ನವದೆಹಲಿ(ಫೆ.07): ದೇಶದ ಪ್ರಮುಖ ಖಾಸಗಿ ಪೆಟ್ರೋಲಿಯಂ ಸಂಸ್ಥೆಯಾದ ಶೆಲ್, ಇದೀಗ ತನ್ನ ಬಂಕ್‌ಗಳಲ್ಲಿ ಎಲೆಕ್ಟ್ರಿಕ್ ಕಾರುಗಳಿಗಾಗಿ ಚಾರ್ಜರ್ ಅಳವಡಿಸಲು ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಶೆಲ್, ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಶೀಘ್ರದಲ್ಲೇ ಎಲ್ಲಾ ಬಂಕ್‌ಗಳಲ್ಲಿ ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಪಾಯಿಂಟ್ ಗಳನ್ನು ಅಳವಡಿಸಲಾಗುವುದು ಎಂದು ಹೇಳಿದೆ.

ಯೂರೋಪ್ ನಲ್ಲಿ ಶೆಲ್ ಎಲೆಕ್ಟ್ರಿಕ್ ಬಂಕ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಮತ್ತು ಭಾರತದಲ್ಲಿ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹೆಚ್ಚುತ್ತಿರುವುದರ ಪರಿಣಾಮವಾಗಿ, ಭಾರತದಲ್ಲೂ ಎಲೆಕ್ಟ್ರಿಕ್ ಚಾರ್ಜಿಂಗ್ ಬಂಕ್‌ಗಳನ್ನು ಪ್ರಾರಂಭಿಸಲು ಸಂಸ್ಥೆ ನಿರ್ಧರಿಸಿದೆ.

ಇದಕ್ಕೂ ಮೊದಲು ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಆ ನಂತರ ಎಲೆಕ್ಟ್ರಿಕ್ ಚಾರ್ಜಿಂಗ್ ಬಂಕ್‌ಗಳನ್ನು ನಿರ್ಮಿಸಲಾಗುವುದು ಎಂದು ಶೆಲ್ ಸ್ಪಷ್ಟಪಡಿಸಿದೆ.