ಅಹಮದಾಬಾದ[ಜು.5] ಭಾರತೀಯ ಸ್ಟೇಟ್ ಬ್ಯಾಂಕ್ ಗುಜರಾತ್ ನ ಶಾಖೆಯ ಖಾತೆಗಳಿಂದ ಫ್ಲಿಪ್ ಕಾರ್ಟ್ ನಲ್ಲಿ ಶಾಪಿಂಗ್ ಮಾಡಿ ನಂತರ ಕ್ಯಾನ್ಸಲ್ ಮಾಡಿದ್ದವರಿಗೆ ಎರಡೆರಡು ಸಾರಿ ಹಣ ಕ್ರೆಡಿಟ್ ಆಗಿದೆ. ಗುಜರಾತ್ ನ ಮೆಹ್ ಸಾನಾ, ಪಠಾಣ್ ಮತ್ತು ಅಹಮದಾಬಾದ್ ಶಾಖೆಗಳ ಖಾತೆದಾರರ ಅಕೌಂಟ್ ಗೆ ಡಬಲ್  ಹಣ ಕ್ರೆಡಿಟ್ ಆಗಿದೆ. ಕ್ಯಾನ್ಸಲ್ ಮಾಡಿದ ದಿನ ಒಂದು ಸಾರಿ ನಂತರ ಎರಡು ದಿನ ಬಿಟ್ಟು ಮತ್ತೊಮ್ಮೆ ಹಣ ಬಂದಿದೆ.

ಎರಡೆರಡು ಸಾರಿ ಹಣ ಬರುವುತ್ತಿರುವುದನ್ನು ಗಮನಿಸಿದ ಗ್ರಾಹಕರು ತಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಈ ಬಗ್ಗೆ ಹೇಳಿದ್ದಾರೆ. ಅವರು ಕೂಡ ಮನಸೋ ಇಚ್ಛೆ ಆನ್ ಲೈನ್ ಖರೀದಿ ಮಾಡಿ ನಂತರ ಕ್ಯಾನ್ಸಲ್ ಮಾಡಿದ್ದಾರೆ. 39 ಖಾತೆಗಳಿಂದ 1090 ಟ್ರಾನ್ಸಾಕ್ಷನ್ ಈ ಬಗೆಯಲ್ಲಿ ನಡೆದಿದ್ದು ಬ್ಯಾಂಕ್ ಗೆ 7 ಕೋಟಿ ರೂ. ನಷ್ಟವಾಗಿದೆ.

ಈ ಮೊದಲು ಈ ರೀತಿ ಆರ್ಡರ್ ಕ್ಯಾನ್ಸಲ್ ಮಾಡಿದ್ದರೆ ಆನ್ ಲೈನ್ ಮಾರಾಟ ತಾಣವೇ ಹಣ ಮರುಪಾವತಿ ಮಾಡುತ್ತಿತ್ತು. ಆದರೆ ಕೆಲ ಸಮಸ್ಯೆಗಳು ಎದುರಾದ ನಂತರ ಮ್ಯಾನುವಲ್ ಪದ್ಧತಿ ಬದಲು ಆಟೋಮ್ಯಾಟಿಕ್ ಪದ್ಧತಿ ಅಳವಡಿಸಿಕೊಳ್ಳಲಾಗಿತ್ತು. ಈಗ ಇದೇ ಬ್ಯಾಂಕಿಗೆ ಮುಳುವಾಗಿದೆ.

ಎಸ್ ಬಿಐ ಇದನ್ನು ವಂಚನೆ ಪ್ರಕರಣ ಎಂದು ಪರಿಗಣಿಸಿದೆ. ಯಾರು ಈ ರೀತಿ ಹಣ ಪಡೆದುಕೊಂಡಿದ್ದಾರೆ, ಅವರ ಖಾತೆಗಳು ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಡೈಲಿ ಬೇಸಿಸ್ ಮೇಲೆ ಸಿಸ್ಟಮ್ ಕೆಲಸ ಮಾಡುತ್ತಿದ್ದದ್ದು ಗೊಂದಲಕ್ಕೆ ಕಾರಣವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ. 2017 ರ ಡಿಸೆಂಬರ್ ವೇಳೆ ಈ ಪ್ರಕರಣ ನಡೆದಿದ್ದು ಡಬಲ್ ಹಣ ಪಡೆದುಕೊಂಡ ಖಾತೆದಾರರನ್ನು ಪತ್ತೆಹಚ್ಚಲಾಗುತ್ತಿದೆ.