ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫ್ಯೂಚರ್ಸ್‌ ಮತ್ತು ಆಪ್ಷನ್ಸ್‌ (F&O) ವಹಿವಾಟಿನ ಮೇಲಿನ ಸೆಕ್ಯುರಿಟೀಸ್‌ ಟ್ರಾನ್ಸಾಕ್ಷನ್‌ ಟ್ಯಾಕ್ಸ್‌ (STT) ಅನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ. ಅಧಿಕ ಲಾಭದಾಸೆಯಿಂದ ಯುವಕರು ಮಾಡುವ ಅಪಾಯಕಾರಿ ಹೂಡಿಕೆಯನ್ನು ತಡೆಯುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ.

ನವದೆಹಲಿ: ಅಧಿಕ ಲಾಭದಾಸೆಗೆ ಯುವಕರು ಹೆಚ್ಚು ರಿಸ್ಕ್‌ ಅನ್ನು ಮೈಮೇಲೆ ಎಳೆದುಕೊಂಡು ಹೂಡಿಕೆ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಷೇರುಪೇಟೆಯ ಫ್ಯೂಚರ್ಸ್‌ ಅಂಡ್‌ ಆಪ್ಷನ್ಸ್‌ ವಹಿವಾಟಿನ ಮೇಲೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗದಾಪ್ರಹಾರ ಮಾಡಿದ್ದಾರೆ. ಫ್ಯೂಚರ್ಸ್‌ ವಹಿವಾಟಿನ ಮೇಲೆ ವಿಧಿಸಲಾಗುತ್ತಿದ್ದ ಸೆಕ್ಯುರಿಟೀಸ್‌ ಟ್ರಾನ್ಸಾಕ್ಷನ್‌ ಟ್ಯಾಕ್ಸ್‌ (ಎಸ್‌ಟಿಟಿ) ಅನ್ನು ಶೇ.0.02ರಿಂದ ಶೇ.0.05ಕ್ಕೆ ಏರಿಸಿದ್ದಾರೆ. ಇದು ಶೇ. 150ರಷ್ಟು ಹೆಚ್ಚಳವಾಗಿದೆ.

ಮತ್ತೊಂದೆಡೆ, ಆಪ್ಷನ್ಸ್‌ ವಹಿವಾಟಿನ ಮೇಲೆ ಹೇರುವ ಎಸ್‌ಟಿಟಿ ಅನ್ನು ಶೇ.0.1ರಿಂದ ಶೇ.0.15ಕ್ಕೆ ಹೆಚ್ಚಳ ಮಾಡಿದ್ದಾರೆ. ಇದು ಶೇ.50ರಷ್ಟು ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ ಷೇರು ಸೂಚ್ಯಂಕ ಸೆನ್ಸೆಕ್ಸ್‌ ಮಕಾಡೆ ಮಲಗಿದೆ.

ಸರ್ಕಾರದ ಈ ಕ್ರಮ ಷೇರುಪೇಟೆಯಲ್ಲಿನ ಹಣದ ವಹಿವಾಟಿಗೆ ತಡೆಯೊಡ್ಡುವ ಉದ್ದೇಶದಿಂದ ಕೂಡಿಲ್ಲ. ಬದಲಾಗಿ ಭಾರಿ ಪ್ರಮಾಣದಲ್ಲಿ ಫ್ಯೂಚರ್ಸ್‌ ಅಂಡ್‌ ಆಪ್ಷನ್‌ ಮಾರುಕಟ್ಟೆಯಲ್ಲಿ ಹೂಡಿಕೆಯಾಗುತ್ತಿರುವ ಹಣದ ವಹಿವಾಟಿನ ಮೇಲೆ ತೆರಿಗೆ ಹೇರುವ ಉದ್ದೇಶವನ್ನು ಹೊಂದಿದೆ. ಷೇರು ವ್ಯವಹಾರದಲ್ಲಿ ಸಕ್ರಿಯ ಹಾಗೂ ಮಧ್ಯಮಾವಧಿ ತಂತ್ರಗಾರಿಕೆ ಹೊಂದಿರುವವರ ಮೇಲೆ ಹೆಚ್ಚು ತೆರಿಗೆ ಹೇರಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಲ್ಪಾವಧಿಯಲ್ಲೇ ಗರಿಷ್ಠ ಲಾಭ ಮಾಡುವ ಗುರಿಯೊಂದಿಗೆ ನಡೆಯುತ್ತಿರುವ ಮಿತಿಮೀರಿದ ವಹಿವಾಟು ತಗ್ಗಬಹುದು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಮತ್ತೊಂದೆಡೆ ಸರ್ಕಾರದ ಈ ಕ್ರಮದಿಂದ ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು ದೇಶದಿಂದ ಹಿಂದೆ ಸರಿಯಬಹುದು ಎಂದೂ ಕೆಲ ತಜ್ಞರು ಎಚ್ಚರಿಕೆ ಮೊಳಗಿಸಿದ್ದಾರೆ.

