ಬೈಜುಸ್‌ಗೆ ಮತ್ತೊಂದು ಹೊಡೆತ, ಬೆಂಗಳೂರು ಕಚೇರಿ ಖಾಲಿ ಮಾಡಿದ ಕಂಪನಿ!
ಬೈಜುಸ್ ಕಂಪನಿ ಮತ್ತೊಂದು ಹೊಡೆತಕ್ಕೆ ಸಿಲುಕಿದೆ. ಉದ್ಯೋಗ ಕಡಿತ, ಉದ್ಯೋಗಿಳ ಮೇಲೆ ಅತೀಯಾದ ಒತ್ತಡ, ಲೆಕ್ಕ ಪತ್ರ ಪರಿಶೋಧನೆಗೆ ಕೇಂದ್ರದ ಸೂಚನೆ ಬಳಿಕ ಇದೀಗ ಬೆಂಗಳೂರಿನ ಅತೀ ದೊಡ್ಡ ಕಚೇರಿಯನ್ನು ತೆರವು ಮಾಡಿದೆ.
ಬೆಂಗಳೂರು(ಜು.24) ಶಿಕ್ಷಣ ಕ್ಷೇತ್ರದ ಟೆಕ್ ದಿಗ್ಗಜನಾಗಿ ಗುರುತಿಸಿಕೊಂಡಿರುವ ಬೈಜುಸ್ ತೀವ್ರ ಸಂಕಷ್ಟ ಎದುರಿಸುತ್ತಿದೆ. ಆರ್ಥಿಕ ಹಿಂಜರಿತ ಸರಿದೂಗಿಸಲು ಈಗಾಗಲೇ ಉದ್ಯೋಗ ಕಡಿತ ಮಾಡಿರುವ ಬೈಜುಸ್, ಇರುವ ಉದ್ಯೋಗಿಗಳ ಮೇಲೆ ಅತೀಯಾದ ಒತ್ತಡ ಹಾಕಲಾಗುತ್ತಿದೆ ಅನ್ನೋ ಆರೋಪ ಜೋರಾಗಿ ಕೇಳಿಬರುತ್ತಿದೆ. ಈ ಎಲ್ಲಾ ಬೆಳವಣಿಗೆಯಿಂದ ಬೈಜುಸ್ ತೀವ್ರ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಇದೀಗ ಬೆಂಗಳೂರಿನ ಪ್ರಮುಖ ಕಚೇರಿಯನ್ನು ಕಂಪನಿ ಖಾಲಿ ಮಾಡಿದೆ. ನಗರದ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ 5.58 ಲಕ್ಷ ಚದರ ಅಡಿ ವಿಸ್ತೀರ್ಣ ಕಚೇರಿಯನ್ನು ಕಂಪನಿ ಖಾಲಿ ಮಾಡಿದೆ. ಖರ್ಚು ವೆಚ್ಚ ಉಳಿಸಲು ಈ ನಿರ್ದಾರ ಎಂದು ಬೈಜುಸ್ ಹೇಳಿದೆ.
ಕಂಪನಿಯ ಖರ್ಚು ವೆಚ್ಚ ಉಳಿಸಲು ಬೈಜುಸ್ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿದ್ದ ಅತೀ ದೊಡ್ಡ ಕಚೇರಿಯನ್ನು ಖಾಲಿ ಮಾಡಿದೆ. ಇನ್ನು ಕಲ್ಯಾಣಿ ಟೆಕ್ ಪಾರ್ಕ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಇತರ ಕಚೇರಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಇನ್ನು ಕೆಲ ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಜುಲೈ 23ರಿಂದಲೇ ಕಂಪನಿ ಕಚೇರಿಯನ್ನು ತೆರವು ಮಾಡಿದೆ. ಜುಲೈ 23 ರಿಂದ ಉದ್ಯೋಗಿಗಳನ್ನು ಇತರ ಕಚೇರಿಗೆ ಸ್ಥಳಾಂತರಿಸಲಾಗಿದೆ.
