ನಾರಾಯಣ ಹೆಗಡೆ

ಹಾವೇರಿ(ಮಾ.06): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಮಂಡಿಸಿದ ಬಜೆಟ್‌ ಜಿಲ್ಲೆಯ ಮಟ್ಟಿಗೆ ಅಲ್ಪ ಕೊಡುಗೆ ನೀಡಿ ಬಾಕಿ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಮೆಗಾ ಡೈರಿ, ಪ್ರತ್ಯೇಕ ಡಿಸಿಸಿ ಬ್ಯಾಂಕ್‌, ನೀರಾವರಿ ಯೋಜನೆಗಳ ಪ್ರಸ್ತಾಪವೇ ಇಲ್ಲದೇ ನಿರಾಸೆ ಮೂಡಿಸಿದೆ.

ಆದರೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾಂವಿಗೆ ಬಂಪರ್‌ ಕೊಡುಗೆ ಸಿಕ್ಕಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ ಸೇರಿ ಜಿಲ್ಲೆಯ ಇಬ್ಬರು ಮಂತ್ರಿಗಳಿದ್ದರೂ ವಿಶೇಷ ಅನುದಾನ ಸಿಗದಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಬರಗಾಲ ತಡೆಗೆ ಪ್ರಸಕ್ತ ಬಜೆಟ್‌ನಲ್ಲಿ ಹೆಚ್ಚಿನ ನೆರವು ಸಿಗಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು. ನೀರಾವರಿ, ಆರೋಗ್ಯ, ಕೃಷಿ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳು ಜಿಲ್ಲೆಗೆ ಒದಗಿಬರಬಹುದು ಎಂಬ ಆಶಾಭಾವನೆ ಹೊಂದಲಾಗಿತ್ತು. ಪ್ರಮುಖವಾಗಿ ಹೈನುಗಾರಿಕೆ ಅಭಿವೃದ್ಧಿಗೆ ವಿಶೇಷ ಅನುದಾನ ಸಿಗುವ ನಿರೀಕ್ಷೆಯಿತ್ತು. ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಪೂರಕವಾಗಿ ಮೆಗಾ ಡೈರಿ ಸ್ಥಾಪನೆಗೆ ಅನುದಾನ, ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ರಚನೆ ಸಂಬಂಧ ಘೋಷಣೆ ಹೊರಬೀಳಬಹುದು ಎನ್ನಲಾಗಿತ್ತು. ಆದರೆ, ಇದಾವುದೂ ಸಿಗದಿರುವುದಕ್ಕೆ ನಿರಾಸೆ ಮೂಡಿದೆ.

ಸಿಕ್ಕಿದ್ದೇನು?

ಜಿಲ್ಲೆಯಲ್ಲಿ 20 ಹಾಸಿಗೆಗಳ ಆಯುಷ್‌ ಸಂಯುಕ್ತ ಆಸ್ಪತ್ರೆಯನ್ನು 20 ಕೋಟಿ ವೆಚ್ಚದಲ್ಲಿ ಪ್ರಾರಂಭಿಸುವ ಘೋಷಣೆಯಾಗಿದ್ದು, ಇದಕ್ಕೆ ಪ್ರಸಕ್ತ ಬಜೆಟ್‌ನಲ್ಲಿ  5 ಕೋಟಿ ಅನುದಾನ ಘೋಷಿಸಲಾಗಿದೆ. ಶಿಗ್ಗಾಂವಿಯಲ್ಲಿ ನೂತನ ಜವಳಿ ಪಾರ್ಕ್ ಪ್ರಾರಂಭಿಸುವುದಾಗಿ ಘೋಷಿಸಿದ್ದು ಇದರಿಂದ 3 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂತ ಶಿಶುನಾಳ ಶರೀಫರ ಸಮಾಧಿಯಿರುವ ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 5 ಕೋಟಿ ಅನುದಾನ ಘೋಷಿಸಲಾಗಿದೆ. ಕವಿ ಸರ್ವಜ್ಞ ತಮ್ಮ ಸರಳ ತ್ರಿಪದಿಗಳ ಮೂಲಕ ಬಿಂಬಿಸಿದ ಬದುಕಿನ ತತ್ವಗಳು, ವಾಸ್ತವಗಳು, ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿದೆ. ಹಿರೇಕೆರೂರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದಷ್ಟೇ ಪ್ರಸ್ತಾಪಿಸಲಾಗಿದೆ. ಆದರೆ, ಇದಕ್ಕೆ ಎಷ್ಟು ಅನುದಾನ ಎಂಬುದನ್ನು ತಿಳಿಸಿಲ್ಲ.

ಸಿಗದಿದ್ದೇನು?

ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಾಲಿನಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಯಿಂದ ಪೂರೈಕೆಯಾಗುತ್ತಿದೆ. ಅದಕ್ಕಾಗಿ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಾಧ್ಯತಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇಲ್ಲಿ ಸಂಗ್ರಹವಾಗುವ ಹಾಲಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಒದಗಿಸುವುದು, ಹಾಲು ಶೀತಲೀಕರಣ ಘಟಕ, ಹಾಲಿನ ಉಪಉತ್ಪನ್ನ ತಯಾರಿಕೆಗೆ ಅಗತ್ಯ ಮೂಲಸೌಲಭ್ಯ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಮೆಗಾ ಡೈರಿ ಸ್ಥಾಪನೆಯಾಗಬೇಕಿದೆ. ಕೆಲ ದಿನಗಳ ಹಿಂದಷ್ಟೇ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಮೆಗಾ ಡೈರಿ ಸ್ಥಾಪನೆಯ ಭರವಸೆ ನೀಡಿದ್ದರು. ಬಜೆಟ್‌ನಲ್ಲಿ ಇದಕ್ಕೆ ಅನುದಾನ ಘೋಷಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಅದೇ ರೀತಿ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆ ಜಿಲ್ಲೆಯ ಜನರ ಮತ್ತೊಂದು ಪ್ರಮುಖ ಬೇಡಿಕೆಯಾಗಿತ್ತು. ಈ ಬಗ್ಗೆಯೂ ಆಯವ್ಯಯದಲ್ಲಿ ಪ್ರಸ್ತಾಪವಾಗಿಲ್ಲ. ಮೆಣಸಿನಕಾಯಿ ಸಂಸ್ಕರಣ ಘಟಕ, ಬ್ಯಾಡಗಿ ಎಪಿಎಂಸಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಬೇಡಿಕೆಯೂ ಈಡೇರಿಲ್ಲ. ನೂತನ ರಟ್ಟಿಹಳ್ಳಿ ತಾಲೂಕು ಅಭಿವೃದ್ಧಿಗೆ, ಪ್ರವಾಸಿ ತಾಣಗಳ ಅಭಿವೃದ್ಧಿಗೂ ವಿಶೇಷ ಕೊಡುಗೆ ನೀಡದಿರುವುದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.