ಶೈಲೇಶ್ ಜೆಜುರಿಕರ್ 1989 ರಲ್ಲಿ ಭಾರತದಲ್ಲಿ ಸಹಾಯಕ ಬ್ರಾಂಡ್ ಮ್ಯಾನೇಜರ್ ಆಗಿ ಪ್ರಾಕ್ಟರ್ & ಗ್ಯಾಂಬಲ್ ಅನ್ನು ಸೇರಿದರು ಮತ್ತು ಜಾಗತಿಕ ಮಟ್ಟದಲ್ಲಿ ಸ್ಥಿರವಾಗಿ ಏರಿಕೆ ಕಂಡಿದ್ದರು.
ನವದೆಹಲಿ (ಜು.29): ಭಾರತೀಯ ಮೂಲದ ಕಾರ್ಯನಿರ್ವಾಹಕ ಶೈಲೇಶ್ ಜೆಜುರಿಕರ್ ಅವರು 2026 ಜನವರಿ 1ರಿಂದ ಜಾರಿಗೆ ಬರುವಂತೆ ಅಮೇರಿಕನ್ ಫಾಸ್ಟ್-ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (FMCG) ದೈತ್ಯ ಪ್ರಾಕ್ಟರ್ & ಗ್ಯಾಂಬಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
58 ವರ್ಷ ವಯಸ್ಸಿನ, ಪ್ರಸ್ತುತ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಜಾನ್ ಮೊಯೆಲ್ಲರ್ ಅವರ ನಂತರ ಅಧ್ಯಕ್ಷ ಮತ್ತು ಸಿಇಒ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಕಂಪನಿ ಘೋಷಿಸಿದೆ. ಐಐಎಂ ಲಕ್ನೋದ ಹಳೆಯ ವಿದ್ಯಾರ್ಥಿಯಾಗಿರುವ ಜೆಜುರಿಕರ್, ಜಾಗತಿಕ ಕಂಪನಿಗಳಲ್ಲಿ ಚುಕ್ಕಾಣಿ ಹಿಡಿದಿರುವ ಭಾರತೀಯ ಮೂಲದ ನಾಯಕರ ಗಣ್ಯ ಲೀಗ್‌ಗೆ ಸೇರಿದ್ದಾರೆ.
"ಪ್ರಸ್ತುತ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿರುವ ಶೈಲೇಶ್ ಜೆಜುರಿಕರ್, ಜಾನ್ ಮೊಯೆಲ್ಲರ್ ಅವರ ನಂತರ ಪ್ರಾಕ್ಟರ್ & ಗ್ಯಾಂಬಲ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಜನವರಿ 1, 2026 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 2025 ರಲ್ಲಿ ನಡೆಯುವ ವಾರ್ಷಿಕ ಷೇರುದಾರರ ಸಭೆಯಲ್ಲಿ ನಿರ್ದೇಶಕರಾಗಿ ಚುನಾವಣೆಗೆ ಸ್ಪರ್ಧಿಸಲು ಮಂಡಳಿಯು ಜೆಜುರಿಕರ್ ಅವರನ್ನು ನಾಮನಿರ್ದೇಶನ ಮಾಡಿದೆ" ಎಂದು ಪ್ರಾಕ್ಟರ್ & ಗ್ಯಾಂಬಲ್ (ಪಿ & ಜಿ) ಹೇಳಿಕೆಯಲ್ಲಿ ತಿಳಿಸಿದೆ.
ಯಾರಿವರು Shailesh Jejurikar?
ಶೈಲೇಶ್ ಜೆಜುರಿಕರ್ ಭಾರತದಲ್ಲಿ ಹುಟ್ಟಿದವರು ಮತ್ತು ತಮ್ಮ ಆರಂಭಿಕ ವರ್ಷಗಳನ್ನು ಮುಂಬೈನ ಹೊರಗಿನ ಗ್ರಾಮೀಣ ಪ್ರದೇಶದಲ್ಲಿ ಕಳೆದಿದ್ದರು. ಅವರು ತಮ್ಮ ಪದವಿಪೂರ್ವ ಅಧ್ಯಯನವನ್ನು ಬಾಂಬೆಯಲ್ಲಿ ಪೂರ್ಣಗೊಳಿಸಿದ ಬಳಿಕ,ಲಕ್ನೋದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ನಿಂದ ಎಂಬಿಎ ಗಳಿಸಿದ್ದರು ಎನ್ನುವುದು ಅವರ ಲಿಂಕ್ಡಿನ್ ಮಾಹಿತಿ ತಿಳಿಸಿದೆ.