--

ಫ್ಯೂಚರ್‌ ಅಂಡ್ ಆಪ್ಷನ್ಸ್‌ ಏನಿದು?

ನೈಜ ಷೇರುಗಳನ್ನು ಖರೀದಿಸುವ ಬದಲು ಒಂದು ಕರಾರಿನಂತೆ ನಡೆದುಕೊಳ್ಳುವುದೇ ಫ್ಯೂಚರ್‌ ಅಂಡ್‌ ಆಪ್ಷನ್ಸ್‌ ಟ್ರೇಡಿಂಗ್‌. ಇದನ್ನು ‘ಎಫ್‌ ಅಂಡ್‌ ಒ’ ಎಂದು ಕರೆಯಲಾಗುತ್ತದೆ. ಫ್ಯೂಚರ್ಸ್‌ ವಹಿವಾಟು ಅಡಿ, ಒಂದು ನಿರ್ದಿಷ್ಟ ಬೆಲೆಗೆ ಮುಂದೆ ಷೇರು ಖರೀದಿ ಅಥವಾ ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಆಪ್ಷನ್ಸ್‌ ವಹಿವಾಟಿನಡಿ, ನಿರ್ದಿಷ್ಟ ದಿನಾಂಕದಂದು ಷೇರು ಖರೀದಿ ಅಥವಾ ಮಾರಾಟ ಮಾಡುವ ಹಕ್ಕು ಇರುತ್ತದೆ. ಈ ವಹಿವಾಟಿನಿಂದ ಲಾಭ ಹೆಚ್ಚು. ಆದರೆ, ಅಪಾಯವೂ ಅಧಿಕ. ಇದೊಂದು ರೀತಿ ಬೆಟ್ಟಿಂಗ್‌ ಇದ್ದಂತೆ.

ಎಸ್‌ಟಿಟಿ ಏನು? ಏಕೆ?

ಷೇರುಪೇಟೆಯಲ್ಲಿ ವ್ಯವಹಾರ ಮಾಡುವವರ ಮೇಲೆ ವಿಧಿಸಲಾಗುವ ತೆರಿಗೆಯೇ ಸೆಕ್ಯುರಿಟೀಸ್‌ ಟ್ರಾನ್ಸಾಕ್ಷನ್‌ ಟ್ಯಾಕ್ಸ್‌. ಎಸ್‌ಟಿಟಿ ಎಂದೇ ಇದು ಚಿರಪರಿಚಿತ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ನಡೆಸುವ ಪ್ರತಿ ವಹಿವಾಟಿನ ಮೇಲೂ ಎಸ್‌ಟಿಟಿ ವಿಧಿಸಲಾಗುತ್ತದೆ. ಅದು ಲಾಭವೇ ಇರಲಿ, ನಷ್ಟವೇ ಇರಲಿ, ಷೇರು ಖರೀದಿಯೇ ಇರಲಿ, ಮಾರಾಟವೇ ಇರಲಿ. ಸರ್ಕಾರಕ್ಕೆ ಕಟ್ಟಬೇಕಿರುವ ತೆರಿಗೆ ಇದು. ಷೇರು, ಮ್ಯೂಚುಯಲ್‌ ಫಂಡ್‌, ಫ್ಯೂಚರ್ಸ್‌ ಹಾಗೂ ಆಪ್ಷನ್ಸ್‌ ವಹಿವಾಟಿಗೂ ಈ ತೆರಿಗೆ ಇದೆ. 2004ರ ಅ.1ರಿಂದ ಜಾರಿಯಲ್ಲಿದೆ.

ಹೂಡಿಕೆದಾರರಿಗೆ ಸಿಟ್ಟು ಏಕೆ?

