ಗುರುವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ತೀವ್ರ ಕುಸಿತ ಕಂಡಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಒಂದು ವಾರದ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳ ಪತನವು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಮುಂಬೈ (ಆ.27): ಗುರುವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ತೀವ್ರ ಕುಸಿತಕ್ಕೆ ಸಾಕ್ಷಿಯಾದವು. ಬಿಎಸ್‌ಇ ಸೆನ್ಸೆಕ್ಸ್ 539 ಅಂಕಗಳಷ್ಟು ಕುಸಿದು 76,933 ಮಟ್ಟ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 117 ಅಂಕ ಕಳೆದುಕೊಂಡು 24,091 ಕ್ಕೆ ವಹಿವಾಟು ಮುಗಿಸಿತು. ಇದರೊಂದಿಗೆ ಎರಡೂ ಸೂಚ್ಯಂಕಗಳು ಒಂದು ವಾರದ ಕನಿಷ್ಠ ಮಟ್ಟಕ್ಕೆ ಕುಸಿದಂತಾಗಿದೆ. ಪ್ರಮುಖವಾಗಿ ನಿಫ್ಟಿ 24,100 ರ ನಿರ್ಣಾಯಕ ರಕ್ಷಣಾತ್ಮಕ ಮಟ್ಟಕ್ಕಿಂತ ಕೆಳಗೆ ಜಾರಿದ್ದು, ಮಾರುಕಟ್ಟೆಯಲ್ಲಿ ಎಚ್ಚರಿಕೆಯ ವಾತಾವರಣ ನಿರ್ಮಾಣವಾಗಿದೆ. ಕೇವಲ ಪ್ರಮುಖ ಸೂಚ್ಯಂಕಗಳು ಮಾತ್ರವಲ್ಲದೆ ವಲಯವಾರು ಸೂಚ್ಯಂಕಗಳೂ ನಷ್ಟ ಅನುಭವಿಸಿದವು. ಬ್ಯಾಂಕ್ ನಿಫ್ಟ 274 ಅಂಕಗಳಷ್ಟು ಕುಸಿದು 57,510 ಮಟ್ಟದಲ್ಲಿ ವಹಿವಾಟು ಪೂರ್ಣಗೊಳಿಸಿತು. ನಿಫ್ಟಿ ಮಿಡ್‌ಕ್ಯಾಪ್ 66 ಅಂಕ ನಷ್ಟದೊಂದಿಗೆ 64,035 ಕ್ಕೆ ತಲುಪಿತು. ಒಟ್ಟಾರೆ ಮಾರುಕಟ್ಟೆಯಲ್ಲಿ ಷೇರು ದರ ಕಳೆದುಕೊಂಡ ಸಂಸ್ಥೆಗಳ ಸಂಖ್ಯೆಯು ಲಾಭಗಳಿಸಿದ ಸಂಸ್ಥೆಗಳಿಗಿಂತ ಹೆಚ್ಚಾಗಿದ್ದು, ಚೇತರಿಕೆಯ ಲಕ್ಷಣಗಳು ಕನಿಷ್ಠ ಮಟ್ಟದಲ್ಲಿದ್ದವು.

4 ವರ್ಷದ ಕನಿಷ್ಠ ಮಟ್ಟಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್; ಮೆಟಲ್‌, ಆಟೋ ವಲಯಕ್ಕೆ ಪೆಟ್ಟು

ಷೇರು ಮಾರುಕಟ್ಟೆಯ ಈ ಭಾರಿ ಪತನಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಷೇರುಗಳ ಕುಸಿತ ಪ್ರಮುಖ ಕಾರಣವಾಯಿತು. ಬ್ಯಾಂಕಿನ ಷೇರು ಮೌಲ್ಯವು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಗ್ಲೋಬಲ್ ಮೆಟಲ್‌ ಬೆಲೆಗಳಲ್ಲಿ ಉಂಟಾದ ಕುಸಿತದಿಂದಾಗಿ ಹಿಂಡಾಲ್ಕೋ (Hindalco) ನಿಫ್ಟಿಯಲ್ಲೇ ಅತಿ ಹೆಚ್ಚು ನಷ್ಟ ಅನುಭವಿಸಿದ ಷೇರು ಎನಿಸಿಕೊಂಡಿತು. ಆಟೋ ವಿಭಾಗದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ (M&M) ಷೇರುಗಳು ಪತನದ ನೇತೃತ್ವ ವಹಿಸಿದವು. ಶ್ರೀರಾಮ್ ಫೈನಾನ್ಸ್ ಷೇರುಗಳು ಶೇ. 1.5 ರಷ್ಟು ಕುಸಿದು ಇತ್ತೀಚಿನ ನಷ್ಟವನ್ನು ಮುಂದುವರಿಸಿದವು. ಭಾರ್ತಿ ಏರ್‌ಟೆಲ್‌ನಲ್ಲಿ ತನಗಿರುವ ಪಾಲುದಾರಿಕೆಯ ಬಗ್ಗೆ 'ಸಿಂಗ್‌ಟೆಲ್' (Singtel) ನೀಡಿದ ಹೇಳಿಕೆಯಿಂದಾಗಿ ಭಾರ್ತಿ ಏರ್‌ಟೆಲ್ (Bharti Airtel) ಷೇರು ಮೌಲ್ಯ ಶೇಕಡಾ 1 ರಷ್ಟು ಕುಸಿತ ಕಂಡಿದೆ.

