಂದರ್ ಪಿಚೈ ಟಿ20 ಗಿಂತ ಟೆಸ್ಟ್ ಕ್ರಿಕೆಟ್‌ನತ್ತ ತಮ್ಮ ಒಲವು ಬಹಿರಂಗಪಡಿಸಿದರು. ಟೆಸ್ಟ್ ಕ್ರಿಕೆಟ್‌ನೊಂದಿಗೆ ಬೆಳೆದಿದ್ದೇನೆ ಮತ್ತು ಟಿ20ಗಳ ಜನಪ್ರಿಯತೆಯನ್ನು ಒಪ್ಪಿಕೊಂಡರೂ ಸಹ ಅವುಗಳನ್ನು ಅಷ್ಟಾಗಿ ಆನಂದಿಸುವುದಿಲ್ಲ ಎಂದು ಅವರು ಉಲ್ಲೇಖಿಸಿದರು. ಸುಂದರ್ ಪಿಚೈ ನಿಜವಾದ ಕ್ರಿಕೆಟ್ ಪ್ರೇಮಿ ಎಂದು ಬರೆದಿದ್ದಾರೆ.