ಮುಂಬೈ (ಮಾ. 27):  ಕೇಂದ್ರ ಸರ್ಕಾರವು ಕೊರೋನಾ ವೈರಸ್‌ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗಾಗಿ 1.70 ಲಕ್ಷ ಕೋಟಿ ರು. ಪ್ಯಾಕೇಜ್‌ ಪ್ರಕಟಿಸಿರುವುದು, ಕಳೆದ ಕೆಲವು ದಿನಗಳಿಂದ ಕಳೆಗುಂದಿದ್ದ ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಗುರುವಾರ ಬಾಂಬೆ ಷೇರುಪೇಟೆ ‘ಸೆನ್ಸೆಕ್ಸ್‌’ 1411 ಅಂಕ ಹಾಗೂ ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 323 ಅಂಕ ಏರಿವೆ. ಈ ಮೂಲಕ ಸತತ 3ನೇ ದಿನ ಷೇರುಪೇಟೆ ಏರಿದ್ದು, ಹೂಡಿಕೆದಾರರ ಸಂಪತ್ತು 3 ದಿನಗಳಲ್ಲಿ 11.12 ಲಕ್ಷ ಕೋಟಿ ರು. ಏರಿದಂತಾಗಿದೆ.

ಲಾಕ್‌ಡೌನ್‌ನಿಂದ ಪ್ರತಿ ನಿತ್ಯ 40 ಸಾವಿರ ಕೋಟಿ ರು. ನಷ್ಟ!

ಇದೇ ಪ್ಯಾಕೇಜ್‌ ಪ್ರಕಟಣೆಯ ನಿರೀಕ್ಷೆ ಹೊಂದಿ ಬುಧವಾರ ಸೆನ್ಸೆಕ್ಸ್‌ 1,861 ಹಾಗೂ ನಿಫ್ಟಿ516 ಅಂಕ ಏರಿದ್ದವು. ಷೇರುಪೇಟೆಯ ಈ ಏರಿಕೆ 10 ವರ್ಷದ ಏಕದಿನದ ಅತ್ಯಧಿಕ ಏರಿಕೆ ಎನ್ನಿಸಿಕೊಂಡಿತ್ತು.

ಈ ನಿರೀಕ್ಷೆ ನಿಜವಾಗುತ್ತಿದ್ದಂತೆಯೇ ಗುರುವಾರ ಸೆನ್ಸೆಕ್ಸ್‌ 1410.99 ಅಂಕ ಏರಿಕ 29,946.77ಕ್ಕೆ ದಿನದ ವಹಿವಾಟು ಮುಗಿಸಿತು. ನಿಫ್ಟಿಕೂಡ 323.60 ಅಂಕ ಏರಿ 8,641.45ಕ್ಕೆ ಸ್ಥಿರಗೊಂಡಿತು.

2020ರ ಜ.20ರಂದು ಸೆನ್ಸೆಕ್ಸ್‌ 42,273 ಅಂಕಗಳಲ್ಲಿ ಮುಕ್ತಾಯವಾಗುವ ಮೂಲಕ ಇತಿಹಾಸದಲ್ಲೇ ಗರಿಷ್ಠ ಅಂಕ ದಾಖಲಿಸಿದ ದಾಖಲೆ ಮಾಡಿತ್ತು. ಅದಾದ ಬಳಿಕ ಕೊರೋನಾ ಕಾರಣ ಸಂವೇದಿ ಸೂಚ್ಯಂಕ ಕುಸಿತದ ಹಾದಿ ಹಿಡಿದಿದ್ದು, ಸೋಮವಾರ 25981 ಅಂಕಗಳಿಗೆ ಇಳಿದಿತ್ತು. ಅಂದರೆ ಒಂದೇ ತಿಂಗಳಲ್ಲಿ 16292 ಅಂಕಗಳ ಕುಸಿತ ಕಂಡಿತ್ತು. ಈ ಮೂಲಕ ಹೂಡಿಕೆದಾರರ 52 ಲಕ್ಷ ಕೋಟಿ ರು.ನಷ್ಟುಸಂಪತ್ತು ಕರಗಿತ್ತು.