ನವದೆಹಲಿ[ಆ.17]: ಆರ್ಥಿಕ ಹಿಂಜರಿತ ಹಾಗೂ ಆಟೋಮೊಬೈಲ್‌ ಕ್ಷೇತ್ರದ ಕುಸಿತದಿಂದಾಗಿ ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯಲ್ಲಿ 3,000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕ ಹಿಂಜರಿತದ ಕಾರಣದಿಂದಾಗಿ ತಾತ್ಕಾಲಿಕ ಉದ್ಯೋಗಿಗಳ ಗುತ್ತಿಗೆ ಅವರಿ ಪರಿಷ್ಕರಿಸಿಲ್ಲ. ಆದರೆ, ಇದರಿಂದ ಕಾಯಂ ಉದ್ಯೋಗಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮುಖ್ಯಸ್ಥ ಆರ್‌.ಸಿ. ಭಾರ್ಗವ ತಿಳಿಸಿದ್ದಾರೆ.

ಇದೇ ವೇಳೆ ವಾಹನ ಬಿಡಿ ಭಾಗಗಳ ತಯಾರಿಕಾ ಕಂಪನಿ ಲುಕಾಸ್‌ ಟಿ.ವಿ.ಎಸ್‌. ತನ್ನ ಉದ್ಯೋಗಿಗಳಿಗೆ ಉದ್ಯೋಗ ರಹಿತ ದಿನಗಳನ್ನು ಘೋಷಿಸಿದೆ. ಕೈಗಾರಿಕೆಯಲ್ಲಿ ಹಿಂಜರಿತ ಉಂಟಾಗಿರುವ ಕಾರಣದಿಂದಾಗಿ ಕೆಲಸದ ದಿನಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಆ.16 ಮತ್ತು 17 ಉದ್ಯೋಗಿಗಳಿಗೆ ಕೆಲಸ ರಹಿತ ದಿನಗಳಾಗಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಇನ್ನೊಂದೆಡೆ ಟಿವಿಎಸ್‌ ಗ್ರೂಪ್‌ನ ಬಿಡಿ ಭಾಗ ತಯಾರಿಕಾ ಕಂಪನಿ ಸುಂದರಂ-ಕ್ಲೆಟನ್‌ ತಮಿಳುನಾಡಿನ ಪಾಡಿ ಫ್ಯಾಕ್ಟರಿಯನ್ನು 2 ದಿನ ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ. ಅದೇ ರೀತಿ ದ್ವಿಚಕ್ರ ವಾಹನ ಜೋಡಣೆ ಕಂಪನಿ ಹೀರೋ ಮೋಟರ್ಸ್ ಕಾರ್ಪ್ಸ್‌ 4 ದಿನಗಳ ಕಾಲ ತನ್ನ ಘಟಕಗಳನ್ನು ಸ್ಥಗಿತ ಮಾಡುವುದಾಗಿ ತಿಳಿಸಿದೆ.