ಸೆನ್ಸೆಕ್ಸ್ ಭರ್ಜರಿ ನೆಗೆತ: 51 ಸಾವಿರದ ‘ಗಡಿ’ಪಾರು| 617 ಅಂಕ ಜಿಗಿದು 51,348ರಲ್ಲಿ ಅಂತ್ಯ: ಇದು ಈವರೆಗಿನ ದಾಖಲೆ| 6 ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ಭರ್ಜರಿ 16.70 ಲಕ್ಷ ಕೋಟಿ ಜಿಗಿತ
ಮುಂಬೈ(ಫೆ.09): ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ 51 ಸಾವಿರದ ಗಡಿ ದಾಟಿ ಮತ್ತೊಂದು ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ. ಇದರೊಂದಿಗೆ ಕಳೆದ 6 ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ಭರ್ಜರಿ 16.70 ಲಕ್ಷ ಕೋಟಿಯಷ್ಟುಹೆಚ್ಚಿದೆ.
ಸೋಮವಾರ 617 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ ಗರಿಷ್ಠ 51,348 ಅಂಕಗಳನ್ನು ತಲುಪಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 51,523.38ಕ್ಕೆ ತಲುಪಿತ್ತು. ಆದರೆ ಕೊನೆಗೆ 617 ಅಂಕಗಳ ಏರಿಕೆಯೊಂದಿಗೆ 51,348 ಅಂಕಗಳಲ್ಲಿ ತನ್ನ ದಿನದ ವಹಿವಾಟನ್ನು ಮುಕ್ತಾಗೊಳಿಸಿದೆ.
ಇನ್ನು ರಾಷ್ಟ್ರೀಯ ಸಂವೇದಿ ಸೂಚ್ಯಂಕವಾದ ನಿಫ್ಟಿ191 ಅಂಕಗಳ ಏರಿಕೆ ದಾಖಲಿಸಿದ್ದು, 15,115 ಅಂಕಗಳಿಗೆ ಜಿಗಿತ ಕಂಡಿದೆ. ತನ್ಮೂಲಕ ಸೆನ್ಸೆಕ್ಸ್ ಮತ್ತು ನಿಫ್ಟಿಹೊಸ ದಾಖಲೆ ಬರೆದಂತಾಗಿದೆ.
ಬಜೆಟ್ ಮಂಡನೆಯಾದ ಕಳೆದ ಸೋಮವಾರದಿಂದ ಈವರೆಗೆ ಸತತ 6 ದಿನಗಳಿಂದಲೂ ಸೆನ್ಸೆಕ್ಸ್ ಮತ್ತು ನಿಫ್ಟಿಎರಡೂ ಏರುಗತಿಯಲ್ಲೇ ಸಾಗುತ್ತಿದೆ.
