ಮಂಗಳೂರು: ಸ್ವಚ್ಛ ಶಾಂಭವಿಗೂ ಇನ್ನು ಕೈಗಾರಿಕಾ ವಿಷ ಕುಣಿಕೆ..!
* ಬಳ್ಕುಂಜೆ ಕೈಗಾರಿಕಾ ಪ್ರದೇಶಕ್ಕೆ ಸಾವಿರ ಎಕರೆ ಭೂಸ್ವಾಧೀನ ಸಿದ್ಧತೆ
* ಫಲ್ಗುಣಿ ಬಳಿಕ ಮತ್ತೊಂದು ನದಿ ಹಾನಿ ಆತಂಕ
* ಶೇ.90ಕ್ಕೂ ಅಧಿಕ ಮಂದಿ ಭೂಸ್ವಾಧೀನಕ್ಕೆ ವಿರೋಧ
ಸಂದೀಪ್ ವಾಗ್ಲೆ
ಮಂಗಳೂರು(ಜೂ.24): ಬಳ್ಕುಂಜೆಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಉದ್ದೇಶದಿಂದ 1,091 ಎಕರೆ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಈಗಾಗಲೇ ಸರ್ವೇ ಕಾರ್ಯ ಹಾಗೂ ರೈತರ ಆಕ್ಷೇಪಣೆ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಬರೋಬ್ಬರಿ ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯ ಆರಂಭವಾದರೆ ಕೃಷಿಯನ್ನೇ ನಂಬಿಕೊಂಡಿರುವ ಕುಟುಂಬಗಳು ಅತಂತ್ರವಾಗುವುದು ಒಂದೆಡೆಯಾದರೆ, ಇದುವರೆಗೆ ಸ್ವಚ್ಛವಾಗಿದ್ದು ಜನರಿಗೆ ನೀರುಣಿಸುತ್ತಿದ್ದ ಶಾಂಭವಿ ನದಿ ಸಂಪೂರ್ಣ ಕಲುಷಿತವಾಗಿ ಜನರ ಆರೋಗ್ಯ, ಪರಿಸರಕ್ಕೆ ತೀವ್ರ ಅಪಾಯ ತಂದೊಡ್ಡುವ ಆತಂಕ ಎದುರಾಗಿದೆ.
ಈಗಾಗಲೇ ಎಸ್‌ಇಝಡ್ ಮತ್ತಿತರ ಕೈಗಾರಿಕೆಗಳಿಂದ ಫಲ್ಗುಣಿ ನದಿ ಸಂಪೂರ್ಣ ಮಲಿನವಾಗಿದ್ದು, ವಿಷಪೂರಿತ ರಾಸಾಯನಿಕಗಳಿಂದ ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದೆ. ಆಗಾಗ ಫಲ್ಗುಣಿ ಮೀನುಗಳ ಮಾರಣಹೋಮ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ. ಇದೇ ರೀತಿಯ ಅಪಾಯ ಶಾಂಭವಿ ನದಿಗೂ ಒದಗಿಬರುವ ಆತಂಕದಲ್ಲಿದ್ದಾರೆ ಜನರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಮೋದಿ ಚಿಂತನೆ: ಕತ್ತಿ..!
ಸಮೃದ್ಧ ಕೃಷಿ ಭೂಮಿ:
ಭೂಸ್ವಾಧೀನ ಉದ್ದೇಶಿತ 1091 ಎಕರೆ ಜಾಗದಲ್ಲಿ 172 ಕುಟುಂಬಗಳಿದ್ದು, 905 ಜನಸಂಖ್ಯೆಯಿದೆ. ಭೂಮಿಯ ಇತರ ಹಕ್ಕುದಾರರು 179 ಮಂದಿ ಇದ್ದಾರೆ. ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಬಳ್ಕುಂಜೆ ಮತ್ತು ಕೊಲ್ಲೂರು, ಐಕಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಳೆಪಾಡಿ ಗ್ರಾಮದಲ್ಲಿ ತಲಾ 350 ಎಕರೆಯಂತೆ ಭೂಸ್ವಾಧೀನವಾಗಲಿದೆ. ಅದರಲ್ಲಿ 142 ಎಕರೆ ಸರ್ಕಾರಿ ಜಾಗ ಬಿಟ್ಟರೆ ಎಲ್ಲವೂ ಸಮದ್ಧ ಕೃಷಿಭೂಮಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶ.
