ಸಾವರಿನ್ ಗೋಲ್ಡ್ ಬಾಂಡ್  ಯೋಜನೆಯ 2023-24ನೇ ಸಾಲಿನ ಮೊದಲ ಸರಣಿಯ ಚಂದಾದಾರಿಕೆ ಜೂ.19ರಿಂದ ಪ್ರಾರಂಭಗೊಂಡಿದ್ದು, ಜೂ.23ರ ತನಕ ಅಂದರೆ ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ಇದನ್ನು ಖರೀದಿಸೋದು ಹೇಗೆ? ಇಲ್ಲಿದೆ ಮಾಹಿತಿ. 

ನವದೆಹಲಿ (ಜೂ.20):  ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 2023-24ನೇ ಸಾಲಿನ ಮೊದಲ ಸರಣಿಯ ಚಂದಾದಾರಿಕೆ ನಿನ್ನೆಯಿಂದ (ಜೂ.19) ಪ್ರಾರಂಭಗೊಂಡಿದ್ದು, ಶುಕ್ರವಾರದ (ಜೂ.23) ತನಕ ಅಂದರೆ ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ಸಾವರಿನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5,926ರೂ. ನಿಗದಿಪಡಿಸಲಾಗಿದೆ. ಇನ್ನು ಆನ್ ಲೈನ್ ನಲ್ಲಿ ಖರೀದಿಸಿದ್ರೆ 50ರೂ. ಡಿಸ್ಕೌಂಟ್ ಕೂಡ ಸಿಗಲಿದೆ. ಅಂದರೆ ನೀವು 10ಗ್ರಾಂ ಚಿನ್ನ ಖರೀದಿಸಿದರೆ 500ರೂ. ಡಿಸ್ಕೌಂಟ್ ಸಿಗಲಿದೆ. ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 2022-23ನೇ ಸಾಲಿನ ನಾಲ್ಕನೇ ಸರಣಿಯ ಚಂದಾದಾರಿಕೆ ಮಾರ್ಚ್ 6ರಿಂದ ಮಾರ್ಚ್ 10ರ ತನಕ ನಡೆದಿತ್ತು. ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬ ವಾರ್ಷಿಕ ಗರಿಷ್ಠ 4ಕೆ.ಜಿ.ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಟ್ರಸ್ಟ್ ಹಾಗೂ ಅದೇ ಮಾದರಿಯ ಇತರ ಸಂಸ್ಥೆಗಳು ಗರಿಷ್ಠ 20ಕೆ.ಜಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 1ಗ್ರಾಂ ಚಿನ್ನವಾದ್ರೂ ಖರೀದಿಸಬೇಕು. ಅದಕ್ಕೆ ಕಡಿಮೆ ಚಿನ್ನ ಖರೀದಿಸಲು ಅವಕಾಶವಿಲ್ಲ. ಸಾವರಿನ ಗೋಲ್ಡ್ ಬಾಂಡ್ ಖರೀದಿ ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾಗಿದೆ. ಈ ಬಾಂಡ್ ಗಳನ್ನು ಕೇಂದ್ರ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವಿತರಿಸುತ್ತದೆ.

ಯಾರು ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು?
ಭಾರತದಲ್ಲಿ ವಾಸಿಸುವ ವ್ಯಕ್ತಿಗಳು, ಅವಿಭಜಿತ ಹಿಂದೂ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳು ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಖರೀದಿಸಬಹುದು ಎಂದು ಆರ್ ಬಿಐ ತಿಳಿಸಿದೆ.

ನೀವು ಈ ಸ್ಟಾಕ್‌ನಲ್ಲಿ 10 ವರ್ಷದ ಹಿಂದೆ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 10 ಲಕ್ಷ ರೂ. ಇರ್ತಿತ್ತು!

