ನವದೆಹಲಿ(ಆ.31): ಪ್ರಧಾನಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು, ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸಲು ಬೇಕಾದ  ಧೈರ್ಯ ಮತ್ತು ಜ್ಞಾನ ಎರಡೂ ನಮ್ಮಲ್ಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವುದಾಗಿ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಅಲ್ಲದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಕೇಂದ್ರ ಬಜೆಟ್ ವೇಳೆ ಈ ಕುರಿತು ಪ್ರಸ್ತಾಪ ಮಾಡಿದ್ದರು. ಆದರೆ ಅದನ್ನು ಸಾಧಿಸುವ ಮಾರ್ಗದ ಕುರಿತು ಯಾರೂ ಮಾತನಾಡುತ್ತಿಲ್ಲ ಎಂದು ಸ್ವಾಮಿ ಹರಿಹಾಯ್ದಿದ್ದಾರೆ.

ಭಾರತದ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದ್ದು, ಆರ್ಥಿಕತೆಯ ಪುನಶ್ಚೇತನ ಸಾಧ್ಯವಾಗದಿರುವುದು ದುರಂತ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. 

ಕಳೆದ ಆರು ವರ್ಷಗಳಲ್ಲೇ ಜಿಡಿಪಿ ದರ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಕೇಂದ್ರ ಸರ್ಕಾರ ಕೂಡಲೇ ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸದೆ ಹೋದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಗುಡ್ ಬೈ ಹೇಳಲು ಸಿದ್ಧರಾಗಬೇಕಾಗುತ್ತದೆ ಎಂದು ಸ್ವಾಮಿ ವ್ಯಂಗ್ಯವಾಡಿದ್ದಾರೆ.