ನವದೆಹಲಿ(ಅ.13): ಕೋವಿಡ್‌-19 ವ್ಯಾಧಿಯಿಂದ ಸುದೀರ್ಘಾವಧಿಗೆ ಶಾಲೆಗಳು ಬಂದ್‌ ಆಗಿರುವ ಕಾರಣ ಭವಿಷ್ಯದಲ್ಲಿ ಭಾರತಕ್ಕೆ ಅಂದಾಜು 3 ಲಕ್ಷ ಕೋಟಿ ರು.( 400 ಶತಕೋಟಿ ಡಾಲರ್‌) ಆದಾಯ ನಷ್ಟಉಂಟಾಗುವ ಸಾಧ್ಯತೆಯಿದೆ. ಹಾಗೆಯೇ ಶೈಕ್ಷಣಿಕ ಹಿನ್ನಡೆ ಆಗುವ ಆತಂಕವೂ ಇದೆ ಎಂದು ವಿಶ್ವಬ್ಯಾಂಕ್‌ ವರದಿಯೊಂದು ಕಳವಳ ವ್ಯಕ್ತಪಡಿಸಿದೆ.

ಪ್ರಸಕ್ತ ಸೂಕ್ತ ಶಿಕ್ಷಣದಿಂದ ವಂಚಿತರಾದ ಮಕ್ಕಳು ಮುಂದೆ ಉದ್ಯೋಗಕ್ಕೆ ಸೇರಿದಾಗ ಅವರಿಗೆ, ಶಿಕ್ಷಣ ವಂಚಿತ ಸಮಯದ ಕೊರತೆ ಕಾಡಲಿದೆ. ಇದು ಅವರ ಆದಾಯದ ಮೇಲೂ ಪ್ರಭಾವ ಬೀರಲಿದೆ. ಅದರಂತೆ ಪ್ರತಿಯೊಬ್ಬ ಭಾರತೀಯ ವಿದ್ಯಾರ್ಥಿ ತನ್ನ ಉದ್ಯೋಗದ ಜೀವನದಲ್ಲಿ ಸರಾಸರಿ 3 ಲಕ್ಷ ರು. ನಷ್ಟಅನುಭವಿಸಲಿದ್ದಾರೆ. ಈ ಲೆಕ್ಕಾಚಾರದಲ್ಲಿ ಭಾರತ ಭವಿಷ್ಯದಲ್ಲಿ 3 ಲಕ್ಷ ಕೋಟಿ ರು. ಆದಾಯ ನಷ್ಟಅನುಭವಿಸಲಿದೆ ಎಂದು ವರದಿ ಹೇಳಿದೆ.

ಇದೇ ವೇಳೆ ಶಾಲೆಗಳು ಇನ್ನೂ ತೆರೆಯದಿರುವುದರಿಂದ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದಾಗ ದಕ್ಷಿನ ಏಷ್ಯಾ ವಲಯಕ್ಕೆ 4.66 ಲಕ್ಷ ಕೋಟಿ ರು. ಹಾನಿ ಉಂಟು ಮಾಡಲಿದೆ. ಪರಿಸ್ಥಿತಿ ಇನ್ನೂ ಹದಗೆಟ್ಟರೆ ಹಾನಿಯ ಪ್ರಮಾಣ 6.60 ಲಕ್ಷ ಕೋಟಿ ರು.ಗೆ ಹೆಚ್ಚಬಹುದು. ಇದರಲ್ಲಿ ಭಾರತದ ಪಾಲು ಅಧಿಕವಾಗಿರಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ. ಜೊತೆಗೆ ಕೊರೋನಾ ಕಾರಣ ದಕ್ಷಿಣ ಏಷ್ಯಾ 2020ರಲ್ಲಿ ಭಾರೀ ಆರ್ಥಿಕ ಕುಸಿತ ಕಾಣಬಹುದು ಎಂದೂ ವರದಿಯಲ್ಲಿ ತಿಳಿಸಲಾಗಿದೆ.

‘ಬೀಟನ್‌ ಆರ್‌ ಬ್ರೋಕನ್‌? ಇನ್‌ಫಾರ್ಮಾಲಿಟಿ ಆ್ಯಂಡ್‌ ಕೋವಿಡ್‌-19 ಇನ್‌ ಸೌತ್‌ ಏಷ್ಯಾ’ ಎಂಬ ವರದಿಯನ್ನು ವಿಶ್ವಬ್ಯಾಂಕ್‌ ಸಿದ್ಧಪಡಿಸಿದೆ. ಅದರಲ್ಲಿ ಈ ಎಲ್ಲಾ ಮಾಹಿತಿಗಳಿವೆ.

39 ಕೋಟಿ ಮಕ್ಕಳು ಹೊರಕ್ಕೆ:

ಶಾಲೆಗಳು ಆರಂಭವಾಗದ ಕಾರಣ ದಕ್ಷಿಣ ಏಷ್ಯಾ ವಲಯದಲ್ಲಿ 39.1 ಕೋಟಿ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಲಿಕೆಯಿಂದ ದೂರವಾಗಿದ್ದಾರೆ. ಇದು ಅವರ ಕಲಿಕೆ ಮೇಲೆ ತುಂಬಾ ಪರಿಣಾಮ ಬೀರಿದೆ. ಇದು ದೀರ್ಘಾವಧಿ ದುಷ್ಪರಿಣಾಮಕ್ಕೂ ಕಾರಣವಾಗಬಲ್ಲದು. ಕೊರೋನಾ ಬಿಕ್ಕಟ್ಟಿನಿಂದ 55 ಲಕ್ಷ ವಿದ್ಯಾರ್ಥಿಗಳು ಶಾಲೆ ಬಿಡಬಹುದು. ಇದು ಜೀವನಪೂರ್ತಿ ಈ ಪೀಳಿಗೆಯ ವಿದ್ಯಾರ್ಥಿಗಳ ಉತ್ಪಾದಕತೆ (ಗಳಿಕೆ) ಮೇಲೆ ಪರಿಣಾಮ ಬೀರಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.

ಹಳೆಯ ವಿಷಯಗಳೂ ಮರೆವು:

ಕಳೆದ 5 ತಿಂಗಳಿಂದ ಶಾಲೆಗಳು ಬಂದ್‌ ಆಗಿವೆ. ಹೀಗಾಗಿ ಮಕ್ಕಳು ಹೊಸ ವಿಷಯಗಳನ್ನು ಕಲಿಯುವುದು ಆಚೆ ಇರಲಿ. ಈಗಾಗಲೇ ಕಲಿತ ಹಳೆಯ ವಿಷಯಗಳನ್ನೂ ಮರೆತುಬಿಟ್ಟಿವೆ ಎಂದು ವಿಶ್ವಬ್ಯಾಂಕ್‌ ಕಳವಳ ವ್ಯಕ್ತಪಡಿಸಿದೆ.

ಶಾಲೆಗಳ ಆರಂಭಕ್ಕೆ ಅ.15ರಿಂದ ಮೋದಿ ಸರ್ಕಾರ ಅನುಮತಿ ನೀಡಿದೆಯಾದರೂ ಕೊರೋನಾ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಆರಂಭಕ್ಕೆ ರಾಜ್ಯ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಪೋಷಕರಿಗೂ ಮಕ್ಕಳನ್ನು ಕಳಿಸಲು ಮನಸ್ಸಿಲ್ಲ.