ಬಹುಗ್ರಾಮ ನೀರಿಗೆ ವಿಷ?:
ಬಳ್ಕುಂಜೆ ಸುತ್ತಮುತ್ತಲಿನ 36 ಗ್ರಾಮಗಳಿಗೆ ಕುಡಿಯುವ ನೀರಿಗೆ ಶಾಂಭವಿ ನದಿಯೇ ಆಧಾರ. ಭಂಡಸಾಲೆ ಎಂಬಲ್ಲಿ ನದಿಗೆ ಅಣೆಕಟ್ಟು ಕಟ್ಟಿಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಸರಬರಾಜು ಆಗುತ್ತಿದೆ. ಈಗ ಉದ್ದೇಶಿತ ಕೈಗಾರಿಕಾ ಪ್ರದೇಶಕ್ಕೆ ಗುರುತಿಸಲಾದ ಜಾಗ ಶಾಂಭವಿ ನದಿಗೆ ತಾಗಿಕೊಂಡೇ ಇರುವುದರಿಂದ ಕೈಗಾರಿಕಾ ವಿಷ ನದಿಯನ್ನು ಸೇರಿ ಇಡೀ ನೀರಿನ ಮೂಲವೇ ಕಲುಷಿತವಾಗುವ ಅಪಾಯವಿದೆ. ಜನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜಾ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ನದಿ ಕಲುಷಿತ ಖಚಿತ: ಬಳ್ಕುಂಜೆಯಲ್ಲಿ ಕೈಗಾರಿಕಾ ಪ್ರದೇಶ ಆರಂಭವಾದರೆ ಶಾಂಭವಿ ನದಿ ಕಲುಷಿತವಾಗುವುದು ಶೇ.100ರಷ್ಟುಸತ್ಯ. ಇದುವರೆಗೆ ಆದ ಎಲ್ಲ ಕೈಗಾರಿಕಾ ಪ್ರದೇಶಗಳೂ ಪರಿಸರ, ಜಲಮೂಲಕ್ಕೆ ಹಾನಿಯನ್ನೇ ಮಾಡಿವೆ. ಮಂಗಳೂರು ವಿಶೇಷ ಆರ್ಥಿಕ ವಲಯ, ತೈಲ ಸಂಸ್ಕರಣೆ ಕೈಗಾರಿಕೆಗಳಿಂದ ಫಲ್ಗುಣಿ ನದಿ ಸಂಪೂರ್ಣ ಕಲುಷಿತವಾಗಿರುವುದು ಕಣ್ಮುಂದೆಯೇ ಇರುವಾಗ ಶಾಂಭವಿ ನದಿಗೂ ಇದೇ ರೀತಿಯ ಗತಿ ಬರುವುದು ನಿಶ್ಚಿತ. ಇದನ್ನು ತಡೆಯಲೇಬೇಕಾಗಿದೆ ಎಂದು ಪರಿಸರವಾದಿ ದಿನೇಶ್ ಹೊಳ್ಳ ಹೇಳುತ್ತಾರೆ.
ಶೇ.90 ಗ್ರಾಮಸ್ಥರ ಒಪ್ಪಿಗೆ ಇಲ್ಲ; ಹೋರಾಟಕ್ಕೆ ಅಣಿ
ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ ಈಗಾಗಲೇ ಗ್ರಾಮಸ್ಥರು ಬೃಹತ್ ಹೋರಾಟಕ್ಕೆ ಅಣಿಯಾಗಿದ್ದಾರೆ. ಬಿಜೆಪಿ ಬೆಂಬಲದ ಆಡಳಿತ ಇರುವ ಐಕಳ ಮತ್ತು ಬಳ್ಕುಂಜೆ ಗ್ರಾಮ ಸಭೆಯಲ್ಲಿ ಭೂಸ್ವಾಧೀನ ವಿರುದ್ಧ ನಿರ್ಣಯವೂ ಆಗಿದೆ. ಬಳ್ಕುಂಜೆ ಗ್ರಾ.ಪಂ. ಸಾಮಾನ್ಯ ಸಭೆ ಮುಂದಿನ ಬುಧವಾರ ನಡೆಯಲಿದ್ದು, ಅಲ್ಲೂ ನಿರ್ಣಯ ಕೈಗೊಳ್ಳಲು ಸಿದ್ಧತೆ ನಡೆದಿದೆ.
