ಎಸ್ ಬಿಐ 24ನೇ ಹಂತದ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡುತ್ತಿದೆ. ಈ ಮಾರಾಟ ಡಿ.5ರಿಂದ ಡಿ.12ರ ತನಕ ನಡೆಯಲಿದೆ. ಹಾಗಾದ್ರೆ ಚುನಾವಣಾ ಬಾಂಡ್ ಗಳನ್ನು ಯಾರು ಖರೀದಿಸಬಹುದು? ಎಲ್ಲಿ? ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಡಿ.7): ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಡಿಸೆಂಬರ್ 5ರಿಂದ ಡಿಸೆಂಬರ್ 12ರ ನಡುವೆ ತನ್ನ 29 ಶಾಖೆಗಳಲ್ಲಿ 24ನೇ ಹಂತದ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡುತ್ತಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಚುನಾವಣಾ ಬಾಂಡ್ ಗಳನ್ನು ಬಳಸಲಾಗುತ್ತದೆ. ಗುಜರಾತ್ ವಿಧಾನಸಭೆ ಚುನಾವಣೆ ಹಾಗೂ ದೆಹಲಿ ಪಾಲಿಕೆ ಚುನಾವಣೆಗಳು ಮುಗಿದಿವೆ. ಹಿಮಾಚಲ ಪ್ರದೇಶದಲ್ಲಿ ಕೂಡ ಕಳೆದ ತಿಂಗಳು ಚುನಾವಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಬಾಂಡ್ ಗಳಿಗೆ ಬೇಡಿಕೆ ಹೆಚ್ಚಿದೆ. ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಲು ಬಯಸುವ ವ್ಯಕ್ತಿ ಅಥವಾ ಸಂಸ್ಥೆಅಥವಾ ಕಂಪನಿಗಳು ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದು. ಎಸ್ಬಿಐಯ 29 ಅಧಿಕೃತ ಶಾಖೆಗಳಲ್ಲಿ ಚುನಾವಣಾ ಬಾಂಡ್ಗಳು ದೊರೆಯುತ್ತವೆ. 1,000ರೂ., 10,000ರೂ., 1ಲಕ್ಷ ರೂ., 10 ಲಕ್ಷ ರೂ. ಹಾಗೂ 1 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳು ಲಭಿಸುತ್ತವೆ. ಈ ಬಾಂಡ್ ಗಳನ್ನು ಡಿಜಿಟಲ್ ಪಾವತಿ ಅಥವಾ ಚೆಕ್ ಮೂಲಕ ಖರೀದಿಸಬೇಕು. ಇನ್ನು ಚುನಾವಣಾ ಬಾಂಡ್ ಖರೀದಿಗೆ ನಗದು ಬಳಸುವಂತಿಲ್ಲ. ಹೀಗೆ ಖರೀದಿಸಿದ ಚುನಾವಣಾ ಬಾಂಡ್ ಗಳನ್ನು ಖರೀದಿದಾರ ತಾನು ಇಚ್ಛಿಸುವ ರಾಜಕೀಯ ಪಕ್ಷಕ್ಕೆ ನೀಡಬೇಕು. ಹೀಗೆ ಪಡೆದ ಚುನಾವಣಾ ಬಾಂಡ್ ಗಳನ್ನು ರಾಜಕೀಯ ಪಕ್ಷಗಳು 15 ದಿನಗಳೊಳಗೆ ರಿಡೀಮ್ ಮಾಡಬೇಕು.
ಚುನಾವಣಾ ಬಾಂಡ್ ಗಳ ರಿಡೀಮ್ ಮಾಡಿದ ಮೊತ್ತವನ್ನು ಆ ರಾಜಕೀಯ ಪಕ್ಷದ ಖಾತೆಗೆ ಬ್ಯಾಂಕ್ ಗೆ ಬಾಂಡ್ ಜಮೆ ಮಾಡಿದ ದಿನವೇ ಕ್ರೆಡಿಟ್ ಮಾಡಲಾಗುತ್ತದೆ. ಚುನಾವಣಾ ಬಾಂಡ್ ಗಳನ್ನು ಅರ್ಹ ರಾಜಕೀಯ ಪಕ್ಷ ಮಾತ್ರ ಅಧಿಕೃತ ಬ್ಯಾಂಕ್ ಖಾತೆ ಮೂಲಕ ಮಾತ್ರ ನಗದೀಕರಿಸಲು ಅವಕಾಶವಿದೆ.
