ನವದೆಹಲಿ[ಜು.04]: ಹೆದ್ದಾರಿ ಟೋಲ್‌ ಕೇಂದ್ರಗಳಲ್ಲಿ ನಗದು ರೂಪದಲ್ಲಿ ಸುಂಕ ಪಾವತಿಸುತ್ತಿದ್ದೀರಾ? ಹಾಗಿದ್ದರೆ ಮುಂಬರುವ ದಿನಗಳಲ್ಲಿ ನೀವು ಪಾವತಿಸುವ ಹಣದ ಮೇಲೆ ಹೆಚ್ಚುವರಿಯಾಗಿ ಶೇ.10ರಿಂದ ಶೇ.20ರಷ್ಟುಹಣವನ್ನು ಹೆಚ್ಚಾಗಿ ಕೊಡಬೇಕಾಗಿ ಬರಬಹುದು!

ಹೆದ್ದಾರಿ ಟೋಲ್‌ ಪ್ಲಾಜಾಗಳಲ್ಲಿ ಉದ್ದದ್ದು ಕ್ಯೂ ಕಂಡುಬರುತ್ತಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರ, ಜನರು ಫಾಸ್ಟ್‌ಟ್ಯಾಗ್‌ನತ್ತ ಹೊರಳುವಂತೆ ಮಾಡಲು ಚಿಂತನೆ ನಡೆಸಿದೆ. ಇದಕ್ಕಾಗಿ ಟೋಲ್‌ ಕೇಂದ್ರಗಳಲ್ಲಿ ನಗದು ರೂಪದಲ್ಲಿ ಸುಂಕ ಪಾವತಿಸುವವರ ಮೇಲೆ ಶೇ.10ರಿಂದ ಶೇ.20ರಷ್ಟುಹೊರೆ ಹೇರಲು ಹೊರಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂಪಿಸುತ್ತಿರುವ ನೂತನ ಟೋಲ್‌ ನೀತಿಯಲ್ಲಿ ಈ ಅಂಶ ಸ್ಥಾನ ಪಡೆಯುವ ಸಾಧ್ಯತೆ ಇದೆ.

2014ರಿಂದ ಫಾಸ್ಟ್‌ಟ್ಯಾಗ್‌ ಸೌಲಭ್ಯ ವಾಹನಗಳಿಗೆ ಇದೆ. ಕಾರಿನ ಮುಂಬದಿ ಗಾಜಿನ ಮೇಲೆ ಸ್ಟಿಕ್ಕರ್‌ ರೀತಿ ಫಾಸ್ಟ್‌ಟ್ಯಾಗ್‌ ಇರುತ್ತದೆ. ಅದಕ್ಕೆ ಮುಂಚಿತವಾಗಿಯೇ ಹಣ ರೀಚಾಜ್‌ರ್‍ ಮಾಡಿಸಿಕೊಳ್ಳಬಹುದು ಅಥವಾ ಅಕೌಂಟ್‌ ಜತೆ ಲಿಂಕ್‌ ಮಾಡಿಕೊಳ್ಳಲೂಬಹುದು. ಫಾಸ್ಟ್‌ಟ್ಯಾಗ್‌ ಇರುವ ವಾಹನ ಟೋಲ್‌ ಕೇಂದ್ರ ದಾಟುತ್ತಿದ್ದಂತೆ ತನ್ನಿಂತಾನೆ ಸುಂಕ ಕಡಿತಗೊಳ್ಳುತ್ತದೆ. ಇದರಿಂದಾಗಿ ಟೋಲ್‌ ಕೇಂದ್ರಗಳಲ್ಲಿ ವಾಹನ ನಿಲ್ಲುವುದಿಲ್ಲ.

ಈ ಸೌಲಭ್ಯ ಬಳಸುವವರಿಗೆ ಒಂದಿಷ್ಟು ರಿಯಾಯಿತಿಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗದು ರೂಪದಲ್ಲಿ ಟೋಲ್‌ ಪಾವತಿಸುವಾಗ ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ. ಇದರಿಂದ ವಾಹನಗಳ ಸಾಲು ಕಂಡುಬರುತ್ತದೆ.