ಬೀಜಿಂಗ್‌[ಮಾ.31]: 5ಜಿ ನೆಟ್‌ವರ್ಕ್ ಮತ್ತು ಬ್ರಾಡ್‌ಬ್ಯಾಂಡ್‌ ಗಿಗಾಬೈಟ್‌ ನೆಟ್‌ವರ್ಕ್ ಅನ್ನು ಹೊಂದಿದ ವಿಶ್ವದ ಮೊದಲ ಜಿಲ್ಲೆಯಾಗಿ ತಾನು ಹೊರಹೊಮ್ಮಿರುವುದಾಗಿ ಚೀನಾದ ಶಾಂಘೈ ಹೇಳಿಕೊಂಡಿದೆ. ಈ ಮೂಲಕ ಮೊಬೈಲ್‌ ತಂತ್ರಜ್ಞಾನದಲ್ಲಿ ಚೀನಾ ಅಮೆರಿಕವನ್ನೇ ಹಿಂದಿಕ್ಕಿದಂತಾಗಿದೆ.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಚೀನಾ ಮೊಬೈಲ್‌ ಮೂಲಕ ಶಾಂಘೈನ ಹಾಂಗ್‌ಕೌ ಎಂಬಲ್ಲಿ 5ಜಿ ತಂತ್ರಜ್ಞಾನವನ್ನು ಶನಿವಾರ ಆರಂಭಿಸಲಾಗಿದೆ ಎಂದು ಚೀನಾ ಸರ್ಕಾರದ ಮಾಧ್ಯಮ ಚೀನಾ ಡೇಲಿ ವರದಿ ಮಾಡಿದೆ.

ವಿಶ್ವದ ಬಹುತೇಕ ಭಾಗಗಳಲ್ಲಿ ಇದೀಗ 4ಜಿ ಎಲ್‌ಟಿಇ ನೆಟ್‌ವರ್ಕ್ ಲಭ್ಯವಿದ್ದು, 5ಜಿ ತಂತ್ರಜ್ಞಾನವು ಇದರ ಮುಂದುವರಿದ ಅಥವಾ ಸುಧಾರಿತ ತಂತ್ರಜ್ಞಾನವಾಗಿದೆ. ಅಲ್ಲದೆ, 4ಜಿ ತಂತ್ರಜ್ಞಾನಕ್ಕಿಂತ 10ರಿಂದ 100 ಪಟ್ಟು ತ್ವರಿತವಾಗಿ ಡೌನ್‌ಲೋಡ್‌ ಮಾಡುವ ಸಾಮರ್ಥ್ಯ 5ಜಿ ತಂತ್ರಜ್ಞಾನಕ್ಕಿದೆ.