ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ 2ನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆ ಭಾರೀ ಕುಸಿತ ದಾಖಲಿಸಿದೆ. ಸೆನ್ಸೆಕ್ಸ್‌ ಒಂದೇ ದಿನ 1,235 ಅಂಕಗಳಷ್ಟು ಕುಸಿತ ದಾಖಲಿಸಿ 7 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. 

ಮುಂಬೈ (ಜ.22): ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ 2ನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆ ಭಾರೀ ಕುಸಿತ ದಾಖಲಿಸಿದೆ. ಸೆನ್ಸೆಕ್ಸ್‌ ಒಂದೇ ದಿನ 1,235 ಅಂಕಗಳಷ್ಟು ಕುಸಿತ ದಾಖಲಿಸಿ 7 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ 7.5 ಲಕ್ಷ ಕೋಟಿ ರು.ನಷ್ಟು ಕರಗಿದೆ. ಟ್ರಂಪ್‌ ಅವರು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಭಾರತ ಸೇರಿದಂತೆ ಬ್ರಿಕ್ಸ್ ಸಮೂಹ ದೇಶಗಳ ವಸ್ತುಗಳ ಮೇಲೆ ಅಮೆರಿಕದಲ್ಲಿ ಶೇ.100ರಷ್ಟು ತೆರಿಗೆ ಹಾಕುವ ಇಂಗಿತ ಹೊಂದಿರುವುದಾಗಿ ಎಚ್ಚರಿಕೆ ನೀಡಿದರು, 

ಈ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ವಿಚಲಿತರಾಗಿ ಭಾರೀ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಷೇರುಪೇಟೆ ಕುಸಿದಿದೆ. ಬಾಂಬೆ ಷೇರುಪೇಟೆ (ಬಿಎಸ್‌ಇ) ಸೂಚ್ಯಂಕವು 1,235.08 ಅಂಕಗಳು ಅಂದರೆ ಶೇ.1.60ರಷ್ಟು ಕುಸಿತ ದಾಖಲಿಸಿ, 75,838.86 ಅಂಕದೊಂದಿಗೆ ದಿನದ ವಹಿವಾಟು ಮುಗಿಸಿತು. ಇನ್ನು ಎನ್‌ಎಸ್‌ಇ (ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌) ಸಂವೇದಿ ಸೂಚ್ಯಂಕವು 320.10 ಅಂಕಗಳ ನಷ್ಟದೊಂದಿಗೆ (ಶೇ.1.37) 23,024.65 ಅಂಕಗಳಲ್ಲಿ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ 367.9 ಅಂಕಗಳಷ್ಟು ಕುಸಿತ ದಾಖಲಿಸಿ ದಿನದ ಕನಿಷ್ಠ ಮಟ್ಟವಾದ 22,976.85ಕ್ಕೆ ಕುಸಿದಿತ್ತು. ಟ್ರಂಪ್‌ ತೆರಿಗೆ ನೀತಿಯ ಜತೆಗೆ ರುಪಾಯಿ ಮೌಲ್ಯ ಕುಸಿತ ಮತ್ತು ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಕಳಪೆ ಸಾಧನೆಗಳನ್ನು ಷೇರುಮಾರುಕಟ್ಟೆ ಈ ಮಟ್ಟಿಗೆ ಕುಸಿಯಲು ಕಾರಣ ಎಂದು ಹೇಳಲಾಗಿದೆ.

20 ಸುಳ್ಳು ಹೇಳಿದ ಟ್ರಂಪ್‌: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅರ್ಧಗಂಟೆ ಭಾಷಣ ಮಾಡಿದ್ದ ಡೊನಾಲ್ಡ್ ಟ್ರಂಪ್‌ ತಮ್ಮ ಭಾಷಣದಲ್ಲಿ 20 ಸುಳ್ಳುಗಳನ್ನು ಹೇಳಿದರು ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ಫ್ಯಾಕ್ಟ್‌ ಚೆಕ್ಕಿಂಗ್ ನಡೆಸಿ ವರದಿ ಪ್ರಕಟಿಸಿದೆ. ಆರ್ಥಿಕತೆ, ವಿದೇಶಾಂಗ ನೀತಿ, ವಲಸೆ, 2020ರ ಚುಣಾವಣೆ- ಮೊದಲಾದವುಗಳ ಬಗ್ಗೆ ಮಾತನಾಡುವಾಗ ಟ್ರಂಪ್‌ ಸುಳ್ಳು ಹೇಳಿದರು ಎಂದು ಅದು ಹೇಳಿದೆ. ಈ ಮುಂಚೆ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಟ್ರಂಪ್‌ 30,573 ಸುಳ್ಳುಗಳನ್ನು ಹೇಳಿದ್ದರು. ಸುಳ್ಳಿನ ದಿನದ ಸರಾಸರಿ ದಿನಕ್ಕೆ 21 ಆಗಿತ್ತು ಎಂದು ಈ ಹಿಂದೆ ಮಾಧ್ಯಮ ವರದಿಗಳು ಹೇಳಿದ್ದವು.

'ನಮ್ಮ ತೆರಿಗೆ ನಮ್ಮ ಹಕ್ಕು..' ಎಂದ ಟ್ರಂಪ್‌; ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಸಾಲು ಸಾಲು ವಿವಾದಾತ್ಮಕ ನಿರ್ಧಾರಕ್ಕೆ ಸಹಿ!

ಉಷಾರನ್ನು ಉಪಾಧ್ಯಕ್ಷೆ ಮಾಡಬೇಕು ಎಂದುಕೊಂಡಿದ್ದೆ: ಅಮೆರಿಕದ ನೂತನ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರ ಪತ್ನಿ ಹಾಗೂ ಭಾರತೀಯ ಮೂಲದ ಉಷಾ ವ್ಯಾನ್ಸ್‌ ಮೇಲೆ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಶಂಸೆ ಮಳೆಗರೆದಿದ್ದಾರೆ. ‘ನಾನು ಉಷಾ ಅವರನ್ನೇ ಅಮೆರಿಕ ಉಪಾಧ್ಯಕ್ಷೆಯನ್ನಾಗಿ ಮಾಡಬೇಕು ಎಂದುಕೊಂಡಿದ್ದೆ. ಆದರೆ ನನ್ನ ಉದ್ದೇಶ ಈಡೇರಲಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ. ಆಂಧ್ರಪ್ರದೇಶ ಮೂಲದವರಾದ ಉಷಾ ವ್ಯಾನ್ಸ್, ಅಮೆರಿಕದಲ್ಲಿ ಜೆಡಿ ವ್ಯಾನ್ಸ್‌ ಅವರನ್ನು ವರಿಸಿದ್ದರು. ತಮ್ಮ 3 ವರ್ಷದ ಮಗಳ ಜತೆ ಪತಿ ಜೆಡಿ ವ್ಯಾನ್ಸ್‌ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಗಮನ ಸೆಳೆದಿದ್ದರು.