Asianet Suvarna News Asianet Suvarna News

ಮೋದಿ ಬೆಂಬಲ: ದಕ್ಷಿಣ ಚೀನಾ ಸಮುದ್ರದ ಬಿಕ್ಕಟ್ಟಿನ ನಡುವೆಯೂ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಬಲ!

ಪ್ರಸ್ತುತ ಬೆಳವಣಿಗೆ ಭಾರತ - ಫಿಲಿಪೈನ್ಸ್ ಸಹಯೋಗವನ್ನು ಇನ್ನಷ್ಟು ಉತ್ತಮಗೊಳಿಸುವ ಜೊತೆಗೆ, ಭಾರತದ ರಾಜತಾಂತ್ರಿಕ ಸಾಮರ್ಥ್ಯವನ್ನೂ ಪ್ರದರ್ಶಿಸಿದೆ. ಪ್ರಸ್ತುತ ಥೈಲ್ಯಾಂಡ್, ವಿಯೆಟ್ನಾಂ, ಮತ್ತು ಇಂಡೋನೇಷ್ಯಾಗಳೂ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಆಸಕ್ತಿ ವ್ಯಕ್ತಪಡಿಸಿವೆ.
 

PM Modi support to BrahMos force for the Philippines despite the South China Sea crisis gvd
Author
First Published Apr 22, 2024, 11:16 AM IST

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

2022ರ ಜನವರಿ ತಿಂಗಳಲ್ಲಿ ಭಾರತ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಸರಬರಾಜು ಮಾಡಲು ಆ ದೇಶದೊಡನೆ 374.96 ಬಿಲಿಯನ್ ಡಾಲರ್ (ಅಂದಾಜು 2,700 ಕೋಟಿ ರೂಪಾಯಿ) ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದದ ಅನುಸಾರ, ಭಾರತ ಎಪ್ರಿಲ್ 19, 2024ರಂದು ಕ್ಷಿಪಣಿಗಳ ಪೂರೈಕೆಯನ್ನು ಪೂರ್ಣಗೊಳಿಸಿತು. ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ತಂಡವನ್ನು ಭಾರತೀಯ ವಾಯುಪಡೆಯ ಎರಡು ಸಿ-17 ಗ್ಲೋಬ್ ಮಾಸ್ಟರ್ ಹೆವಿ ಲಿಫ್ಟ್ ಏರ್‌ಕ್ರಾಫ್ಟ್‌ಗಳ ಮೂಲಕ ರವಾನಿಸಲಾಯಿತು. ಇದು ಭಾರತ ಮತ್ತು ಫಿಲಿಪೈನ್ಸ್ ನಡುವಿನ ಬಾಂಧವ್ಯ ವೃದ್ಧಿಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. 

ಪ್ರಸ್ತುತ ಬೆಳವಣಿಗೆ ಭಾರತ - ಫಿಲಿಪೈನ್ಸ್ ಸಹಯೋಗವನ್ನು ಇನ್ನಷ್ಟು ಉತ್ತಮಗೊಳಿಸುವ ಜೊತೆಗೆ, ಭಾರತದ ರಾಜತಾಂತ್ರಿಕ ಸಾಮರ್ಥ್ಯವನ್ನೂ ಪ್ರದರ್ಶಿಸಿದೆ. ಪ್ರಸ್ತುತ ಥೈಲ್ಯಾಂಡ್, ವಿಯೆಟ್ನಾಂ, ಮತ್ತು ಇಂಡೋನೇಷ್ಯಾಗಳೂ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಆಸಕ್ತಿ ವ್ಯಕ್ತಪಡಿಸಿವೆ. ಮಧ್ಯ ಪ್ರದೇಶದ ದಾಮೋಹ್ ಎಂಬಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಪೂರೈಸಿರುವ ಮಾಹಿತಿಯನ್ನು ಹಂಚಿಕೊಂಡು, ಈ ಮಹತ್ವದ ಸಾಧನೆಯನ್ನು ಸಂಭ್ರಮಿಸಿದರು.