ಬಡ್ಡಿ ಎಷ್ಟಿದೆ? 
ಸಾವರಿನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆದಾರರು ವಾರ್ಷಿಕ ಶೇ.2.5 ರಷ್ಟು ಬಡ್ಡಿ (Interest) ಗಳಿಸಲಿದ್ದಾರೆ. 6 ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಕ್ಯಾಪಿಟಲ್ ಗೇನ್ಸ್ (Capital gains) ತೆರಿಗೆ ವಿನಾಯಿತಿಯೂ ಲಭ್ಯವಿದೆ. ಈ ಯೋಜನೆಯಡಿ ಚಿನ್ನವನ್ನು ಖರೀದಿಸಲು ಯಾವುದೇ ಜಿಎಸ್‌ಟಿ (GST) ಮತ್ತು ಮೇಕಿಂಗ್ ಶುಲ್ಕಗಳನ್ನು (Making Charges) ವಿಧಿಸಲಾಗೋದಿಲ್ಲ.

ಎಲ್ಲಿ ಸಿಗುತ್ತೆ?
ಆರ್ ಬಿಐ ನೀಡಿರುವ ಮಾಹಿತಿ ಪ್ರಕಾರ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕ್ ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (SHCIL), ಕ್ಲಿಯರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCIL),ಅಂಚೆ ಕಚೇರಿಗಳು ಹಾಗೂ ಸ್ಟಾಕ್ ಎಕ್ಸ್ ಚೇಂಜ್ ಗಳು, ಎನ್ ಎಸ್ ಇ ಹಾಗೂ ಬಿಎಸ್ ಇ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಮಾರಾಟ ಮಾಡಲಾಗುತ್ತಿದೆ. 

10 ವರ್ಷದ ಹಿಂದೆ ಟಾಟಾ ಸಮೂಹದ ಈ ಷೇರಿನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ಇರುತ್ತಿತ್ತು!

ನೀವು ಈ 8 ಕಾರಣಗಳಿಗಾಗಿ ಎಸ್ ಜಿಬಿ ಖರೀದಿಸಬೇಕು
1.ದೀರ್ಘಾವಧಿ ಹೂಡಿಕೆಗಳಲ್ಲಿ ಇದು ಉತ್ತಮ. 8 ವರ್ಷಗಳ ಕಾಲ ಇದನ್ನು ಹೊಂದಿದ್ದರೆ ಉತ್ತಮ ಬಡ್ಡಿ ಗಳಿಸಬಹುದು.
2. ಚಿನ್ನದ ಮೇಲಿನ ಹೂಡಿಕೆಯಂತೆ ಇದರಲ್ಲಿ ಪರಿಶುದ್ಧತೆಯ ಅಪಾಯ ಇಲ್ಲ.
3.ಇದರಲ್ಲಿ ಹೂಡಿಕೆ ಮಾಡಿದ ಹಣ ಕಳೆದುಕೊಳ್ಳುವ ಭಯವಿಲ್ಲ.
4.ಎಂಟು ವರ್ಷಗಳ ಕಾಲ ಈ ಬಾಂಡ್ ಇಟ್ಟುಕೊಂಡರೆ ಗಳಿಕೆ ಮೇಲೆ ಯಾವುದೇ ತೆರಿಗೆ ಇಲ್ಲ.
5.ಭೌತಿಕ ಚಿನ್ನಕ್ಕಿಂತ ಎಸ್ ಜಿಬಿಗಳು ಅಧಿಕ ಲಿಕ್ವಿಡಿಟಿ ಹೊಂದಿವೆ. ಅಂದರೆ ಇವುಗಳ ಮಾರಾಟ ಸುಲಭ.
6.ಹೂಡಿಕೆದಾರರಿಗೆ ಹೂಡಿಕೆ ಮೇಲೆ ಶೇ.2.5ರಷ್ಟು ಬಡ್ಡಿ ಸಿಗುತ್ತದೆ.
7.ಸಾವರಿನ್ ಗೋಲ್ಡ್ ಬಾಂಡ್ ಆಧಾರವಾಗಿರಿಸಿ ಸಾಲ ಪಡೆಯಬಹುದು.
8.ರಿಟೇಲ್ ಹೂಡಿಕೆದಾರರು ಆನ್ ಲೈನ್ ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಿದ್ರೆ ಡಿಸ್ಕೌಂಟ್ ಕೂಡ ಸಿಗಲಿದೆ.