ಐಸ್ ಪಾಪ್ ಕಣ್ಮರೆಯಾಗುತ್ತಿರುವುದನ್ನು ಗಮನಿಸಿದ ಹೈದರಾಬಾದ್‌ನ ರವಿ ಮತ್ತು ಅನುಜಾ ದಂಪತಿ, "ಸ್ಕಿಪ್ಪಿ ಐಸ್ ಪಾಪ್ಸ್" ಕಂಪನಿ ಆರಂಭಿಸಿದರು. ಶಾರ್ಕ್ ಟ್ಯಾಂಕ್ ಇಂಡಿಯಾದಿಂದ ಒಂದು ಕೋಟಿ ಹೂಡಿಕೆ ಪಡೆದು, ಈಗ ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಆರು ರುಚಿಗಳ ಐಸ್ ಪಾಪ್‌ಗಳನ್ನು ಫ್ರೀಜರ್ ಬೈಕ್‌ಗಳ ಮೂಲಕ ಮಾರಾಟ ಮಾಡಿ, ೨೦೨೨-೨೩ರಲ್ಲಿ ೧೫.೪ ಕೋಟಿ ಆದಾಯ ಗಳಿಸಿದ್ದಾರೆ.
ಶಾಲಾ ದಿನಗಳು ನೂರಾರು ನೆನಪುಗಳ ಬುತ್ತಿ. ಆಟ, ಓಟ, ಪಾಠದ ಮಧ್ಯೆ ಅನೇಕ ತಿಂಡಿಗಳನ್ನು ನಾವೆಲ್ಲರೂ ಆಗ ತಿಂತಿದ್ವಿ. ಅದ್ರಲ್ಲಿ ಐಸ್ ಪಾಪ್ (Ice pop) ಕೂಡ ಒಂದು. ಶಾಲೆ ಬಿಡ್ತಿದ್ದಂತೆ ಬಹುತೇಕ ಮಕ್ಕಳ ಕೈನಲ್ಲಿ ಇರ್ತಿದ್ದ ಈ ಐಸ್ ಪಾಪ್ ಕಣ್ಮರೆಯಾಗ್ತಿರೋದನ್ನು ಕಂಡ ದಂಪತಿಯೊಂದು ಅದನ್ನೇ ತಮ್ಮ ಬ್ಯುಸಿನೆಸ್ ಆಗಿ ಬದಲಿಸಿಕೊಂಡಿದ್ದಾರೆ. ಈಗ ಮಕ್ಕಳ ಜೊತೆ ದೊಡ್ಡವರಿಗೆ ಸ್ಕಿಪ್ಪಿ ಐಸ್ ಪಾಪ್ಸ್ ನೀಡುವ ಮೂಲಕ ಕೋಟಿ ಸಂಪಾದನೆ ಮಾಡ್ತಿದ್ದಾರೆ. ಹೈದರಾಬಾದ್ ಮೂಲದ ರವಿ ಮತ್ತು ಅನುಜಾ ಕಬ್ರಾ ದಂಪತಿಯ ಸ್ಕಿಪ್ಪಿ ಐಸ್ ಪಾಪ್ಸ್ (Skippy Ice Pops) ಪ್ರಸಿದ್ಧಿ ಪಡೆದಿದೆ. ರವಿ ಮತ್ತು ಅನುಜಾ ಕಬ್ರಾ ಅವರ ಸ್ಕಿಪ್ಪಿ ಐಸ್ ಪಾಪ್ಸ್ ಕಂಪನಿಯು ಶಾರ್ಕ್ ಟ್ಯಾಂಕ್ ಇಂಡಿಯಾ (Shark Tank India)ಕ್ಕೆ ಬಂದಿತ್ತು. ಅಲ್ಲಿ ರವಿ ಮತ್ತು ಅನುಜಾ 1 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆ. ಈ ಹಣದಿಂದ ಕಂಪನಿಯ ಮಾರಾಟ ಹಲವು ಪಟ್ಟು ಹೆಚ್ಚಾಗಿದೆ. ರವಿ ಮತ್ತು ಅನುಜಾ ಕಬ್ರಾ ಅವರ ಯಶಸ್ಸಿನ ಪ್ರಯಾಣ ಅನೇಕರಿಗೆ ಸ್ಫೂರ್ತಿಯಾಗಿದೆ.
