ಭಾರತದ ಜಿಡಿಪಿ ದರ ನಿರೀಕ್ಷೆ ಶೇ.6.9ಕ್ಕೇರಿಸಿದ ವಿಶ್ವಬ್ಯಾಂಕ್
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳ ಹೊರತಾಗಿಯೂ 2022-23ನೇ ಸಾಲಿನಲ್ಲಿ ಭಾರತ ಉತ್ತಮ ಆರ್ಥಿಕ ಬೆಳವಣಿಗೆ ಕಾಣುತ್ತಿದ್ದು ಶೇ.6.9ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಇದು ಈ ಹಿಂದೆ ಸ್ವತಃ ವಿಶ್ವಬ್ಯಾಂಕ್ ಅಂದಾಜಿಸಿದ್ದ ಶೇ.6.5ಕ್ಕಿಂತ ಅಧಿಕ ಎಂಬುದು ವಿಶೇಷ.
ನವದೆಹಲಿ: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳ ಹೊರತಾಗಿಯೂ 2022-23ನೇ ಸಾಲಿನಲ್ಲಿ ಭಾರತ ಉತ್ತಮ ಆರ್ಥಿಕ ಬೆಳವಣಿಗೆ ಕಾಣುತ್ತಿದ್ದು ಶೇ.6.9ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಇದು ಈ ಹಿಂದೆ ಸ್ವತಃ ವಿಶ್ವಬ್ಯಾಂಕ್ ಅಂದಾಜಿಸಿದ್ದ ಶೇ.6.5ಕ್ಕಿಂತ ಅಧಿಕ ಎಂಬುದು ವಿಶೇಷ. ಇದರ ಜೊತೆಗೆ, ಜಾಗತಿಕ ಆರ್ಥಿಕ ಹಿಂಜರಿಕೆಯ ನಡುವೆಯೂ ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಭಾರತದ ಈ ಹಿಂದಿನ ನಿರೀಕ್ಷೆಗಿಂತ ಹೆಚ್ಚಿನ ಪ್ರಗತಿ ಸಾಧಿಸಲಿದೆ ಎಂದು ಹೇಳಿರುವುದು ಇದೇ ಮೊದಲು.
ಬ್ಯಾಂಕ್ ಅಭಿಪ್ರಾಯ ಏನು?:
ಜಾಗತಿಕ ಆರ್ಥಿಕ ಬಿಕ್ಕಟ್ಟಿನ (global financial crisis) ಪರಿಣಾಮಗಳಿಗೆ ಜಗ್ಗದೇ ಭಾರತ ಗಟ್ಟಿಯಾಗಿ ನಿಂತಿರುವುದು ಮತ್ತು ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರಗತಿ ದಾಖಲಾಗಿರುವ ಕಾರಣ ಭಾರತದ ಆರ್ಥಿಕ ಪ್ರಗತಿ ದರವನ್ನು ಶೇ.6.5ರಿಂದ ಶೇ.6.9ಕ್ಕೆ ಹೆಚ್ಚಿಸಲಾಗುತ್ತಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 2022-23ನೇ ಸಾಲಿನ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತ ಶೇ.6.3ರಷ್ಟು ಬೆಳವಣಿಗೆ ಕಂಡಿತ್ತು. ಹಿಂದಿನ ಜೂನ್ ತ್ರೈಮಾಸಿಕದಲ್ಲಿ ದಾಖಲಾಗಿದ್ದ ಶೇ.13.5ರಷ್ಟು ಭಾರೀ ಪ್ರಗತಿಗೆ ಹೋಲಿಸಿದರೆ ಇದು ಭಾರೀ ಕಡಿಮೆಯಾದರೂ, ಉತ್ಪಾದನೆ ಮತ್ತು ಗಣಿ ವಲಯದಲ್ಲಿ ಬೆಳವಣಿಗೆ ಕುಂಠಿತವಾಗಿದ್ದು ಆರ್ಥಿಕ ಪ್ರಗತಿಯನ್ನು (economic growth) ಕೆಳಗೆ ಎಳೆದಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಭಾರತದ ಜಿಡಿಪಿ ಪ್ರಗತಿ ಮುನ್ಸೂಚನೆ 'ಪಾಸಿಟಿವ್' ಆಗಿ ಪರಿಷ್ಕರಿಸಿದ ವಿಶ್ವಬ್ಯಾಂಕ್
ವಿಶ್ವಬ್ಯಾಂಕ್ (World Bank) ಕಳೆದ ಅಕ್ಟೋಬರ್‌ನಲ್ಲಿ ಪ್ರಕಟಿಸಿದ್ದ ತನ್ನ ವರದಿಯಲ್ಲಿ 2022-23ರಲ್ಲಿ ಭಾರತ ಶೇ.6.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು. ಇದು ಅದಕ್ಕೂ ಮುನ್ನ ನುಡಿದಿದ್ದ ಭವಿಷ್ಯವಾದ ಶೇ.7.5ಕ್ಕಿಂತ ಭಾರೀ ಕಡಿಮೆ ಇತ್ತು. ಆದರೆ ಇದೀಗ ಪ್ರಗತಿ ದರ ಶೇ.6.9ರಷ್ಟು ಇರಬಹುದು ಎಂದು ಹೇಳಿದೆ.
