ಮುಂಬೈ(ಮಾ.02): ಸಾರ್ವಜನಿಕ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ, ಭಾರತದಲ್ಲಿ ವಿಮಾನಗಳನ್ನು ಗುತ್ತಿಗೆ ನೀಡುವ ಉದ್ಯಮ ಆರಂಭಿಸುವ ಕುರಿತು ಚಿಂತನೆ ಆರಂಭಿಸಿದೆ.

ಅಹಮದಾಬಾದ್‌ ಬಳಿ ಇರುವ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ ‘ಗುಜರಾತ್‌ ಇಂಟರ್‌ನ್ಯಾಷನಲ್‌ ಫೈನಾನ್ಸ್‌ ಟೆಕ್‌- ಸಿಟಿ’ (ಗಿಫ್ಟ್‌ ಸಿಟಿ)ಯಲ್ಲಿ ಕಚೇರಿ ತೆರೆದು ವಿಮಾನ ಗುತ್ತಿಗೆ ಉದ್ಯಮ ಆರಂಭಿಸುವ ಕಂಪನಿಗಳಿಗೆ ಪ್ರೋತ್ಸಾಹ ನೀಡುವುದಾಗಿ ಫೆ.1ರಂದು ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಬಿಐ ಕುರಿತು ಆಲೋಚನೆ ಆರಂಭಿಸಿದೆ.

ವಿಮಾನ ಗುತ್ತಿಗೆ ಉದ್ಯಮದಲ್ಲಿ ಎಸ್‌ಬಿಐಗೆ ಯಾವುದೇ ಅನುಭವ ಇಲ್ಲ. ಹೀಗಾಗಿ ಆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ವಿದೇಶಿ ಪಾಲುದಾರರಿಗಾಗಿ ಹುಡುಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಚೀನಾ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಚೀನಾ ಈ ಉದ್ಯಮಕ್ಕೆ ಪ್ರವೇಶಿಸಿದೆ. ಜಗತ್ತಿನ ಅತಿದೊಡ್ಡ ವಿಮಾನ ಗುತ್ತಿಗೆ ಕಂಪನಿ ಎನಿಸಿಕೊಂಡಿದೆ. ಭಾರತದಲ್ಲೂ 25 ವಿಮಾನಗಳನ್ನು ಗುತ್ತಿಗೆ ನೀಡುವ ಮೂಲಕ 3ನೇ ಅತಿದೊಡ್ಡ ಕಂಪನಿಯಾಗಿದೆ.