ಆ್ಯಂಟೆನಾ ಸರಿಹೊಂದಿಸುವಿಕೆ: ಮುಂದೂಡಲ್ಪಟ್ಟ ನಿಸಾರ್ ಉಡಾವಣೆ

ಬ್ರಹ್ಮೋಸ್ ಕ್ಷಿಪಣಿ ವ್ಯಾಪಾರ ಎರಡು ಸರ್ಕಾರಗಳ ನಡುವಿನ ಒಪ್ಪಂದದ ಮೂಲಕ ನೆರವೇರಿದೆ. ಪ್ರಸ್ತುತ ಒಪ್ಪಂದ ಅನುಸಾರವಾಗಿ, ಭಾರತ ಬ್ರಹ್ಮೋಸ್ ಕ್ಷಿಪಣಿಗಳ ಮೂರು ಬ್ಯಾಟರಿಗಳನ್ನು ಪೂರೈಸುವ ಜೊತೆಗೆ, ಕ್ಷಿಪಣಿಯ ಕಾರ್ಯಾಚರಿಸುವವರು ಮತ್ತು ನಿರ್ವಾಹಕರಿಗೆ ತರಬೇತಿ ಒದಗಿಸಿದೆ. ಅದರೊಡನೆ, ಅವಶ್ಯಕವಾದ ಇಂಟಿಗ್ರೇಟೆಡ್ ಲಾಜಿಸ್ಟಿಕ್ಸ್ ಸಪೋರ್ಟ್ (ಐಎಲ್ಎಸ್) ಅನ್ನೂ ಸಹ ಭಾರತ ಒದಗಿಸಲಿದೆ. ಸಾಮಾನ್ಯವಾಗಿ ಒಂದು ಕ್ಷಿಪಣಿ ಬ್ಯಾಟರಿ ಮೂರು ಸ್ವಾಯತ್ತ ಲಾಂಚರ್‌ಗಳನ್ನು ಹೊಂದಿದ್ದು, ಪ್ರತಿಯೊಂದು ಲಾಂಚರ್ ಸಹ ಎರಡು ಅಥವಾ ಮೂರು ಕ್ಷಿಪಣಿ ಟ್ಯೂಬ್‌ಗಳು ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಹೊಂದಿರುತ್ತವೆ. 

ಸಬ್‌ಮರೀನ್‌ಗಳು, ನೌಕೆಗಳು, ವಿಮಾನಗಳು ಅಥವಾ ಭೂ ಕೇಂದ್ರಿತ ವೇದಿಕೆಗಳಿಂದ ಕೇವಲ ಹತ್ತು ಸೆಕೆಂಡುಗಳ ಅವಧಿಯೊಳಗೆ ಎರಡು ಕ್ಷಿಪಣಿಗಳನ್ನು ಉಡಾವಣೆಗೊಳಿಸಬಹುದು. ಫಿಲಿಪೈನ್ಸ್ ಭಾರತದಿಂದ ಬ್ರಹ್ಮೋಸ್ ಆ್ಯಂಟಿ ಶಿಪ್ ಕ್ರೂಸ್ ಕ್ಷಿಪಣಿಯ ಕಡಲ ತೀರ ಆಧಾರಿತ ಆವೃತ್ತಿಯನ್ನು ಖರೀದಿಸಿದ್ದು, ಈ ಕ್ಷಿಪಣಿ 290 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿದೆ. ಭಾರತದ ಬಳಿ ಹೆಚ್ಚು ದೀರ್ಘ ವ್ಯಾಪ್ತಿಯ ಬ್ರಹ್ಮೋಸ್ ಕ್ಷಿಪಣಿಗಳಿದ್ದರೂ, ಭಾರತ ಫಿಲಿಪೈನ್ಸ್‌ಗೆ ಒದಗಿಸಿದ ಕ್ಷಿಪಣಿ ಕಡಿಮೆ ವ್ಯಾಪ್ತಿಯ, ಮೂಲ ಬ್ರಹ್ಮೋಸ್ ಆವೃತ್ತಿಯಾಗಿದೆ.