ಜೆಜುರಿಕರ್ 1989 ರಲ್ಲಿ ಭಾರತದಲ್ಲಿ ಸಹಾಯಕ ಬ್ರಾಂಡ್ ಮ್ಯಾನೇಜರ್ ಆಗಿ ಪ್ರಾಕ್ಟರ್ & ಗ್ಯಾಂಬಲ್ ಅನ್ನು ಸೇರಿದರು. ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕಾದಾದ್ಯಂತ ಜಾಗತಿಕ ಮಟ್ಟದಲ್ಲಿ ಪ್ರಮುಖವಾಗಿ ಕೆಲಸ ಮಾಡಿದ್ದರಯ. ಭಾರತ, ಕೀನ್ಯಾ ಮತ್ತು ಯುಎಸ್‌ನಾದ್ಯಂತ ಮಾರ್ಕೆಟಿಂಗ್ ಮತ್ತು ನಾಯಕತ್ವದ ಪಾತ್ರಗಳ ನಂತರ, ಅವರು 2005 ರಲ್ಲಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಪಡೆದರು ಮತ್ತು 2008 ರಲ್ಲಿ ಉಪಾಧ್ಯಕ್ಷರಾದರು.
2010 ರ ಹೊತ್ತಿಗೆ, ಅವರು ಉತ್ತರ ಅಮೆರಿಕಾದಲ್ಲಿ ಹೋಮ್ ಕೇರ್ ಅನ್ನು ಮುನ್ನಡೆಸುತ್ತಿದ್ದರು. 2014 ರಲ್ಲಿ, ಅವರು ಉತ್ತರ ಅಮೆರಿಕದ ಫ್ಯಾಬ್ರಿಕ್ ಕೇರ್‌ನ ಅಧ್ಯಕ್ಷರಾದರು ಮತ್ತು ನಂತರ ಜಾಗತಿಕ ಜವಾಬ್ದಾರಿಗಳನ್ನು ವಹಿಸಿಕೊಂಡರು. 2019 ರಲ್ಲಿ, ಅವರನ್ನು ಕಂಪನಿಯ ಅತಿದೊಡ್ಡ ವ್ಯಾಪಾರ ಘಟಕವಾದ ಪಿ & ಜಿ ಯ ಗ್ಲೋಬಲ್ ಫ್ಯಾಬ್ರಿಕ್ & ಹೋಮ್ ಕೇರ್‌ನ ಸಿಇಒ ಆಗಿ ನೇಮಿಸಲಾಯಿತು. 2021 ರಿಂದ, ಅವರು ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
1837 ರಲ್ಲಿ ಸ್ಥಾಪನೆಯಾದಾಗಿನಿಂದ ಜೆಜುರಿಕರ್ ಅವರು P&G ಯ ಎರಡನೇ ಅಮೆರಿಕ ಮೂಲದವರಲ್ಲದ ಸಿಇಒ ಆಗಲಿದ್ದಾರೆ ಮತ್ತು ಫಾರ್ಚೂನ್ 500 ಕಂಪನಿಯ ನೇತೃತ್ವ ವಹಿಸಿರುವ ಕೆಲವೇ ಭಾರತೀಯ ಮೂಲದ ನಾಯಕರಲ್ಲಿ ಒಬ್ಬರಾಗಲಿದ್ದಾರೆ. ಮೊದಲನೆಯವರು ನೆದರ್ಲ್ಯಾಂಡ್ಸ್ ಮೂಲದ ಡರ್ಕ್ ಜಾಗರ್, ಅವರನ್ನು 1998 ರಲ್ಲಿ ಸಿಇಒ ಆಗಿ ನೇಮಿಸಲಾಗಿತ್ತು.
ಶೈಲೇಶ್ ಜೆಜುರಿಕರ್ ಅವರು ಸಿನ್ಸಿನಾಟಿ ಸೆಂಟರ್ ಸಿಟಿ ಡೆವಲಪ್‌ಮೆಂಟ್ ಕಾರ್ಪ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಓಟಿಸ್ ಎಲಿವೇಟರ್ ಕಂಪನಿಯ ಮಂಡಳಿಯ ಸದಸ್ಯರಾಗಿದ್ದಾರೆ, ಅಲ್ಲಿ ಅವರು ಪರಿಹಾರ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಅವರು ದಿ ಕ್ರೈಸ್ಟ್ ಆಸ್ಪತ್ರೆಯ ಮಂಡಳಿಯಲ್ಲೂ ಇದ್ದಾರೆ. ಇದಕ್ಕೂ ಮೊದಲು, ಅವರು 2014 ರಿಂದ 2017 ರವರೆಗೆ ಅಮೇರಿಕನ್ ಕ್ಲೀನಿಂಗ್ ಇನ್‌ಸ್ಟಿಟ್ಯೂಟ್‌ನ ಉಪಾಧ್ಯಕ್ಷರಾಗಿದ್ದರು ಮತ್ತು 2012 ಮತ್ತು 2017 ರ ನಡುವೆ ಸಿನ್ಸಿನಾಟಿ ಕಂಟ್ರಿ ಡೇ ಶಾಲೆಯಲ್ಲಿ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದರು.
