ಇಲ್ಲಿ ಕೈಗಿಂತ ತಲೆ ಮುಖ್ಯ. ನಿಮ್ಮ ಬುದ್ದಿನಾ ಸ್ವಲ್ಪ ಚುರುಕುಗೊಳಿಸಿ ಓಯೋಗೆ ಒಂದು ಹೆಸ್ರು ಸೂಚಿಸಿ. ಲಕ್ ಚೆನ್ನಾಗಿದ್ರೆ ಮೂರು ಲಕ್ಷ ಹಣ ಸಿಗುತ್ತೆ.
ನಿಮ್ಮ ಆಲೋಚನೆ ಜಾಗತೀಕ ಮಟ್ಟದಲ್ಲಿದ್ರೆ ನಿಮಗೊಂದು ಅವಕಾಶ ಇದೆ. ರಾತ್ರಿ – ಹಗಲು ಕಷ್ಟಪಡ್ಬೇಕಾಗಿಲ್ಲ. ಕಂಪ್ಯೂಟರ್ ಮುಂದೆ ಕುಳಿತು ದಿನವಿಡೀ ಕೆಲ್ಸ ಮಾಡ್ಬೇಕಾಗಿಲ್ಲ. ಬುದ್ದಿ ಉಪಯೋಗಿಸಿ ಒಂದು ಹೆಸರು ಸೂಚಿಸಿದ್ರೆ ಸಾಕು. ನಿಮ್ಮ ಹೆಸ್ರಿಗೆ ಫುಲ್ ಮಾರ್ಕ್ಸ್ ಬಿದ್ರೆ ಲಕ್ಷ ನಿಮ್ಮ ಕೈನಲ್ಲಿರುತ್ತೆ. ಈ ಆಫರ್ ಓಯೋ ನೀಡ್ತಿದೆ. ಯಸ್. ರಿತೇಶ್ ಅಗರ್ವಾಲ್ ನೇತೃತ್ವದ ಓಯೋ (OYO) ಕಂಪನಿ ಶೀಘ್ರದಲ್ಲೇ ಐಪಿಒ (IPO) ಗೆ ಸಿದ್ಧತೆ ನಡೆಸ್ತಿದೆ. ಕಂಪನಿ ತನ್ನ ಮೂಲ ಕಂಪನಿ ಒರಾವೆಲ್ ಸ್ಟೇಸ್ ಹೆಸರು ಬದಲಿಸಲು ಮುಂದಾಗಿದೆ. ಕಂಪನಿಗೊಂದು ಒಳ್ಳೆ ಹೆಸರನ್ನು ನೀವು ಸೂಚಿಸಿದ್ರೆ ಕುಳಿತಲ್ಲೇ ಹಣ ಸಂಪಾದನೆ ಮಾಡುವ ಅವಕಾಶ ನಿಮಗೆ ಸಿಗಲಿದೆ. ಒಳ್ಳೆ ಹೆಸರಿಗೆ ಹಣ ನೀಡೋದಾಗಿ ಕಂಪನಿ ಹೇಳಿದೆ. ಬರೀ ನೂರು, ಐನೂರಲ್ಲ, ಬರೋಬ್ಬರಿ 3 ಲಕ್ಷ ರೂಪಾಯಿ ನೀಡೋದಾಗಿ ಕಂಪನಿ ಘೋಷಿಸಿದೆ.
ಒರಾವೆಲ್ ಸ್ಟೇಸ್ (Oravel Stays), ತನ್ನ ಹೆಸರು ಬದಲಿಸಲು ಜನರ ಅಭಿಪ್ರಾಯ ಕೇಳಿದೆ. ಮಾಧ್ಯಮ ವರದಿಗಳ ಪ್ರಕಾರ, ಕಂಪನಿ, ಜಾಗತಿಕ ಮಟ್ಟದಲ್ಲಿ ಗುರುತಿಸುವ ಹಾಗೂ ಭವಿಷ್ಯದ ಚಿಂತನೆಯನ್ನು ಪ್ರತಿಬಿಂಬಿಸುವ ಹೊಸ ಹೆಸರನ್ನು ಬಯಸ್ತಿದೆ. ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್, ಇನ್ಸ್ಟಾಗ್ರಾಮ್ ನಲ್ಲಿ ಈ ವಿಷ್ಯವನ್ನು ತಿಳಿಸಿದ್ದಾರೆ. ಸ್ಪರ್ಧೆಯ ವಿಜೇತರಿಗೆ 3 ಲಕ್ಷ ನಗದು ಬಹುಮಾನ ಸಿಗಲಿದೆ ಅಂತ ಅವರು ಹೇಳಿದ್ದಾರೆ.