ಬ್ರಹ್ಮೋಸ್ ಜಗತ್ತಿನ ಏಕೈಕ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಶಬ್ದದ ವೇಗಕ್ಕಿಂತ ಬಹುತೇಕ ಮೂರು ಪಟ್ಟು ಹೆಚ್ಚಿನ ವೇಗ (ಮ್ಯಾಕ್ 2.8 ಅಥವಾ ಪ್ರತಿ ಗಂಟೆಗೆ 3,457.4 ಕಿಲೋಮೀಟರ್) ಸಾಧಿಸಬಲ್ಲದು. ಈ ಕ್ಷಿಪಣಿಯನ್ನು ಕರಾವಳಿ ರಕ್ಷಣೆ ಮತ್ತು ಭೂ ದಾಳಿ ಕಾರ್ಯಾಚರಣೆಗಳೆರಡಕ್ಕೂ ಬಳಸಬಹುದು. ಭಾರತ ಮತ್ತು ರಷ್ಯಾಗಳ ಜಂಟಿ ಉತ್ಪನ್ನವಾದ ಬ್ರಹ್ಮೋಸ್ ಕ್ಷಿಪಣಿಯನ್ನು ಸಬ್‌ಮರೀನ್‌ಗಳು, ನೌಕೆಗಳು, ವಿಮಾನಗಳು ಅಥವಾ ಭೂಮಿಯಿಂದಲೂ ಉಡಾಯಿಸಬಹುದು. ಮೂಲಗಳ ಪ್ರಕಾರ, ಬ್ರಹ್ಮೋಸ್ ಕ್ಷಿಪಣಿಯ ಬಿಡಿಭಾಗಗಳ ಪೈಕಿ 83% ಈಗ ಭಾರತದಲ್ಲೇ ನಿರ್ಮಾಣಗೊಳ್ಳುತ್ತಿವೆ.

ಭಾರತ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್‌ಗೆ (ಎಂಟಿಸಿಆರ್) ಸೇರ್ಪಡೆಯಾದ ಬಳಿಕ, ಕ್ಷಿಪಣಿಯ ವ್ಯಾಪ್ತಿಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ತೊಡೆದುಹಾಕಲಾಯಿತು. ಇದರ ಪರಿಣಾಮವಾಗಿ, ಹೆಚ್ಚಿನ ವ್ಯಾಪ್ತಿಯ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಲಾಯಿತು. ಆರಂಭಿಕ ಹಂತದಲ್ಲಿ, ಕ್ಷಿಪಣಿಯ ದಾಳಿ ನಡೆಸುವ ವ್ಯಾಪ್ತಿಯನ್ನು 450 ಕಿಲೋಮೀಟರ್‌ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿತ್ತು.

ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (ಎಂಟಿಸಿಆರ್) ನಿರ್ದಿಷ್ಟವಾಗಿ ಕನಿಷ್ಠ 500 ಕೆಜಿ ತೂಕದ ಪೇಲೋಡ್‌ಗಳನ್ನು 300 ಕಿಲೋಮೀಟರ್‌ಗಳಿಗೂ ಹೆಚ್ಚು ದೂರಕ್ಕೆ ತಲುಪಿಸುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ಮತ್ತು ಮಾನವ ರಹಿತ ವೈಮಾನಿಕ ವಾಹನಗಳ ತಂತ್ರಜ್ಞಾನ ಪ್ರಸರಣಗೊಳ್ಳದಂತೆ ತಡೆಯುವ ಗುರಿ ಹೊಂದಿದೆ. ಮುನ್ನೂರು ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿರುವ ಕ್ಷಿಪಣಿಗಳು ಸಮೂಹ ನಾಶಕ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವುದರಿಂದ, ಅವುಗಳ ಪ್ರಸರಣವನ್ನು ತಡೆಯಲು ಎಂಟಿಸಿಆರ್ ಪ್ರಯತ್ನಿಸುತ್ತದೆ.