2020ರಲ್ಲಿ ಶುರುವಾಯ್ತು ಕಂಪನಿ : ರವಿ ಮತ್ತು ಅನುಜಾ ಕಬ್ರಾ ಆಹಾರ ಮತ್ತು ಪಾನೀಯ (ಎಫ್ & ಬಿ) ಉದ್ಯಮದಲ್ಲಿ 17 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳ (MNCs) ಜೊತೆ ಕೆಲಸ ಮಾಡಿದ ಅನುಭವವನ್ನು ಅವರು ಹೊಂದಿದ್ದಾರೆ. ಐಸ್ ಪಾಪ್ ಕೊರತೆ ಅರಿತ ರವಿ ಹಾಗೂ ಅನುಜಾ, ಐಸ್ ಪಾಪ್ ಬಗ್ಗೆ ಸಂಶೋಧನೆ ನಡೆಸಿದ್ರು. ಅವರು ತೆಲಂಗಾಣದ ಶಂಶಾಬಾದ್ನಲ್ಲಿ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದರು. ತಮ್ಮ ನೆಚ್ಚಿನ ಚುಸ್ಕಿಯನ್ನು ಆರೋಗ್ಯಕರ ಮತ್ತು ರುಚಿಕರವಾಗಿರಲು ಬಯಸಿದ್ರು. ಕಬ್ರಾ ದಂಪತಿ 2020 ರಲ್ಲಿ, ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಸ್ವಲ್ಪ ಮೊದಲು ಸ್ಕಿಪ್ಪಿ ಐಸ್ ಪಾಪ್ಸ್ ಪ್ರಾರಂಭಿಸಿದ್ರು. ಕಂಪನಿಯು ರಾಸ್ಪ್ಬೆರಿ, ಕಿತ್ತಳೆ, ಮಾವು ಟ್ವಿಸ್ಟ್, ಬಬಲ್ಗಮ್, ಕೋಲಾ ಸೇರಿ ನಿಂಬೆಯ ಆರು ರುಚಿಗಳಲ್ಲಿ ಐಸ್ ಪಾಪ್ ಬಿಡುಗಡೆ ಮಾಡಿದೆ.
ಶಾರ್ಟ್ ಟ್ಯಾಂಕ್ ಇಂಡಿಯಾದಿಂದ ನೆರವು : ರವಿ ಮತ್ತು ಅನುಜಾ ಶಾರ್ಟ್ ಟ್ಯಾಂಕ್ ಇಂಡಿಯಾ ಸೀಸನ್ 1 ರಲ್ಲಿಯೂ ಕಾಣಿಸಿಕೊಂಡಿದ್ರು. ತೀರ್ಪುಗಾರರು ಅವರ ಕಲ್ಪನೆ ಮತ್ತು ಅಭಿರುಚಿಗಳನ್ನು ಇಷ್ಟಪಟ್ಟರು. ಅವರಿಗೆ 1 ಕೋಟಿ ರೂಪಾಯಿಗೂ ಹೆಚ್ಚು ಹಣಕಾಸು ಸಿಕ್ಕಿತು. ಶಾರ್ಕ್ ಟ್ಯಾಂಕ್ ಇಂಡಿಯಾಕ್ಕೆ ಬರುವ ಮೊದಲು ಸ್ಕಿಪ್ಪಿಯ ಬೆಳವಣಿಗೆ ವೇಗ ಪಡೆದಿರಲಿಲ್ಲ. ಪ್ರತಿ ತಿಂಗಳು ನಾಲ್ಕರಿಂದ ಐದು ಲಕ್ಷ ರೂಪಾಯಿ ವ್ಯವಹಾರ ನಡೆಯುತ್ತಿತ್ತು. ಆದ್ರೀಗ ಸ್ಕಿಪ್ಪಿ ಐಸ್ ಪಾಪ್ಸ್ ಮಾರಾಟ ಹೆಚ್ಚಾಗಿದೆ. ಒಂದು ತಿಂಗಳಲ್ಲಿ ವ್ಯವಹಾರದ ಮೊತ್ತ ಕೋಟಿ ರೂಪಾಯಿಗೆ ತಲುಪಿದೆ. ಆನ್ಲೈನ್ನಲ್ಲಿ 20,000 ಕ್ಕೂ ಹೆಚ್ಚು ಆರ್ಡರ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ.
