ಮುಂಬೈ/ನವದೆಹಲಿ [ಮಾ.08]: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಸ್ವಾಮ್ಯದ ಯಸ್‌ ಬ್ಯಾಂಕ್‌ನ ಶೇ.49ರಷ್ಟುಷೇರುಗಳನ್ನು ಖರೀದಿಸುವುದಾಗಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶನಿವಾರ ಘೋಷಿಸಿದೆ. ಯಸ್‌ ಬ್ಯಾಂಕ್‌ ಪುನಶ್ಚೇತನದ ನಿಟ್ಟಿನಲ್ಲಿ ಆರ್‌ಬಿಐ ರೂಪಿಸಿದ್ದ ನಿಯಮಗಳ ಅನ್ವಯ, ಯಸ್‌ ಬ್ಯಾಂಕ್‌ನ 245 ಕೋಟಿ ಷೇರುಗಳನ್ನು ತಲಾ 10 ರು.ನಂತೆ ಖರೀದಿ ಮಾಡುವುದಾಗಿ ಪ್ರಕಟಿಸಿದೆ. ಈ ಮೂಲಕ ಯಸ್‌ ಬ್ಯಾಂಕ್‌ನ ಅತಿದೊಡ್ಡ ಷೇರುದಾರನಾಗಿ ಎಸ್‌ಬಿಐ ಹೊರಹೊಮ್ಮುವುದು ಖಚಿತವಾಗಿದೆ.

ಎಸ್‌ಬಿಐನ ಈ ಕ್ರಮವು ಯಸ್‌ ಬ್ಯಾಂಕ್‌ನಲ್ಲಿ ಗ್ರಾಹಕರು ಇಟ್ಟಿರುವ ಠೇವಣಿಯನ್ನು ಪೂರ್ಣ ಪ್ರಮಾಣದಲ್ಲಿ ಹಿಂದಿರುಗಿಸುವ ಆರ್‌ಬಿಐನ ಯೋಜನೆಗೆ ಇನ್ನಷ್ಟುಬಲ ನೀಡಲಿದೆ ಎನ್ನಲಾಗಿದೆ.

ಈ ನಡುವೆ ಬ್ಯಾಂಕ್‌ ಪುನಶ್ಚೇತನದ ಭಾಗವಾಗಿ ಯಸ್‌ ಬ್ಯಾಂಕ್‌ನಲ್ಲಿ ಸಾಂಸ್ಥಿಕ ಹೂಡಿಕೆದಾರರು ಮಾಡಿರುವ ಸುಮಾರು 10800 ಕೋಟಿ ರು. ಮೌಲ್ಯದ ‘ಪರ್‌ಪೆಚ್ಯುಯಲ್‌ ಬಾಂಡ್‌’ಗಳನ್ನು ಮನ್ನಾ ಮಾಡಲು ಆರ್‌ಬಿಐ ನಿರ್ಧರಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದರ ವಿರುದ್ಧ ಕಾನೂನು ಹೋರಾಟಕ್ಕೂ ಸಾಂಸ್ಥಿಕೆ ಹೂಡಿಕೆದಾರರು ಚಿಂತನೆ ನಡೆಸಿದ್ದಾರೆ.

ಎಸ್‌ಬಿಐ ತೆಕ್ಕೆಗೆ:  ಶನಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಎಸ್‌ಬಿಐ, ‘ಯಸ್‌ ಬ್ಯಾಂಕ್‌ನ 245 ಕೋಟಿ ಷೇರುಗಳನ್ನು ತಲಾ 10 ನಂತೆ ಎಸ್‌ಬಿಐ ಖರೀದಿ ಮಾಡಲಿದೆ. ಇದರ ಒಟ್ಟು ಮೊತ್ತ 2450 ಕೋಟಿ ರು. ಆಗಿರಲಿದೆ. ಜೊತೆಗೆ ಮುಂದಿನ 3 ವರ್ಷಗಳ ಅವಧಿಯಲ್ಲಿ ಯಾವುದೇ ಹಂತದಲ್ಲೂ ಯಸ್‌ ಬ್ಯಾಂಕ್‌ನಲ್ಲಿ ಶೇ.26ಕ್ಕಿಂತ ಷೇರು ಪಾಲು ಕಡಿಮೆಯಾಗದಂತೆ ನೋಡಿಕೊಳ್ಳಲಾಗುವುದು. ಪುನರ್‌ರಚಿತ ಯಸ್‌ ಬ್ಯಾಂಕ್‌ ಹೊಸ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡಿರಲಿದೆ. ಪುನರ್‌ರಚಿತ ಬ್ಯಾಂಕ್‌ನ ಎಲ್ಲಾ ಸಿಬ್ಬಂದಿ ಮುಂದಿನ 1 ವರ್ಷದವರೆಗೆ ಹಾಲಿ ಪಡೆಯುತ್ತಿರುವ ವೇತನವನ್ನೇ ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದೆ.