ಪೂರ್ಣಗೊಂಡ ಫಿಲಿಪೈನ್ಸ್ ನೌಕಾಪಡೆಯ ಸಿಬ್ಬಂದಿ ತರಬೇತಿ: ಫೆಬ್ರವರಿ 2023ರಲ್ಲಿ, ಫಿಲಿಪೈನ್ಸ್ ನೌಕಾಪಡೆಯ 21 ಸದಸ್ಯರು ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ನಿರ್ವಹಣಾ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಫಿಲಿಪೈನ್ಸ್ ಮರೀನ್ ಕಾರ್ಪ್ಸ್ ನೀಡಿರುವ ಮಾಹಿತಿಯ ಪ್ರಕಾರ, ಭಾರತೀಯ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಶೋರ್ ಬೇಸ್ಡ್ ಆ್ಯಂಟಿ ಶಿಪ್ ಮಿಸೈಲ್ ಸಿಸ್ಟಮ್ (ಎಸ್‌ಬಿಎಎಸ್ಎಂಎಸ್) ತರಬೇತಿ ಪೂರ್ಣಗೊಂಡ ಬಳಿಕ ಆಯೋಜಿಸಲಾದ ಸಮಾರಂಭದಲ್ಲಿ, ಫಿಲಿಪೈನ್ಸ್ ನೌಕಾಪಡೆಯ ಸದಸ್ಯರಿಗೆ ಮಧ್ಯಂತರ ಕ್ಷಿಪಣಿ ಬ್ಯಾಜ್‌ಗಳು ಮತ್ತು ಪಿನ್‌ಗಳನ್ನು ನೀಡಿ ಪುರಸ್ಕರಿಸಿದರು. ಈ ತರಬೇತಿ 2023ರ ಜನವರಿ 23ರಿಂದ, ಫೆಬ್ರವರಿ 1ರ ತನಕ ನಡೆಯಿತು. ಇದರಲ್ಲಿ, ಫಿಲಿಪೈನ್ಸ್ ನೌಕಾಪಡೆಯ ಸಿಬ್ಬಂದಿಗಳಿಗೆ ಫಿಲಿಪೈನ್ಸ್‌ಗೆ ಒದಗಿಸಲಾದ ಎಸ್‌ಬಿಎಎಸ್ಎಂಎಸ್ ವ್ಯವಸ್ಥೆಯ ಕಾರ್ಯಾಚರಣೆ, ನಿರ್ವಹಣೆಯ ಮಹತ್ವದ ತರಬೇತಿ ನೀಡಲಾಯಿತು.

ಬ್ರಹ್ಮೋಸ್ ಕ್ಷಿಪಣಿ ವ್ಯಾಪಾರದ ಪರಿಣಾಮ: ಫಿಲಿಪೈನ್ಸ್ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಜೊತೆಗೆ ಪ್ರಾದೇಶಿಕ ಸ್ವಾಮ್ಯದ ಚಕಮಕಿಯಲ್ಲಿ ನಿರತವಾಗಿರುವುದರಿಂದ, ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಕ್ಷಿಪಣಿಗಳ ಮಾರಾಟ ನಡೆಸಿರುವುದು ಭಾರತದ ಪಾಲಿಗೆ ಮಹತ್ವದ ಸಾಧನೆಯಾಗಿದೆ. ಎರಡೂ ದೇಶಗಳಿಗೂ ಮಹತ್ವದ್ದಾಗಿರುವ ಈ ಪ್ರದೇಶದಲ್ಲಿ ಭಾರತ ಪ್ರಸ್ತುತ ಕಾರ್ಯತಂತ್ರದ ಹೆಜ್ಜೆ ಇಟ್ಟಿದೆ. ಭಾರತ ಫಿಲಿಪೈನ್ಸ್‌ಗೆ ನೀಡಿರುವ ಕ್ಷಿಪಣಿಗಳು ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (ಎಂಟಿಸಿಆರ್) ನಿಯಮಗಳ ಅನುಸಾರ, 290 ಕಿಲೋಮೀಟರ್‌ಗಳ ವ್ಯಾಪ್ತಿಯನ್ನಷ್ಟೇ ಹೊಂದಿರುವುದರಿಂದ, ಅವುಗಳು ಚೀನಾದ ಮುಖ್ಯಭೂಮಿಯ ಮೇಲೆ ದಾಳಿ ನಡೆಸಲಾರವು. ಆದರೆ, ಈ ಕ್ಷಿಪಣಿಗಳು ಚೀನಾದ ಯುದ್ಧ ನೌಕೆಗಳು ಫಿಲಿಪೈನ್ಸ್ ಕರಾವಳಿಯ ಸನಿಹಕ್ಕೆ ಬರದಂತೆ ತಡೆಯುವಲ್ಲಿ ಪ್ರಯೋಜನಕಾರಿಯಾಗಲಿವೆ.