ಸ್ಕಿಪ್ಪಿ ಫ್ರೀಜರ್ ಬೈಕ್ : ಗ್ರಾಹಕರನ್ನು ಸುಲಭವಾಗಿ ತಲುಪಲು ಪ್ಲಾನ್ ಮಾಡಿದ ರವಿ ಮತ್ತು ಅನುಜಾ ಸ್ಕಿಪ್ಪಿ ಫ್ರೀಜರ್ ಬೈಕ್ ಬಿಡುಗಡೆ ಮಾಡಿದ್ದಾರೆ. ಇದು ಗ್ರಾಹಕರ ಮನೆಗೆ ಐಸ್ ಪಾಪ್ ತಲುಪಿಸಲು ಸಹಾಯ ಮಾಡಿದೆ. ಫ್ರೀಜರ್ ಇರುವುದರಿಂದ ಐಸ್ ಪಾಪ್ಗಳುನ್ನು ಯಾವಾಗ್ಲೂ ತಿನ್ಬಹುದು. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಸ್ಟಮೈಸ್ ಮಾಡುವ ಬೈಕ್ಡಬ್ಲ್ಯೂಒ ಕಂಪನಿಯಿಂದ 100 ಕ್ಕೂ ಹೆಚ್ಚು ಬೈಕ್ಗಳನ್ನು ಸ್ಕಿಪ್ಪಿ ಆರ್ಡರ್ ಮಾಡಿತ್ತು. ಸ್ಕಿಪ್ಪಿ ಇವಿ ಫ್ರೀಜರ್ ಬೈಕ್ ಬಿಡುಗಡೆ ಮಾಡಲು ಬೈಕ್ವೋ ಜೊತೆ ಒಪ್ಪಂದ ಮಾಡಿಕೊಂಡಿದೆ ಸ್ಕಿಪ್ಪಿ ಐಸ್ ಪಾಪ್ಸ್ ಪ್ರಸ್ತುತ ಹೈದರಾಬಾದ್ನಲ್ಲಿ 1,500 ಕ್ಕೂ ಹೆಚ್ಚು ಅಂಗಡಿಗಳಲ್ಲಿ ಲಭ್ಯವಿದೆ. ಇದಲ್ಲದೆ, ಅವುಗಳನ್ನು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಿಂದಲೂ ಖರೀದಿಸಬಹುದು. ಒಂದು ಪಾಪ್ ಬೆಲೆ ಸುಮಾರು 20 ರೂಪಾಯಿ. ಆರು ರುಚಿಗಳಲ್ಲಿ 12 ಪಾಪ್ಗಳ ಬಾಕ್ಸ್ ಗ್ರಾಹಕರಿಗೆ ಸಿಗ್ತಿದೆ. 2022-23ನೇ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯ 40 ಪಟ್ಟು ಹೆಚ್ಚಾಗಿ 15.4 ಕೋಟಿ ರೂಪಾಯಿ ತಲುಪಿದೆ.


