ಬೆಂಗಳೂರು (ಮಾ. 29):  ರಾಜ್ಯ ಸರ್ಕಾರಿ ನೌಕರರಿಗೆ ಸಮ್ಮಿಶ್ರ ಸರ್ಕಾರವು ಯುಗಾದಿ ಕೊಡುಗೆ ನೀಡಿದ್ದು, 2019ರ ಜನವರಿ 1ರಿಂದ ಪೂರ್ವಾನ್ವಯ ಆಗುವಂತೆ ನೌಕರರ ಮೂಲ ವೇತನದ ಶೇ.2.75ರಷ್ಟುತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾ.28 ರಂದು ಆದೇಶ ಹೊರಡಿಸಿರುವ ಸರ್ಕಾರ, 2018ರ ಪರಿಷ್ಕೃತ ಶ್ರೇಣಿಗಳ ಮೂಲವೇತನಕ್ಕೆ ತುಟ್ಟಿಭತ್ಯೆಯನ್ನು ಶೇ.3.75ರಿಂದ ಶೇ.6.50ಕ್ಕೆ ಹೆಚ್ಚಳ ಮಾಡಿದೆ. 2019ರ ಜನವರಿಯಿಂದ ಅನ್ವಯವಾಗುವಂತೆ ಮಾಚ್‌ರ್‍ ತಿಂಗಳ ವೇತನ ಪಾವತಿ ವೇಳೆ ಅಥವಾ ಬಳಿಕ ತುಟ್ಟಿಹಣ ಪಾವತಿಸುವಂತೆ ಸೂಚನೆ ನೀಡಲಾಗಿದೆ.

ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರಿಗೆ, ಪೂರ್ಣಾವಧಿ ವರ್ಕ್ಚಾಜ್‌ರ್‍ ನೌಕರರಿಗೆ, ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯವಾಗುತ್ತದೆ.

ಇದಲ್ಲದೆ ನಿವೃತ್ತಿ ವೇತನದಾರರಿಗೂ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರವನ್ನು ಹೆಚ್ಚಳ ಮಾಡಿದ್ದು, ಮೂಲ ನಿವೃತ್ತಿ ವೇತನದ ಶೇ.3.75ರಿಂದ ಶೇ.6.50ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಪಿಂಚಣಿಯು 2016ರ ಜನವರಿ 1ಕ್ಕಿಂತ ಮೊದಲು ನಿವೃತ್ತರಾದವರಿಗೆ ಅನ್ವಯವಾಗಲಿದ್ದು, ಜನವರಿ 1, 2019ರಿಂದ ಪೂರ್ವಾನ್ವಯವಾಗುವಂತೆ ಬಿಡುಗಡೆ ಮಾಡಲು ಸೂಚಿಸಲಾಗಿದೆ.