ಯೆಸ್‌ ಬ್ಯಾಂಕಿನಲ್ಲಿ ವಿತ್‌ಡ್ರಾ ಮಿತಿ ಹೆಚ್ಚಳ, ಒಂದು ಕಂಡೀಷನ್...

ಮೊದಲ ಹಂತದಲ್ಲಿ ಎಸ್‌ಬಿಐ ಶೇ.49ರಷ್ಟುಷೇರು ಖರೀದಿ ಮಾಡುತ್ತಿದೆಯಾದರೂ, ಯಸ್‌ ಬ್ಯಾಂಕ್‌ಗೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಅಗತ್ಯವಿರುವ ಕಾರಣ ಮುಂದಿನ ಹಂತದಲ್ಲಿ ಐಸಿಐಸಿಐ, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್‌, ಕೋಟಕ್‌ ಮಹಿಂದ್ರಾ ಹಾಗೂ ಎಕ್ಸಿಸ್‌ ಬ್ಯಾಂಕುಗಳಿಗೂ ಷೇರು ಪಾಲು ಮಾರಾಟ ಮಾಡಿ ಬಂಡವಾಳ ಸಂಗ್ರಹಿಸಲು ನೆರವಾಗಲಿದೆ ಎನ್ನಲಾಗಿದೆ. ಜೊತೆಗೆ ಯಸ್‌ ಬ್ಯಾಂಕ್‌ನಲ್ಲಿ 8 ಸಾವಿರ ಕೋಟಿ ರು. ಹೂಡಿಕೆ ಮಾಡಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಕೂಡ ಬ್ಯಾಂಕ್‌ ಅನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಪ್ರಯತ್ನಕ್ಕೆ ಕೈಜೋಡಿಸುವ ಸಾಧ್ಯತೆ ಇದೆ.

ಅಭಯ: ಇದಕ್ಕೂ ಮುನ್ನ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಎಸ್‌ಬಿಐ ಮುಖ್ಯಸ್ಥ ರಜನೀಶ್‌ ಕುಮಾರ್‌, ಆರ್‌ಬಿಐ ಬಿಡುಗಡೆ ಮಾಡಿರುವ ಯೋಜನೆ ಕುರಿತು ಬ್ಯಾಂಕ್‌ ಹಾಗೂ ಕಾನೂನು ತಂಡ ಪರಿಶೀಲನೆಯಲ್ಲಿ ತೊಡಗಿದೆ. ತಕ್ಷಣಕ್ಕೆ 2450 ಕೋಟಿ ರು. ಹೂಡಿಕೆ ಮಾಡಬೇಕಾಗಿದೆ ಎಂದು ತಿಳಿಸಿದರು. ಯಸ್‌ ಬ್ಯಾಂಕ್‌ನಿಂದ ಗ್ರಾಹಕರು ಹಣ ಹಿಂಪಡೆಯುವುದಕ್ಕೆ ಮಿತಿ ಹೇರಿದ್ದರೂ, ಗ್ರಾಹಕರ ಹಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು.

10800 ಕೋಟಿ ಮೌಲ್ಯದ ಪರ್‌ಪೆಚ್ಯುಯಲ್‌ ಬಾಂಡ್‌ ಮನ್ನಾ? 

ನವದೆಹಲಿ: ಯಸ್‌ ಬ್ಯಾಂಕ್‌ ಪುನಶ್ಚೇತನದ ಯೋಜನೆಯ ಭಾಗವಾಗಿ, ಬ್ಯಾಂಕ್‌ ವಿತರಿಸಿರುವ ಪರ್‌ಪೆಚ್ಯುಯಲ್‌ (ಶಾಶ್ವತ) ಬಾಂಡ್‌ಗಳನ್ನು ಮನ್ನಾ ಮಾಡಲು ಆರ್‌ಬಿಐ ನಿರ್ಧರಿಸಿರುವುದು ವಿರೋಧಕ್ಕೆ ಕಾರಣವಾಗಿದೆ. ಬಂಡವಾಳ ಸಂಗ್ರಹ ಕಷ್ಟವಾದ ಸಂದರ್ಭದಲ್ಲಿ ಬ್ಯಾಂಕ್‌ಗಳು ಹೆಚ್ಚಿನ ಲಾಭದ ಆಸೆ ತೋರಿಸಿ ಇಂಥ ಪರ್‌ಪೆಚ್ಯುಯಲ್‌ ಬಾಂಡ್‌ಗಳನ್ನು ವಿತರಿಸುತ್ತವೆ.

