Asianet Suvarna News Asianet Suvarna News

ತೈಲ ಕಂಪನಿಗೂ ತಟ್ಟಿದ ಬೇಸಿಗೆ ನೀರಿನ ಕೊರತೆ; MRPL 500 ಕೋಟಿ ರು. ನಷ್ಟ!

ತೈಲ ಕಂಪನಿಗೂ ತಟ್ಟಿದ ಬೇಸಿಗೆ ನೀರಿನ ಕೊರತೆ| ಎಂಆರ್‌ಪಿಎಲ್‌ 500 ಕೋಟಿ ರು. ನಷ್ಟ|  ಬೇಸಿಗೆಯಲ್ಲಿ 45 ದಿನಗಳ ಕಾಲ ನೀರಿನ ಕೊರತೆಯಿಂದ ಎಂಆರ್‌ಪಿಎಲ್‌ನ ವಿವಿಧ ಘಟಕಗಳು ಸ್ಥಗಿತಗೊಂಡ ಕಾರಣ ಕಂಪನಿ ನಷ್ಟಅನುಭವಿಸಿದೆ

Summer Water Scarcity MRPL Faces 500 Crore Rupees Loss
Author
Bangalore, First Published Aug 4, 2019, 12:09 PM IST

ಮಂಗಳೂರು[ಆ.04]: ಮಂಗಳೂರಿನಲ್ಲಿರುವ ಕೇಂದ್ರ ಸ್ವಾಮ್ಯದ ಎಂಆರ್‌ಪಿಎಲ್‌ ತೈಲ ಕಂಪನಿ ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 500 ಕೋಟಿ ರು. ನಷ್ಟ ಅನುಭವಿಸಿದೆ.

ಈ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಎಂಆರ್‌ಪಿಎಲ್‌ನ ವಿವಿಧ ಘಟಕಗಳು ಸ್ಥಗಿತಗೊಂಡ ಕಾರಣ ಕಂಪನಿ ನಷ್ಟಅನುಭವಿಸಲು ಕಾರಣ ಎಂದು ಕಂಪನಿ ಅಧ್ಯಕ್ಷ ಶಶಿಶಂಕರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ಸಾಲಿನ ಇದೇ ಅವಧಿಯಲ್ಲಿ ಕಂಪನಿ 362 ಕೋಟಿ ರು. ನಿವ್ವಳ ಲಾಭ ಗಳಿಸಿತ್ತು. ಕಳೆದ ಅವಧಿಯಲ್ಲಿ ಕಂಪನಿಯು 16,583 ಕೋಟಿ ರು. ಒಟ್ಟು ಆದಾಯ ಹೊಂದಿದ್ದು, ಅದು ಈ ಸಾಲಿನಲ್ಲಿ 11,200 ಕೋಟಿ ರು.ಗೆ ಇಳಿಕೆಯಾಗಿದೆ. ಬೇಸಿಗೆ ತಿಂಗಳ 45 ದಿನಗಳ ಕಾಲ ವಿಪರೀತ ನೀರಿನ ತೊಂದರೆ ಅನುಭವಿಸಿದ ಕಾರಣ ಕೆಲವು ಘಟಕಗಳನ್ನು ಬಂದ್‌ ಮಾಡಬೇಕಾದ ಪರಿಸ್ಥಿತಿ ತಲೆದೋರಿತ್ತು. ಇದರಿಂದಾಗಿ ಕಂಪನಿ ನಷ್ಟಅನುಭವಿಸುವಂತೆ ಆಯಿತು. ನಷ್ಟವನ್ನು ಮುಂದಿನ ಎರಡು ತ್ರೈಮಾಸಿಕ ಅವಧಿಯಲ್ಲಿ ಲಾಭಕ್ಕೆ ಪರಿವರ್ತಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಮಾರ್ಚ್‌ಗೆ ತಾತ್ಕಾಲಿಕ ಸ್ಥಾವರ:

ಈ ಬಾರಿಯಂತೆ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕ ನೆಲೆಯಲ್ಲಿ ಉಪ್ಪು ನೀರಿನ ಸಂಸ್ಕರಣೆ ಮಾಡಿ ನೀರು ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ತಾತ್ಕಾಲಿಕ ಘಟಕಗಳು ಮಾಚ್‌ರ್‍ನಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್‌ ತಿಳಿಸಿದರು.

ತಣ್ಣೀರುಬಾವಿಯಲ್ಲಿ 620 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಉಪ್ಪು ನೀರು ಸಂಸ್ಕರಣ ಸ್ಥಾವರ 2020ರ ಸೆಪ್ಟೆಂಬರ್‌ ವೇಳೆಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಅಲ್ಲಿವರೆಗೆ ತಾತ್ಕಾಲಿಕ ಸ್ಥಾವರದ ಉಪಯೋಗ ಪಡೆಯಲಾಗುವುದು ಎಂದರು.

ಒಳಚರಂಡಿ ನೀರಿನ ಸಂಸ್ಕರಣೆ: ಬೇಸಿಗೆಯಲ್ಲಿ ನದಿ ನೀರಿನ ಮೇಲೆ ಅವಲಂಬನೆ ಕಡಿಮೆ ಮಾಡುವುದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಯಿಂದ ಪಡೆಯುತ್ತಿರುವ ಒಳಚರಂಡಿ ಸಂಸ್ಕರಿತ ನೀರಿನ ಪ್ರಮಾಣವನ್ನು 3.5 ಎಂಜಿಡಿಯಿಂದ 5 ಎಂಜಿಡಿಗೆ ಏರಿಸಲು ಉದ್ದೇಶಿಸಲಾಗಿದೆ. ಅಲ್ಲದೆ ತುಂಬೆ ಡ್ಯಾಂನಲ್ಲಿ 7 ಮೀಟರ್‌ ನೀರು ನಿಲ್ಲಿಸುವುದಕ್ಕೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವುದು. ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಪಾವತಿ ವಿಚಾರದಲ್ಲಿ ನೆರವಾಗುವ ಬಗ್ಗೆ ಜಿಲ್ಲಾಡಳಿತ ಜೊತೆಗೆ ಚರ್ಚೆ ನಡೆಸಲಾಗುವುದು ಎಂದರು.

ಇರಾನ್‌ನಿಂದ ಕಚ್ಚಾ ತೈಲ ದುಬಾರಿ ಆಮದಿನಿಂದ ಇಲ್ಲಿನ ತೈಲ ಸಂಸ್ಕರಣೆ ಮೇಲೆ ಪರಿಣಾಮ ಉಂಟಾಗಿದೆ. ಆದ್ದರಿಂದ ಇರಾನ್‌ನಿಂದ ತೈಲ ಆಮದನ್ನು ಕಡಿಮೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸೆಪ್ಟೆಂಬರ್‌ ವೇಳೆಗೆ ಯುನೈಟೆಡ್‌ ಸ್ಟೇಟ್ಸ್‌ನಿಂದ ಕಚ್ಚಾ ತೈಲ ಆಮದಾಗಲಿದೆ ಎಂದರು.

ರಿಫೈನರಿ ನಿರ್ದೇಶಕ ವಿನಯ ಕುಮಾರ್‌, ಜಿಎಂ ಪ್ರಶಾಂತ್‌ ಬಾಳಿಗ ಇದ್ದರು.

Follow Us:
Download App:
  • android
  • ios