ರೆಪೋ ದರ ಏರಿಸಿದ ಆರ್‌ಬಿಐ: ಗೃಹ, ವಾಹನ ವಾಣಿಜ್ಯ ಸಾಲದ ಬಡ್ಡಿ ಏರಿಕೆ
ಸರಳವಾಗಿ ಹೇಳೋದಾದ್ರೆ ಯಾವುದೇ ವ್ಯಕ್ತಿಗೆ ಯಾವುದೇ ರಾಜಕೀಯ ಪಕ್ಷಕ್ಕೆ ಹಣ ನೀಡಬೇಕು ಎಂಬ ಬಯಕೆಯಿದ್ರೆ ಆತ ಎಸ್ ಬಿಐಯ ಯಾವುದೇ ಅಧಿಕೃತ ಶಾಖೆಯಿಂದ ಡಿಜಿಟಲ್ ಪಾವತಿ ಅಥವಾ ಚೆಕ್ ನೀಡಿ ಚುನಾವಣಾ ಬಾಂಡ್ ಗಳನ್ನು ಖರೀದಿಸಬಹುದು.
ಯಾರು ಖರೀದಿಸಬಹುದು?
ಭಾರತದ ಯಾವುದೇ ನಾಗರಿಕ ಅಥವಾ ಸಂಸ್ಥೆ ಅಥವಾ ಕಂಪನಿ ಚುನಾವಣಾ ಬಾಂಡ್ ಗಳನ್ನು ಖರೀದಿಸಬಹುದು. ಒಬ್ಬ ವ್ಯಕ್ತಿ ಚುನಾವಣಾ ಬಾಂಡ್ ಗಳನ್ನು ಏಕಾಂಗಿಯಾಗಿ ಅಥವಾ ಇನ್ನೊಬ್ಬ ವ್ಯಕ್ತಿ ಜೊತೆಗೆ ಜಂಟಿಯಾಗಿ ಖರೀದಿಸಬಹುದು. ಎಲ್ಲ ಕೆವೈಸಿ ನಿಯಮಗಳನ್ನು ಪೂರ್ಣಗೊಳಿಸಿದ ಹಾಗೂ ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿದ ಬಳಿಕವಷ್ಟೇ ಚುನಾವಣಾ ಬಾಂಡ್ ಗಳನ್ನು ಖರೀದಿಸಲು ಅವಕಾಶ ನೀಡಲಾಗುತ್ತದೆ. ಇನ್ನು ಚುನಾವಣಾ ಬಾಂಡ್ ನಲ್ಲಿ ಖರೀದಿದಾರನ ಹೆಸರು ಇರೋದಿಲ್ಲ.
ನೋಂದಾಯಿತ ಪಕ್ಷಕ್ಕೆ ಮಾತ್ರ ಅವಕಾಶ
ಇನ್ನು ಚುನಾವಣಾ ಬಾಂಡ್ ಗಳನ್ನು ಸ್ವೀಕರಿಸಲು 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಎ ಅಡಿಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಿಂದಿನ ಲೋಕಸಭಾ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಶೇ.1ಕ್ಕಿಂತ ಕಡಿಮೆ ಮತಗಳನ್ನು ಪಡೆದಿರುವ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಸ್ವೀಕರಿಸಲು ಅವಕಾಶವಿಲ್ಲ.
ಭಾರತದ ಜಿಡಿಪಿ ದರ ನಿರೀಕ್ಷೆ ಶೇ.6.9ಕ್ಕೇರಿಸಿದ ವಿಶ್ವಬ್ಯಾಂಕ್
2022ರ ಅಕ್ಟೋಬರ್ 1 ಮತ್ತು 10 ರ ನಡುವೆ ರಾಜಕೀಯ ಪಕ್ಷಗಳು 22ನೇ ಬಾರಿ ಅನಾಮಧೇಯ ಚುನಾವಣಾ ಬಾಂಡ್‌ಗಳ (ಇಬಿ) ಮಾರಾಟ ನಡೆಸಿ 545 ಕೋಟಿ ರೂ. ಸ್ವೀಕರಿಸಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ದಾಖಲೆಗಳು ತಿಳಿಸಿವೆ.
ಆಸಕ್ತಿಕರ ಸಂಗತಿಯೆಂದ್ರೆ ಚುನಾವಣಾ ಬಾಂಡ್ ಗಳ ಮೂಲಕ ಸ್ವೀಕರಿಸಿದ ಮೊತ್ತದ ಬಗ್ಗೆ ಈ ತನಕ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳು ಬಾಯಿ ಬಿಟ್ಟಿಲ್ಲ. ಇನ್ನು ಚುನಾವಣಾ ಬಾಂಡ್ ಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್ ಮಾರಾಟ ಮಾಡುತ್ತಿರುವ ಕಾರಣ ಯಾವ ರಾಜಕೀಯ ಪಕ್ಷಕ್ಕೆ ಯಾರು ಹಣ ನೀಡುತ್ತಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ತಿಳಿಯುತ್ತದೆ ಎಂದೂ ಹೇಳಲಾಗಿದೆ.