ಫಿಲಿಪೈನ್ಸ್ - ಚೀನಾ ನಡುವೆ ಹೆಚ್ಚಿದ ಉದ್ವಿಗ್ನತೆ: ದಕ್ಷಿಣ ಚೀನಾ ಸಮುದ್ರದ ಸ್ಕಾರ್‌ಬೋರೋ ಶಾವೊಲ್ ಮತ್ತು ಸ್ಪ್ರಾಟ್ಲಿ ದ್ವೀಪಗಳ ಕುರಿತ ಭಿನ್ನಾಭಿಪ್ರಾಯಗಳ ಕಾರಣದಿಂದ, ಕಳೆದ ಎರಡು ವರ್ಷಗಳಲ್ಲಿ ಚೀನಾ ಮತ್ತು ಫಿಲಿಪೈನ್ಸ್ ನಡುವಿನ ಉದ್ವಿಗ್ನತೆ ಸಾಕಷ್ಟು ಹೆಚ್ಚಾಗಿದೆ. ಸ್ಕಾರ್‌ಬೋರೋ ಶಾವೊಲ್ ಮತ್ತು ಸ್ಪ್ರಾಟ್ಲಿ ದ್ವೀಪಗಳಿಗೆ ಕುರಿತ ವಿವಾದ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಾದೇಶಿಕ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಿದೆ. ಈ ಪ್ರದೇಶದ ಕಾರ್ಯತಂತ್ರದ ಮಹತ್ವ ಮತ್ತು ತೈಲ, ಅನಿಲ ಮತ್ತು ಮೀನುಗಾರಿಕೆಯಂತಹ ಸಂಭಾವ್ಯ ನೈಸರ್ಗಿಕ ಸಂಪನ್ಮೂಲಗಳ ಕಾರಣದಿಂದ, ಚೀನಾ ಫಿಲಿಪೈನ್ಸ್, ವಿಯೆಟ್ನಾಂ, ಮಲೇಷ್ಯಾ, ತೈವಾನ್ ಮತ್ತು ಬ್ರೂನೆಯಂತಹ ಹಲವು ರಾಷ್ಟ್ರಗಳು ಈ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಪ್ರಯತ್ನ ನಡೆಸುತ್ತಿವೆ.

ಸ್ಕಾರ್‌ಬೋರೋ ಶಾವೊಲ್: ಇದೊಂದು ದ್ವೀಪವಾಗಿರದೆ, ದಿಬ್ಬಗಳು ಮತ್ತು ಬಂಡೆಗಳ ಸರಣಿಯಾಗಿದೆ. ಇದು 150 ಚದರ ಕಿಲೋಮೀಟರ್ ವ್ಯಾಪ್ತಿಯ, ತ್ರಿಕೋನಾಕಾರದ ದ್ವೀಪದಂತಹ ರಚನೆಯಾಗಿದೆ. ಇಲ್ಲಿ ಯಾವುದೇ ಶಾಶ್ವತ ನಿವಾಸಿಗಳು ವಾಸಿಸುತ್ತಿಲ್ಲ. ಈ ಪ್ರದೇಶ ತನ್ನ ಶ್ರೀಮಂತ ಸಾಗರ ಜೀವ ವೈವಿಧ್ಯ ಮತ್ತು ಮೀನುಗಾರಿಕೆಯ ವಿಪುಲ ಅವಕಾಶಕ್ಕಾಗಿ ಹೆಸರಾಗಿದೆ. ಇಲ್ಲಿನ ಸಮುದ್ರದಾಳದಲ್ಲಿ ಸಾಕಷ್ಟು ಖನಿಜ ಸಂಪನ್ಮೂಲಗಳಿವೆ ಎಂದು ಭಾವಿಸಲಾಗಿದೆ.