ಈ ಬಾಂಡ್‌ಗಳನ್ನು ಸಾಮಾನ್ಯವಾಗಿ ಮ್ಯೂಚುವಲ್‌ ಫಂಡ್‌ಗಳು, ಇತರೆ ಬ್ಯಾಂಕ್‌ಗಳು ಖರೀದಿ ಮಾಡುತ್ತವೆ. ಇಂಥ ಬಾಂಡ್‌ಗಳಿಗೆ ಯಾವುದೇ ಮೆಚ್ಯುರಿಟಿ ಅವಧಿ ಇರುವುದಿಲ್ಲ. ಬ್ಯಾಂಕ್‌ಗಳು ಇಂಥ ಬಾಂಡ್‌ಗಳನ್ನು ಮರು ಖರೀದಿ ಮಾಡಲು ಬಯಸಿದಾಗ ಮಾತ್ರವೇ, ಖರೀದಿಸಿದವರು ಅದನ್ನು ಬ್ಯಾಂಕ್‌ಗಳಿಗೆ ಮಾರಾಟ ಮಾಡಬಹುದು. ಇಲ್ಲವೇ ಇವುಗಳನ್ನು ಷೇರುಗಳ ರೀತಿಯಲ್ಲಿ ಷೇರುಪೇಟೆಯಲ್ಲಿ ಮಾರಾಟ ಮಾಡಬಹುದಾಗಿರುತ್ತದೆ.

ಯಸ್‌ ಬ್ಯಾಂಕ್‌ ಕೂಡಾ ಸುಮಾರು 10800 ಕೋಟಿ ರು. ಮೊತ್ತದ ಇಂಥ ಬಾಂಡ್‌ಗಳನ್ನು ಬಿಡುಗಡೆ ಮಾಡಿತ್ತು. ಆದರೆ ನಿಯಮಗಳ ಅನ್ವಯವೇ ಇಂಥ ಬಾಂಡ್‌ಗಳನ್ನು ಮನ್ನಾ ಮಾಡಲು ನಿರ್ಧರಿಸಿದೆ. ಅಂದರೆ ಇಂಥ ಬಾಂಡ್‌ ಖರೀದಿಸಿದರೆ ಬಡ್ಡಿ ಜೊತೆಗೆ ಅಸಲಿನ ಹಣವೂ ನಷ್ಟ. ಇದರಲ್ಲಿ ಗ್ರಾಹಕರಿಗೆ ನೇರವಾಗಿ ಯಾವುದೇ ನಷ್ಟಇಲ್ಲ. ಇವುಗಳನ್ನು ಖರೀದಿಸಿದ ದೊಡ್ಡ ಸಾಂಸ್ಥಿಕ ಹೂಡಿಕೆದಾರರು ನಷ್ಟಅನುಭವಿಸಬೇಕಾಗುತ್ತದೆ.

ಹೀಗಾಗಿಯೇ ಆರ್‌ಬಿಐನ ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟಕ್ಕೆ ಇಂಥ ಬಾಂಡ್‌ ಖರೀದಿಸಿದ ಸಂಸ್ಥೆಗಳು ಚಿಂತನೆ ನಡೆಸಿವೆ. ಕಾನೂನು ಬದ್ಧವಾಗಿಯೇ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆಯಾದರೂ, ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪರ್‌ಪೆಚ್ಯುಯಲ್‌ ಬಾಂಡ್‌ಗಳನ್ನು ಮನ್ನಾ ಮಾಡಲಾಗುತ್ತಿದೆ. ಆರ್‌ಬಿಐನ ಈ ಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ಹೂಡಿಕೆದಾರರು ಇಂಥ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನೇ ಕೈಬಿಡುವ ಸಾಧ್ಯತೆ ಇದೆ ಎಂದು ಸಾಂಸ್ಥಿಕೆ ಹೂಡಿಕೆದಾರರು ಎಚ್ಚರಿಸಿದ್ದಾರೆ.

ಹಣ ಹಿಂಪಡೆಯುವುದಕ್ಕೆ ರಿಸವ್‌ರ್‍ ಬ್ಯಾಂಕ್‌ ಮಿತಿ ಹೇರಿದ್ದರೂ ಯಸ್‌ ಬ್ಯಾಂಕ್‌ನಲ್ಲಿರುವ ಗ್ರಾಹಕರ ಹಣಕ್ಕೆ ಯಾವುದೇ ಅಪಾಯವಿಲ್ಲ.

- ರಜನೀಶ್‌ ಕುಮಾರ್‌, ಎಸ್‌ಬಿಐ ಮುಖ್ಯಸ್ಥ