ಎಸ್‌ಟಿಟಿ ಏರಿಕೆ ಮಾಡಿರುವುದರಿಂದ ದಿನನಿತ್ಯ ಷೇರು ವ್ಯವಹಾರದಲ್ಲೇ ತೊಡಗಿರುವವರು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ವಹಿವಾಟು ವೆಚ್ಚ ಹೆಚ್ಚಾಗುತ್ತದೆ. ಉದಾಹರಣೆಗೆ, 1 ಲಕ್ಷ ರು.ನ ಫ್ಯೂಚರ್ಸ್‌ ಕಾಂಟ್ರ್ಯಾಕ್ಟ್‌ ಹೊಂದಿರುವ ಹೂಡಿಕೆದಾರ ಈವರೆಗೆ 20 ರು. ಅನ್ನು ಎಸ್‌ಟಿಟಿ ಆಗಿ ಪಾವತಿಸುತ್ತಿದ್ದ. ಇನ್ನು ಮುಂದೆ ಆತ 50 ರು. ಕಟ್ಟಬೇಕು. ಇದು ಸಣ್ಣ ಮೊತ್ತವಾಗಿ ಕಾಣಬಹುದು. ಆದರೆ ಷೇರುಪೇಟೆಯಲ್ಲಿ ಪ್ರತಿನಿತ್ಯ ಇಂತಹ ಲೆಕ್ಕವಿಲ್ಲದಷ್ಟು ವ್ಯವಹಾರ ನಡೆಯುತ್ತವೆ. ಒಬ್ಬನೇ ಹೂಡಿಕೆದಾರ ತನಗಿಷ್ಟ ಬಂದ ಸಲ ಷೇರು ಖರೀದಿ/ಮಾರಾಟ ಮಾಡಿ, ಲಾಭ ಗಳಿಸುವ ಉಮೇದಿಯಲ್ಲಿರುತ್ತಾನೆ. ಎಸ್‌ಟಿಟಿಯಿಂದ ಲಾಭ ಕಡಿತವಾದರೆ, ನಷ್ಟ ಹೆಚ್ಚಾಗುತ್ತದೆ.

--

ಯುವಕರ ಆತ್ಮ*ಹತ್ಯೆ ತಡೆವ ಉದ್ದೇಶದಿಂದ ತೆರಿಗೆ ಏರಿಕೆ?

ದಿಢೀರ್‌ ಶ್ರೀಮಂತರಾಗುವ ಆಸೆಯಿಂದ ದೇಶದ ಉದ್ದಗಲಕ್ಕೂ ಯುವಕರು ಎಫ್‌ ಅಂಡ್ ಒ ಮಾರುಕಟ್ಟೆಯತ್ತ ಆಕರ್ಷಿತರಾಗಿ ಹಣ ಹೂಡಿ, ಭಾರಿ ನಷ್ಟ ಅನುಭವಿಸಿದ್ದಾರೆ. ಹಲವರು ಆತ್ಮ*ಹತ್ಯೆಗೂ ಶರಣಾಗಿದ್ದಾರೆ. ಎಫ್‌ ಅಂಡ್‌ ಒ ದಲ್ಲಿ ಹೂಡುವ ಪ್ರತಿ 10 ಮಂದಿಯಲ್ಲಿ 9 ಮಂದಿ ಹಣ ಕಳೆದುಕೊಂಡಿದ್ದಾರೆ. ಹೀಗಾಗಿ ಸರ್ಕಾರ ಎಸ್‌ಟಿಟಿ ಏರಿಕೆ ಮಾಡಿದೆ. ತನ್ಮೂಲಕ ಎಫ್‌ ಅಂಡ್‌ ಒ ಬದಲು ಷೇರುಪೇಟೆಯತ್ತ ಜನರು ಆಕರ್ಷಿತರಾಗುವಂತೆ ಮಾಡುವುದು ಹಾಗೂ ಎಫ್‌ ಅಂಡ್‌ ಒ ಮಾರುಕಟ್ಟೆಯಿಂದ ಹೆಚ್ಚು ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ.

--

ಜನ ಹಣ ಕಳೆದುಕೊಳ್ತಿದ್ದಾರೆ

ಅಧಿಕ ಲಾಭದಾಸೆಯಿಂದ ಹೈ ರಿಸ್ಕ್‌ ತೆಗೆದುಕೊಂಡು ಹೂಡಿಕೆ ಮಾಡಿ ಸಣ್ಣ ಹಾಗೂ ಚಿಲ್ಲರೆ ಹೂಡಿಕೆದಾರರು ಎಫ್‌ ಅಂಡ್‌ ಒ ದಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಅಂಥವರನ್ನು ನಿರುತ್ತೇಜನಗೊಳಿಸಲು ಎಸ್‌ಟಿಟಿ ಏರಿಕೆ ಮಾಡಲಾಗಿದೆ.

- ಅರವಿಂದ್‌ ಶ್ರೀವಾಸ್ತವ, ಕಂದಾಯ ಕಾರ್ಯದರ್ಶಿ