Mangaluru: ಉಳ್ಳಾಲ ಕಡಲಲ್ಲಿ ವಿದೇಶಿ ನೌಕೆ ಮುಳುಗಡೆ, ತೈಲ ಸೋರಿಕೆ ಭೀತಿ
ಭೂಸ್ವಾಧೀನಕ್ಕೆ ಉದ್ದೇಶಿಸಿರುವ ಸಾವಿರ ಎಕರೆ ಜಾಗದ ಶೇ.90ಕ್ಕೂ ಅಧಿಕ ಮಂದಿ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರು ಕೃಷಿ ಮಾಡಿಕೊಂಡು ನೆಮ್ಮದಿಯಾಗಿ ಇದ್ದಾರೆ, ಕೈಗಾರಿಕೆ ತಂದು ಇಲ್ಲಿನ ನೆಲ ಜಲ ಹಾಳುಮಾಡುವುದು ಯಾರಿಗೂ ಇಷ್ಟಇಲ್ಲ ಎಂದು ಮಮತಾ ಪೂಂಜ ಹೇಳುತ್ತಾರೆ. ಇದುವರೆಗೆ ಉಡುಪಿಯ ಉಷ್ಣವಿದ್ಯುತ್ ಸ್ಥಾವರದಿಂದ ನಮ್ಮ ಕೃಷಿ ಹಾನಿ ಆಗುತ್ತಿತ್ತು. ಇನ್ನು ಇಲ್ಲೇ ಕೈಗಾರಿಕಾ ಪ್ರದೇಶ ಆದರೆ ಬದುಕುವುದು ಹೇಗೆ ಎಂದು ಸ್ಥಳೀಯ ರೈತ, ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ಡೆನ್ನಿಸ್ ಡಿಸೋಜ ಪ್ರಶ್ನಿಸುತ್ತಾರೆ.
ನಾವು ಕೃಷಿಯಲ್ಲೇ ಬದುಕು ಕಟ್ಟಿಕೊಂಡವರು. ದುಡಿಮೆ ಏನಿದ್ದರೂ ಅದು ಕೃಷಿಯಲ್ಲೇ. ಈಗ ಏಕಾಏಕಿ ಭೂಮಿ ಬಿಟ್ಟುಕೊಡಿ ಎಂದರೆ ಎಲ್ಲಿಗೆ ಹೋಗಬೇಕು? ಕೃಷಿ ಇಲ್ಲದೆ ನಮ್ಮ ಅಸ್ತಿತ್ವವೇ ಇಲ್ಲ. ಹಾಗಾಗಿ ಎಲ್ಲ ರೈತರು ಸೇರಿಕೊಂಡು ಹೋರಾಟ ನಡೆಸುತ್ತಿದ್ದೇವೆ ಅಂತ ಹೋರಾಟ ಸಮಿತಿ ಅಧ್ಯಕ್ಷ ಡೆನ್ನಿಸ್ ಡಿಸೋಜ ಹೇಳಿದ್ದಾರೆ.
ಕೈಗಾರಿಕಾ ಪ್ರದೇಶದ ನೆಪದಲ್ಲಿ ಭೂಮಿ ಕಬಳಿಸುವ ಹುನ್ನಾರ ಇದು. ಅಭಿವೃದ್ಧಿ ಕೇವಲ ನೆಪ ಅಷ್ಟೇ. ಬಳ್ಕುಂಜೆ ಪ್ರದೇಶಕ್ಕೆ ಕೈಗಾರಿಕೆಗಳು ಬಂದರೆ ಶಾಂಭವಿ ನದಿ ಖಂಡಿತವಾಗಿಯೂ ಕಲುಷಿತ ಆಗಲಿದೆ. ಜನರ ಆರೋಗ್ಯ, ಪರಿಸರಕ್ಕೆ ಹಾನಿ ಖಚಿತ ಅಂತ ಪರಿಸರವಾದಿ ದಿನೇಶ್ ಹೊಳ್ಳ ತಿಳಿಸಿದ್ದಾರೆ.