ಸ್ಪ್ರಾಟ್ಲಿ ದ್ವೀಪಗಳು: ಸ್ಪ್ರಾಟ್ಲಿ ದ್ವೀಪಗಳು 100ಕ್ಕೂ ಹೆಚ್ಚು ಸಣ್ಣ ಗಾತ್ರದ ದ್ವೀಪಗಳು ಅಥವಾ ದಿಬ್ಬಗಳನ್ನು ಹೊಂದಿದ್ದು, ವಿಶಾಲವಾದ ಸಾಗರ ಪ್ರದೇಶವನ್ನು ವ್ಯಾಪಿಸಿವೆ. ಆದರೆ ಇಲ್ಲಿನ ಒಟ್ಟು ಭೂ ಪ್ರದೇಶ 5 ಚದರ ಕಿಲೋಮೀಟರ್‌ಗಳಿಗೂ ಕಡಿಮೆಯಾಗಿದೆ. ಇಲ್ಲಿನ ಪ್ರತ್ಯೇಕ ದ್ವೀಪಗಳಲ್ಲಿ ಅವುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ವಿವಿಧ ದೇಶಗಳ ಸೈನಿಕರು ನೆಲೆಸಿದ್ದು, ಒಟ್ಟು ಜನಸಂಖ್ಯೆ 200ಕ್ಕೂ ಕಡಿಮೆಯಾಗಿದೆ.

ಹಳೆಯದಾಗುತ್ತಿವೆ ಭಾರತದ ಮಿಗ್-21: ಹಾರಾಡುವ ಶವಪೆಟ್ಟಿಗೆಗಳಿಗೆ 2025ರಲ್ಲಿ ನಿವೃತ್ತಿ?

ಸಂಪನ್ಮೂಲಗಳು ಮತ್ತು ಮಹತ್ವ: ಸ್ಕಾರ್‌ಬೋರೋ ಶಾವೊಲ್ ಮತ್ತು ಸ್ಪ್ರಾಟ್ಲಿ ದ್ವೀಪಗಳು ತಮ್ಮ ಕಾರ್ಯತಂತ್ರದ ಮಹತ್ವದ ಸ್ಥಾನಗಳಿಂದಾಗಿ ಅತ್ಯಂತ ಮುಖ್ಯವಾಗಿವೆ. ಅದರೊಡನೆ, ಮೀನುಗಳು, ತೈಲ, ನೈಸರ್ಗಿಕ ಅನಿಲಗಳಂತಹ ನೈಸರ್ಗಿಕ ಸಂಪನ್ಮೂಲಗಳೂ ಇಲ್ಲಿವೆ ಎನ್ನಲಾಗಿದೆ. ಈ ಕಾರಣಗಳಿಂದಲೇ ಇವುಗಳ ಸುತ್ತಲೂ ವಿವಾದಗಳು ಏರ್ಪಟ್ಟಿವೆ. ಹಲವು ರಾಷ್ಟ್ರಗಳು ಇಲ್ಲಿನ ವಿವಿಧ ಪ್ರದೇಶಗಳು ತಮ್ಮ ಆಡಳಿತಕ್ಕೆ ಒಳಪಡುತ್ತವೆ ಎಂದು ತಮ್ಮ ಹಕ್ಕುಗಳನ್ನು ಮಂಡಿಸುತ್ತಾ, ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದುವ ಮತ್ತು ಕಾರ್ಯತಂತ್ರದ ಮೇಲುಗೈ ಸಾಧಿಸುವ ಪ್ರಯತ್ನ ನಡೆಸುತ್ತಿವೆ.

Follow Us:
Download App:
  • android
  • ios