ಕಾರಣ ಏನು?
‘ನ್ಯಾವಿಗೇಟಿಂಗ್ ಸ್ಟಾಮರ್’ ಹೆಸರಿನ ತನ್ನ ವರದಿಯಲ್ಲಿ, ಹದಗೆಡುತ್ತಿರುವ ಬಾಹ್ಯ ವಿಷಯಗಳು ಭಾರತದ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರಲಿವೆ. ಆದರೆ ಉಳಿದ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಹೆಚ್ಚು ಸ್ಥಿರವಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರ ನಿಯಂತ್ರಣಕ್ಕೆ ಕೈಗೊಂಡ ವಿತ್ತೀಯ ನೀತಿಗಳು, ಜಾಗತಿಕ ಆರ್ಥಿಕತೆ ಮಂದವಾಗಿರುವುದು, ಸರಕುಗಳ ಬೆಲೆ ಏರಿಕೆಯು ಸಹಜವಾಗಿಯೇ 2021-22ಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆಯನ್ನು 2022-23ರಲ್ಲಿ ಕುಸಿಯುವಂತೆ ಮಾಡಲಿದೆ. ಆದರೆ ಈ ಎಲ್ಲಾ ಸವಾಲುಗಳ ಹೊರತಾಗಿಯೂ, ಎರಡನೇ ತ್ರೈಮಾಸಿಕದಲ್ಲಿನ ಉತ್ತಮ ಪ್ರಗತಿ, ಬೃಹತ್ ಆರ್ಥಿಕತೆ ಸದೃಡವಾಗಿರುವುದು, ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಅವಲಂಬಿಸಿದೆ ಎಂದು ಅದು ವಿವರಿಸಿದೆ.
ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು? ಹೊಸ ತೆರಿಗೆ ನಿಯಮ ಏನ್ ಹೇಳುತ್ತೆ?
‘ಬಾಹ್ಯದ ಪರಿಣಾಮಗಳ ಹೊರತಾಗಿಯೂ ಆರ್ಥಿಕತೆ ಪುನಶ್ಚೇತಗೊಂಡಿರುವ ಕಾರಣ, ನಾವು ಭಾರತದ ಆರ್ಥಿಕ ಪ್ರಗತಿ ದರವನ್ನು ಹಿಂದಿ ಊಹಿಸಿದ್ದ ಶೇ.6.5ರ ಬದಲಾಗಿ ಶೇ.6.9ಕ್ಕೆ ಹೆಚ್ಚಿಸುತ್ತಿದ್ದೇವೆ’ ಎಂದು ವಿಶ್ವಬ್ಯಾಂಕ್‌ನ ಭಾರತದಲ್ಲಿನ ನಿರ್ದೇಶಕ ಆಗಸ್ಟೆಟನೋ (World Bank India Director Augustetano) ಹೇಳಿದ್ದಾರೆ. ಜೊತೆಗೆ 2023-24ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.6.6ರಷ್ಟಿರಲಿದೆ ಎಂದು ಹೇಳಿದ್ದಾರೆ.