ಹೇಗಿರಬೇಕು ಹೆಸರು? : ಒರಾವೆಲ್ ಸ್ಟೇಸ್ ಗೆ ಹೊಸ, ಆಕರ್ಷಕ ಹೆಸರನ್ನು ಸೂಚಿಸಿದವರಿಗೆ ಹಣದ ಜೊತೆ ರಿತೇಶ್ ಅಗರ್ವಾಲ್ ಭೇಟಿಗೆ ಅವಕಾಶ ಸಿಗ್ತಿದೆ. ರಿತೇಶ್ ಅಗರ್ವಾಲ್, ಹೆಸರು ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ. ಹೆಸರು ಪ್ರಭಾವಶಾಲಿಯಾಗಿರ್ಬೇಕು. ಬಲವಾದ ಪದವಾಗಿರಬೇಕು. ಪ್ರಪಂಚದಾದ್ಯಂತ ಇರುವ ಜನರಿಗೆ ಅದು ಇಷ್ಟವಾಗುವಂತಿರಬೇಕು. ಯಾವುದೇ ನಿರ್ದಿಷ್ಟ ಭಾಷೆ ಅಥವಾ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿರಬಾರದು. ತಾಂತ್ರಿಕ ಆಧುನಿಕತೆಯ ಜೊತೆಗೆ ಮಾನವ ಭಾವನೆಯನ್ನು ಪ್ರತಿಬಿಂಬಿಸಬೇಕು. ಇದರ .com ಡೊಮೇನ್ ಸುಲಭವಾಗಿ ಲಭ್ಯವಿರಬೇಕು ಎಂದು ರಿತೇಶ್ ಅಗರ್ವಾಲ್ ಹೇಳಿದ್ದಾರೆ.
ಈಗ ಕಂಪನಿ ಬಯಸಿರುವ ಹೆಸರು ಹೊಟೇಲ್ ಗೆ ಅಲ್ಲ. ಯಾವುದೇ ಗ್ರಾಹಕ ಉತ್ಪನ್ನಕ್ಕೂ ಅಲ್ಲ. ಇದು ಕಾರ್ಪೋರೇಟ್ ಕಂಪನಿಗೆ ಎಂದು ರಿತೇಶ್ ಸ್ಪಷ್ಟಪಡಿಸಿದ್ದಾರೆ. ಮೂಲಗಳ ಪ್ರಕಾರ, ಓಯೋ ಪ್ರೀಮಿಯಂ ಮತ್ತು ಮಧ್ಯಮ ಮಾರುಕಟ್ಟೆ ಹೋಟೆಲ್ ಗಳನ್ನು ಗುರಿಯಾಗಿಸುವ ಹೊಸ ಅಪ್ಲಿಕೇಶನ್ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹೆಸರನ್ನು ಹೊಸ ಅಪ್ಲಿಕೇಶನ್ ಗೂ ಬಳಸುವ ಸಾಧ್ಯತೆ ಇದೆ.
ಐಪಿಒ ತಯಾರಿಯಲ್ಲಿ ಕಂಪನಿ : ಮುಂದಿನ ತಿಂಗಳು ಲಂಡನ್ ನಲ್ಲಿ ಕಂಪನಿಯ ಪ್ರಮುಖ ಹೂಡಿಕೆದಾರ ಸಾಫ್ಟ್ಬ್ಯಾಂಕ್ ಜೊತೆ ಮೀಟಿಂಗ್ ನಡೆಯಲಿದೆ. ಅದಕ್ಕೆ ಮೊದಲು ಕಂಪನಿ ಮರುಬ್ರಾಂಡ್ ಗೆ ಸಿದ್ಧತೆ ನಡೆಸಿದೆ. ಈ ಸಭೆಯಲ್ಲಿ, ಓಯೋದ ಐಪಿಒ ಸಿದ್ಧತೆಯನ್ನು ಐದು ಹೂಡಿಕೆ ಬ್ಯಾಂಕ್ ಗಳು ನಿರ್ಣಯಿಸಲಿವೆ. ಓಯೋ ಲಾಭದಲ್ಲಿರುವ ಕಂಪನಿಗಳಲ್ಲಿ ಒಂದು. ಇತ್ತೀಚೆಗೆ 2024-25ರ ಆರ್ಥಿಕ ವರ್ಷದಲ್ಲಿ 623 ಕೋಟಿ ರೂಪಾಯಿ ತೆರಿಗೆ ನಂತರದ ಲಾಭದ ವರದಿಯನ್ನು ಬಿಡುಗಡೆ ಮಾಡಿದೆ. ಅದು ಕಳೆದ ವರ್ಷದ 229 ಕೋಟಿಗೆ ಹೋಲಿಸಿದರೆ ಶೇಕಡಾ 172ರಷ್ಟು ಹೆಚ್ಚಳವಾಗಿದೆ. ಓಯೋ ತನ್ನ ಹೊಟೇಲ್ ಗಳನ್ನು ಬೇರೆ ನಗರಗಳಿಗೆ ವಿಸ್ತರಿಸುವ ಪ್ಲಾನ್ ಕೂಡ ಹೊಂದಿದೆ. ಸದ್ಯ ಭಾರತದ 124 ನಗರಗಳಲ್ಲಿ ಓಯೋ ಹೊಟೇಲ್ ಗಳಿವೆ. 2026ರ ವೇಳೆಗೆ ಈ ಸಂಖ್ಯೆಯನ್ನು 300ಕ್ಕೆ ಏರಿಸಲು ಕಂಪನಿ ಯೋಜನೆ ರೂಪಿಸ್ತಿದೆ. ಮಂಗಳೂರು, ಕಾಸರಗೋಡು ಸೇರಿದಂತೆ ಅನೇಕ ಕಡೆ ಓಯೋ ಹೊಟೇಲ್ ತಲೆ ಎತ್ತಲಿದೆ. ಪ್ರವಾಸಿ ತಾಣಗಳು, ಹೆಚ್ಚು ಜನನಿಬಿಡಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಕೆಲ್ಸ ಮಾಡ್ತಿದೆ.