ಬಯಲಾಯ್ತು BYJU'S ಕೆಲಸದ ಸಂಸ್ಕೃತಿ, ಮ್ಯಾನೇಜರನ್ನು ತರಾಟೆಗೆ ತೆಗೆದ ಉದ್ಯೋಗಿ ವಿಡಿಯೋ ವೈರಲ್!
ಕಲ್ಯಾಣಿ ಟೆಕ್ ಪಾರ್ಕ್ ಕಚೇರಿ ಮಾತ್ರವಲ್ಲ, ಪ್ರೆಸ್ಟೀಜ್ ಟೆಕ್ ಪಾರ್ಕನಲ್ಲಿರುವ 9 ಮಹಡಿಗಳ ಕಚೇರಿಯಲ್ಲಿ 2 ಮಹಡಿಗಳನ್ನು ತೆರವು ಮಾಡಿದೆ. ಇದೀಗ ಹಲವು ಉದ್ಯೋಗಿಗಳನ್ನು ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿರುವ ಕಚೇರಿಗೆ ಸ್ಥಳಾಂತರಿಸಲಾಗಿದೆ. ಬೈಜುಸ್ ದೇಶಾದ್ಯಂತ ಒಟ್ಟು 3 ಮಿಲಿಯನ್ ಚದರ ಅಡಿಯ ಕಚೇರಿ ಹೊಂದಿದೆ. ಕೊರೋನಾ ಬಳಿಕ ಬೈಜುಸ್ ಹಲವು ಸಮಸ್ಯೆ ಎದುರಿಸುತ್ತಿದೆ. ವಿದೇಶದಲ್ಲಿ ಉದ್ಯಮ ವಿಸ್ತರಣೆ, ಪ್ರಚಾರ ಸೇರಿದಂತೆ ಹಲವು ನಿರ್ಧಾರಗಳಲ್ಲಿ ಬೈಜುಸ್ ಹಿನ್ನಡೆ ಅನುಭವಿಸಿದೆ.
ಈಗಾಗಲೇ ಭಾರಿ ಉದ್ಯೋಗ ಕಡಿತ ಮಾಡುವ ಮೂಲಕ ಹಲವರ ಕೆಂಗಣ್ಣಿಗೆ ಬೈಜುಸ್ ಗುರಿಯಾಗಿತ್ತು. ಆರ್ಥಿಕ ನಷ್ಟ ಸರಿದೂಗಿಸಲು ಬೈಜುಸ್ ಇತ್ತೀಚೆಗೆ ಉದ್ಯೋಗ ಕಡಿತ ಮಾಡಿತ್ತು. ಬಳಿಕ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಅತೀಯಾದ ಒತ್ತಡ ಹಾಕಲಾಗುತ್ತಿದೆ ಅನ್ನೋ ಆರೋಪ ಪದೇ ಪದೇ ಕೇಳಿಬರುತ್ತಿದೆ. ಇತ್ತೀಚೆಗೆ ಬೈಜುಸ್ ಮಹಿಳಾ ಉದ್ಯೋಗಿ, ಮ್ಯಾನೇಜರ್ ಹಾಗೂ ಇತರ ಹಿರಿಯ ಉದ್ಯೋಗಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿತ್ತು.
ಬೈಜೂಸ್‌ನಿಂದ ಮತ್ತೆ 1 ಸಾವಿರ ಉದ್ಯೋಗಿಗಳ ವಜಾ
ಕೆಟ್ಟ ಕೆಲಸದ ಸಂಸ್ಕೃತಿ, ಅತಿಯಾದ ಒತ್ತಡ, ಒಂದು ವರ್ಷದಿಂದ ಇನ್ಸೆಂಟೀವ್ ನೀಡಿದ ಸತಾಯಿಸುತ್ತಿರುವ ಕಂಪನಿ ವಿರುದ್ಧ ಮಹಿಳಾ ಉದ್ಯೋಗಿ ಗರಂ ಆಗಿದ್ದರು. ಈ ವಿಚಾರವಾಗಿ ಮ್ಯಾನೇಜರ್ ಜೊತೆ ವಾಗ್ವಾದ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.