ವಿರುದ್ಧ ದಿಕ್ಕಿನಲ್ಲಿ ಈಜಿದ ಅದಾನಿ ಎಂಟರ್‌ಪ್ರೈಸಸ್, ಕೋಟಕ್ ಬ್ಯಾಂಕ್

ಮಾರುಕಟ್ಟೆಯ ತೀವ್ರ ಹಿಂಜರಿಕೆಯ ನಡುವೆಯೂ ಕೆಲವು ಷೇರುಗಳು ಉತ್ತಮ ಪ್ರದರ್ಶನ ನೀಡಿದವು. ಬ್ರೋಕರೇಜ್ ಸಂಸ್ಥೆಯ ಧನಾತ್ಮಕ ವರದಿಯ ಬೆನ್ನಲ್ಲೇ ಅದಾನಿ ಎಂಟರ್‌ಪ್ರೈಸಸ್ (Adani Enterprises) ಶೇ. 2 ರಷ್ಟು ಲಾಭಗಳಿಸಿತು. ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಬುಧವಾರದ ಚೇತರಿಕೆಯನ್ನು ಮುಂದುವರಿಸಿ, ಈ ವಾರದಲ್ಲೇ ಒಟ್ಟಾರೆ ಶೇ. 5 ರಷ್ಟು ಪ್ರಗತಿ ಕಂಡಿದೆ. ಭಾರಿ ಪ್ರಮಾಣದ ವಹಿವಾಟಿನೊಂದಿಗೆ ಬಿಎಚ್‌ಇಎಲ್ (BHEL) ಶೇ. 4 ಕ್ಕಿಂತ ಹೆಚ್ಚು ಏರಿಕೆ ಕಂಡಿತು. ಅಮೆರಿಕ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಇಕ್ವಿಪ್‌ಮೆಂಟ್ ವಲಯದ ಷೇರುಗಳು ಚೇತರಿಸಿಕೊಂಡಿದ್ದು, ಸಿಜಿ ಪವರ್ (CG Power) ಶೇ. 4 ರಷ್ಟು ಜಿಗಿಯಿತು.

ಕಾನ್‌ಕಾರ್, ಟಾಟಾ ಪವರ್ ಇಳಿಕೆ; ಆಭರಣ ಷೇರುಗಳಲ್ಲಿ ಜಿಗಿತ

ಕಾನ್‌ಕಾರ್ (CONCOR) ವಹಿವಾಟಿನ ಕೊನೆಯ ಅವಧಿಯಲ್ಲಿ ಭಾರಿ ಮಾರಾಟದ ಒತ್ತಡಕ್ಕೆ ಸಿಲುಕಿ ಶೇ. 4 ಕ್ಕಿಂತ ಹೆಚ್ಚು ಕುಸಿತ ಕಂಡಿತು. ಟಾಟಾ ಪವರ್ (Tata Power) ಕಂಪನಿ ಮಧ್ಯಸ್ಥಿಕೆ (Arbitration) ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಷೇರು ಶೇ. 3 ರಷ್ಟು ಕುಸಿಯಿತು.

ಕಸ್ಟಮ್ಸ್ ಸುಂಕ ಕಡಿತದ ವರದಿಗಳ ಹಿನ್ನೆಲೆಯಲ್ಲಿ ಜ್ಯುವೆಲ್ಲರಿ ಷೇರುಗಳು ಲಾಭಗಳಿಸಿದರೆ, ಚಿನ್ನದ ಸಾಲ ಒದಗಿಸುವ ಪ್ರಮುಖ ಸಂಸ್ಥೆಗಳಾದ ಮುತ್ಹೂಟ್ ಫೈನಾನ್ಸ್ ಮತ್ತು ಮಣಪ್ಪುರಂ ಫೈನಾನ್ಸ್ ಷೇರುಗಳು ಶೇ. 4 ರಿಂದ 5 ರಷ್ಟು ಕುಸಿದವು.

ರೂಪಾಯಿ ಮೌಲ್ಯ ಕಸರತ್ತು, ಜಾಗತಿಕ ಮಾರುಕಟ್ಟೆ ಸ್ಥಿತಿಗತಿ

ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 95.54 ಕ್ಕೆ ತಲುಪಿ ಸಾರ್ವಕಾಲಿಕ ಇಳಿಕೆ ದಾಖಲಿಸಿತು (ಮಂಗಳವಾರ ರೂಪಾಯಿ ಮೌಲ್ಯ 95.41 ಇತ್ತು). ಏಷ್ಯನ್ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಂತ್ರಜ್ಞಾನ ಷೇರುಗಳು ಹಾಗೂ ಎನ್‌ವಿಡಿಯಾ (Nvidia) ತ್ರೈಮಾಸಿಕ ಫಲಿತಾಂಶದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದ 'ಕೋಸ್ಪಿ' (Kospi) ಶೇ. 2 ರಷ್ಟು ಜಿಗಿಯಿತು. ಜಪಾನ್‌ನ 'ನಿಕ್ಕಿ 225' ಸಣ್ಣ ಪ್ರಮಾಣದ ಕುಸಿತ ಕಂಡರೆ, ಚೀನಾದ 'ಸಿಎಸ್‌ಐ 300' ಶೇ. 1 ರಷ್ಟು ಏರಿಕೆ ಕಂಡಿದೆ. ಪಶ್ಚಿಮ ಏಷ್ಯಾ ಶಾಂತಿ ಮಾತುಕತೆಗೆ ಕತಾರ್ ಪ್ರಧಾನಿ ತೆಹ್ರಾನ್‌ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸತತ ನಾಲ್ಕನೇ ದಿನವೂ ಇಳಿಕೆ ಕಂಡಿದೆ.