Watch: ಮೂರು ಕಂಪನಿಗಳ 11 ಕೋಟಿ ಮೌಲ್ಯದ ಷೇರು ಹೊಂದಿದ್ದರೂ, ಸರಳವಾಗಿ ಬದುಕುವ ಕರ್ನಾಟಕದ ಹಿರಿಯ ಜೀವ!
ಸೋಶಿಯಲ್ ಮೀಡಿಯಾದಲ್ಲಿ ಕರ್ನಾಟಕ ಮೂಲದ ಹಿರಿಯ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದ್ದು, ಷೇರು ಮಾರುಕಟ್ಟೆಯ ಕುರಿತಾಗಿ ಉತ್ಸಾಹ ಇದ್ದವರಿಗೆ ಖಂಡಿತವಾಗಿ ಇದು ಸ್ಫೂರ್ತಿಯಾಗಬಲ್ಲುದು.
ಬೆಂಗಳೂರು (ಸೆ.26): ಒಂದು ಉತ್ತಮ ಕಂಪನಿಯಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ ಯಾವುದೇ ಆತಂಕಗಳನ್ನೂ ಮಾಡಿಕೊಳ್ಳದೆ ಬದುಕಿದರೆ ಎಷ್ಟು ಲಾಭವಾಗಬಲ್ಲುದು ಎನ್ನುವುದು ಸ್ಪಷ್ಟ ಉದಾಹರಣೆ ಇಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕರ್ನಾಟಕ ಮೂಲದ ವೃದ್ಧರೊಬ್ಬರು ತಮ್ಮಲ್ಲಿರುವ ಷೇರು ಮೌಲ್ಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದು ಕಾಣಿಸಿದೆ. ಅವರಿಗೆ ಈಗ ತಾವು ಹೂಡಿಕೆ ಮಾಡಿರುವ ಕಂಪನಿಯ ಷೇರುಗಳ ಮೌಲ್ಯ ಎಷ್ಟಿದೆ ಎನ್ನುವುದು ಗೊತ್ತಿಲ್ಲ. ಆದರೆ, ಯಾವ ಕಂಪನಿಗಳಲ್ಲಿ ಎಷ್ಟು ಷೇರು ಹೊಂದಿದ್ದೇನೆ ಎನ್ನುವುದನ್ನು ಹೆಮ್ಮೆಯಿಂದ ಹೇಳಿದ್ದಾರೆ. ಈಗಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಅವರು ಹೂಡಿರುವ ಮೂರು ಕಂಪನಿಗಳ ಷೇರುಗಳ ಮೌಲ್ಯ ಸರಿಯಾಗಿ 11.30 ಕೋಟಿ ರೂಪಾಯಿಗಳು. ಕೋಟಿವೀರರಾಗಿದ್ದರೂ, ಹಿರಿಯ ಜೀವ ಹಂಚಿನ ಮನೆಯಲ್ಲಿ ಸರಳವಾಗಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಇದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋವನ್ನು ರಾಜೀವ್ ಮೆಹ್ತಾ ಎನ್ನುವವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು ಇದು ವೈರಲ್ ಆಗಿದೆ.
“ಅವರು ಹೇಳಿದಂತೆ, ಹೂಡಿಕೆ ಮಾಡುವಾಗ, ನೀವು ಒಮ್ಮೆ ಅದೃಷ್ಟಶಾಲಿಯಾಗಬೇಕು, ಅವರು ಎಲ್ & ಟಿಯ 80 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ ಮತ್ತು 21 ಕೋಟಿ ರೂಪಾಯಿ ಮೌಲ್ಯದ ಅಲ್ಟರ್‌ಟೆಕ್ ಸಿಮೆಂಟ್ ಷೇರುಗಳು, 1 ಕೋಟಿ ರೂಪಾಯಿ ಮೌಲ್ಯದ ಕರ್ಣಾಟಕ ಬ್ಯಾಂಕ್ ಷೇರುಗಳನ್ನು ಹೊಂದಿದ್ದಾರೆ. ಇಷ್ಟೆಲ್ಲ ಇದ್ದರೂ ಇನ್ನೂ ಸರಳ ಜೀವನ ನಡೆಸುತ್ತಿದ್ದಾರೆ' ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಟ್ವಿಟರ್‌ನಲ್ಲಿ ಇದುವರೆಗೆ ಸುಮಾರು 4 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.
ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಕ್ಯಾಪಿಟಲ್ ಮೈಂಡ್‌ನ ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ, '27,000 ಎಲ್ & ಟಿ ಷೇರುಗಳ ಒಟ್ಟು ಮೌಲ್ಯ ಸುಮಾರು 8 ಕೋಟಿ ರೂ. ಆಗಿದ್ದರೆ, ಅಲ್ಟ್ರಾಟೆಕ್ ಷೇರುಗಳು ಸುಮಾರು 3.2 ಕೋಟಿ ರೂ. ಮತ್ತು ಕರ್ಣಾಟಕ ಬ್ಯಾಂಕ್ ಷೇರುಗಳ ಮೌಲ್ಯಸುಮಾರು 10 ಲಕ್ಷ ರೂಪಾಯಿ ಆಗಿದೆ. ಹಾಗಿದ್ದರೂ ಇದು ಉತ್ತಮವಾದ ಮೊತ್ತವಾಗಿದೆ. ಅವರಿಗೆ ಹೆಚ್ಚಿನ ಶಕ್ತಿ ಸಿಗಲಿ" ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಬರೆದುಕೊಂಡಿದ್ದು, ತಮ್ಮಲ್ಲಿರುವ ಈ ಷೇರುಗಳಿಂದ ಅವರು ಕನಿಷ್ಠ ವರ್ಷಕ್ಕೆ 6 ಲಕ್ಷ ರೂಪಾಯಿ ಡಿವೆಡೆಂಡ್ ಸಂಪಾದಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇನ್ನೊಬ್ಬ ವ್ಯಕ್ತಿ ಭಿನ್ನವಾಗಿ ಕಾಮೆಂಟ್ ಮಾಡಿದ್ದು, ಹಣವನ್ನು ಸರಿಯಾಗಿ ಬಳಕೆ ಮಾಡದೇ ಇದ್ದರೆ ಅದು ನಿಷ್ಪಯೋಜಕ ಎಂದು ಹೇಳಿದರು. ಇದರಿಂದ ಏನು ಪ್ರಯೋಜನ. ಹಣ ಎನ್ನುವುದು ಇಂಧನದಂತೆ. ನಿಮ್ಮ ಟ್ಯಾಂಕ್‌ನಲ್ಲಿ ಅದು ಫುಲ್ ಇರಬಹುದು. ಆದರೆ, ಬಳಸಿದಾಗ ಮಾತ್ರವೇ ಅದರ ಲಾಭವಾಗುತ್ತದೆ.ಸರಳತೆ ಒಂದು ವಿಷಯ ಆದರೆ ನಿಮ್ಮ ಮೇಲೆ ಖರ್ಚು ಮಾಡಲು ಸಾಧ್ಯವಾಗದಿರುವುದು ಮತ್ತೊಂದು ಎಂದು ಬರೆದಿದ್ದಾರೆ.
ಸರಿಯಾದ ಸಮಯದಲ್ಲಿ ಲಾಭ ಪಡೆದುಕೊಳ್ಳುವುದನ್ನು ಕಲಿಯಬೇಕು ಎಂದು ವಿಕೆಜೆ ಇನ್ವೆಸ್ಟ್‌ಮೆಂಟ್‌ನ ಸಿಇಒ ವಿನೋದ್ ಝವೇರಿ ಹೇಳಿದ್ದಾರೆ. "ಸಿಂಧಿಯಾ ಶಿಪ್ಪಿಂಗ್, ಯುನಿಟೆಕ್ ಮತ್ತು ಇನ್ನೂ ಅನೇಕ ಷೇರುಗಳು ಈಗ ಜಂಕ್ ಆಗಿ ಮಾರ್ಪಟ್ಟಿದೆ. ಅದರಲ್ಲಿ ಹೂಡಿಕೆ ಮಾಡಿರುವ ಯಾರೂ ಈಗ ಕಾಣುತ್ತಿಲ್ಲ. ಇವರು ಹೇಳಿರುವ ಮಾತಿನ ಅರ್ಥವೇನೆಂದರೆ, ಸರಿಯಾದ ಸಮಯದಲ್ಲಿ ಲಾಭಗಳನ್ನು ಬುಕ್ ಮಾಡಿಕೊಳ್ಳಬೇಕು ಎನ್ನುವುದಾಗಿದೆ.
ಟಾಟಾ ಗ್ರೂಪ್ ಬ್ರ್ಯಾಂಡಿಂಗ್ ಬಳಸಲು ಭಾರತದ ಅತಿದೊಡ್ಡ ಐಟಿ ಕಂಪನಿ ನೀಡೋ ಹಣ ಎಷ್ಟು ನೋಡಿ..
ಮತ್ತೊಬ್ಬ ಟ್ವಿಟರ್ ಬಳಕೆದಾರರು, ಷೇರು ಮಾರುಕಟ್ಟೆ ಇಳಿಯುವ ಭಯದಲ್ಲಿ ತನ್ನ ಷೇರುಗಳನ್ನು ಮಾರಾಟ ಮಾಡದೆ ಉಳಿಸಿಕೊಂಡಿದ್ದಕ್ಕಾಗಿ ಹಿರಿಯ ಜೀವವನ್ನು ಶ್ಲಾಘಿಸಿದರು. "ಅದನ್ನು ಸರಳತೆಯ ಶಕ್ತಿ ಎಂದು ಕರೆಯಲಾಗುತ್ತದೆ, ಅವಧಿಯಲ್ಲಿ ಸಂಯೋಜನೆಯ ಶಕ್ತಿ ಮತ್ತು ಪ್ಯಾನಿಕ್ ಮಾರಾಟದಿಂದ ದೂರವಿರುವುದು. ಹೂಡಿಕೆಯು ಇತರ ಅಂಶಗಳ ಮೇಲೆ ಸಂಪತ್ತಿನ ಸೃಷ್ಟಿಯ ಮಾದರಿ ಬದಲಾವಣೆಯನ್ನು ಬದಲಾಯಿಸಬಹುದು' ಎಂದು ಬರೆದಿದ್ದಾರೆ.
ಬಿಲಿಯನೇರ್ ಆಗಿದ್ರೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ರತನ್ ಟಾಟಾ ಹೆಸರಿಲ್ಲ, ಯಾಕೆ?